ADVERTISEMENT

ಕೆಡಿಪಿ ಸಭೆಯಲ್ಲೇ ಕೈ ಕೈ ಮಿಲಾಯಿಸಿ, ನಿಂದಿಸಿಕೊಂಡ ಬಿಜೆಪಿ – ಕಾಂಗ್ರೆಸ್ ಶಾಸಕರು

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 9:05 IST
Last Updated 5 ಜನವರಿ 2026, 9:05 IST
<div class="paragraphs"><p>ಪರಸ್ಪರ ಕೈ ಕೈ ಮಿಲಾಯಿಸಿದ ಶಾಸಕರಾದ ಡಾ. ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಭೀಮರಾವ್ ಪಾಟೀಲ್</p></div>

ಪರಸ್ಪರ ಕೈ ಕೈ ಮಿಲಾಯಿಸಿದ ಶಾಸಕರಾದ ಡಾ. ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಭೀಮರಾವ್ ಪಾಟೀಲ್

   

ಬೀದರ್: ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಸೋಮವಾರ ಇಲ್ಲಿ ಶಾಸಕರ ಬಲ ಪ್ರದರ್ಶನ, ಕೈ ಕೈ ಮಿಲಾಯಿಸಿದ ಘಟನೆಗೆ ವೇದಿಕೆಯಾಯಿತು. ಹುಮನಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಕಾಂಗ್ರೆಸ್‌ನ ಮೇಲ್ಮನೆ ಸದಸ್ಯ ಭೀಮರಾವ್ ಪಾಟೀಲ್ ಪರಸ್ಪರ ಅವಾಚ್ಯವಾಗಿ ನಿಂದಿಸಿದರು.

‘ಬೀದರ್‌ನ ಗುರುದ್ವಾರದ ಸಮೀಪದ ಸರ್ಕಾರಿ ಜಮೀನನ್ನು ಕೆಲವರು ಒತ್ತುವರಿ ಮಾಡಿ, ನಿವೇಶನಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಿದ್ದಾರೆ. ಇದರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಸಭೆಯಲ್ಲಿ ಡಾ.ಸಿದ್ದಲಿಂಗಪ್ಪ ಪಾಟೀಲ್‌ ಒತ್ತಾಯಿಸಿದರು.

ADVERTISEMENT

ಈ ಮಾತಿನ ಹಿಂದೆಯೇ ಸಿಟ್ಟಿಗೆದ್ದ ಭೀಮರಾವ್ ಪಾಟೀಲ್, ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ತಮ್ಮ ಆಸನದಿಂದ ಎದ್ದು ಸಿದ್ದಲಿಂಗಪ್ಪ ಬಳಿಗೆ ತೆರಳಿ, ಜಗಳಕ್ಕಿಳಿದರು. ಈ ವೇಳೆ ಇಬ್ಬರೂ ಪರಸ್ಪರ ನಿಂದಿಸುತ್ತ ಕೈ ಕೈ ಮಿಲಾಯಿಸಲು ಮುಂದಾದರು. ಪರಿಸ್ಥಿತಿ‌ ಕೈಮೀರುತ್ತಿದ್ದಾಗ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಮಧ್ಯಪ್ರವೇಶಿಸಿ ಇಬ್ಬರನ್ನು ದೂರ ಮಾಡಿ, ಜಗಳ ಬಿಡಿಸಿದರು. ಸಹೋದರ ಎಂಎಲ್‌ಸಿ ಡಾ.ಚಂದ್ರಶೇಖರ ಪಾಟೀಲ್‌ ಅವರು ಭೀಮರಾವ್‌ ಪಾಟೀಲ್‌ ಅವರ ಬೆಂಬಲಕ್ಕೆ ಹೋಗಿ, ಅವರೂ ಸಿದ್ದಲಿಂಗಪ್ಪ ಪಾಟೀಲ್‌ ಅವರತ್ತ ಧಾವಿಸಲು ಯತ್ನಿಸಿದರು. ಈ ಹಂತದಲ್ಲಿ ಸಭೆ ಗೊಂದಲದ ಗೂಡಾಯಿತು.

ಸಚಿವರಾದ ಈಶ್ವರ ಬಿ. ಖಂಡ್ರೆ, ರಹೀಂ ಖಾನ್‌, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ವೇದಿಕೆಯಿಂದ ಕೆಳಗಿಳಿದು ಎರಡೂ ಕಡೆಯವರನ್ನು ಸಮಾಧಾನಗೊಳಿಸಿ, ವಾತಾವರಣ ತಿಳಿಗೊಳಿಸಿದರು. ಆನಂತರ ಅನಿರ್ದಿಷ್ಟ ಅವಧಿಗೆ ಸಭೆ ಮುಂದೂಡಲಾಗಿದೆ ಎಂದು ಸಚಿವ ಈಶ್ವರ ಬಿ. ಖಂಡ್ರೆ ಘೋಷಿಸಿದರು.

ಭೀಮರಾವ್‌ ಪಾಟೀಲ್‌ ಹಾಗೂ ಡಾ.ಸಿದ್ದಲಿಂಗಪ್ಪ ಪಾಟೀಲ್‌ ಹುಮನಾಬಾದ್ ಮತ ಕ್ಷೇತ್ರದವರು. ವಿಷಯ ತಿಳಿಯುತ್ತಿದ್ದಂತೆ ಉಭಯತ್ರರ ಬೆಂಬಲಿಗರು ಅವರ ಮನೆ, ಕಚೇರಿ ಎದುರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಹುಮನಾಬಾದ್‌ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಎಸ್‌ಪಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಶಾಸಕರ ಬಹಿರಂಗ ಕಚ್ಚಾಟವು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದರ ಸಂಕೇತವೇ?

ನಿಷೇಧಾಜ್ಞೆ ಜಾರಿ

ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸೋಮವಾರದಿಂದ (ಜ.5) ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಹುಮನಾಬಾದ್‌ ಪಟ್ಟಣದಲ್ಲಿ ಭಾರತೀಯ ನಾಗರಿಕ ಸಂಹಿತೆ–2023ರ ಕಲಂ 163(1) ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ತಹಶೀಲ್ದಾರ್‌ ಅಂಜುಮ್‌ ತಬಸ್ಸುಮ್‌ ಆದೇಶ ಹೊರಡಿಸಿದ್ದಾರೆ.

ಹುಮನಾಬಾದ್‌ನಲ್ಲಿ ಅಕ್ರಮ ಆರ್‌ಟಿಒ ಚೆಕ್‌ಪೋಸ್ಟ್: ಲೋಕಾಯುಕ್ತ ನ್ಯಾಯಮೂರ್ತಿ

ಕಲಬುರಗಿ: ‘ಬೀದರ್ ಜಿಲ್ಲೆಯ ಹುಮನಾಬಾದ್‌ನಲ್ಲಿ ಅನಧಿಕೃತವಾಗಿ ಆರ್‌ಟಿಒ ಚೆಕ್‌ ಪೋಸ್ಟ್‌ ಕಾರ್ಯನಿರ್ವಹಿಸುತ್ತಿತ್ತು. ವಾಹನಗಳಿಂದ ಗಂಟೆಗೆ ₹8 ಸಾವಿರ ಸಂಗ್ರಹಿಸಲಾಗುತ್ತಿತ್ತು ಎಂಬ ಮಾಹಿತಿ ಇದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಹೇಳಿದರು.

ಸೋಮವಾರ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ‘ಈ ಅಕ್ರಮ ಚೆಕ್‌ಪೋಸ್ಟ್ ಇರುವ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಮಗೆ ಗೊತ್ತೇ ಇರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ’ ಎಂದು ಹೇಳಿದರು.

‘ಈ ಚೆಕ್‌ಪೋಸ್ಟ್‌ನಲ್ಲಿ ಏಜೆಂಟರೇ ತುಂಬಿರುವ ಬಗ್ಗೆ ನಮ್ಮ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಸಹಾಯಕ ಆರ್‌ಟಿಒ ಹೆಸರಿನ ಸ್ಟಿಕ್ಕರ್ ಇದ್ದ ವಾಹನ ನಿಂತಿರುತ್ತಿತ್ತು. ಆದರೆ, ಅಲ್ಲಿ ಅಧಿಕಾರಿಗಳು ಇರುತ್ತಿರಲಿಲ್ಲ. ನಮ್ಮ ಅಧಿಕಾರಿಗಳು ಚೆಕ್‌ಪೋಸ್ಟ್‌ ಫೋಟೊ ತೆಗೆದು ತನಿಖೆ ಶುರು ಮಾಡಿದಾಗ ತೆರವುಗೊಳಿಸಲಾಗಿದೆ. ಈ ಬಗ್ಗೆ ಸಾರಿಗೆ ಇಲಾಖೆಯ ಜಂಟಿ ಆಯುಕ್ತರನ್ನು ಕರೆಸಿಕೊಂಡು ಮಾಹಿತಿ ಪಡೆಯುತ್ತೇವೆ’ ಎಂದರು.

ಜಮೀನೊಂದರ ವಿಷಯದ ಕುರಿತು ಚರ್ಚೆ ಮಾಡುತ್ತಿರುವ ವೇಳೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್‌ ನಿಂದಿಸಿದ್ದಾರೆ. ಅವರ ನಡೆ ಖಂಡನಾರ್ಹ
ಭೀಮರಾವ್‌ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.