ಬೀದರ್: ತಾಲ್ಲೂಕಿನ ಶ್ರೀಮಂಡಲ ಗ್ರಾಮದ ಮುಖ್ಯ ಗ್ರಂಥಾಲಯವು ‘ಅರಿವು ಕೇಂದ್ರ’ವಾಗಿ ಮಾರ್ಪಟ್ಟಿದೆ.
ಈ ಗ್ರಂಥಾಲಯದಲ್ಲಿ ಆರು ಸಾವಿರಕ್ಕೂ ಅಧಿಕ ಪುಸ್ತಕಗಳ ಸಂಗ್ರಹವಿದೆ. ಎಲ್ಲಾ ವಯೋಮಾನದವರ ಆಸಕ್ತಿಗೆ ಅನುಗುಣವಾದ ಪುಸ್ತಕಗಳು ಇಲ್ಲಿದ್ದು, ಎಲ್ಲಾ ತರಹದ ಜನರ ಆಕರ್ಷಣೆಗೆ ಇದು ಕೂಡ ಮುಖ್ಯ ಕಾರಣವಾಗಿದೆ.
ಪುಸ್ತಕಗಳೊಂದಿಗೆ ಕನ್ನಡ ಪತ್ರಿಕೆಗಳು, ಮಾಸ ಪತ್ರಿಕೆಗಳು ಕೂಡ ಇಲ್ಲಿ ಸಿಗುತ್ತವೆ. ಕಂಪ್ಯೂಟರ್ ವ್ಯವಸ್ಥೆಯೂ ಇದೆ. ಅಂತರ್ಜಾಲ ಸೌಲಭ್ಯ ಇರುವುದರಿಂದ ಗೂಗಲ್ ಮೂಲಕ ಅಗತ್ಯ ಮಾಹಿತಿ ಕೂಡ ಪಡೆಯಬಹುದು. ಮುದ್ರಣ ಹಾಗೂ ಡಿಜಿಟಲ್ ಸೌಲಭ್ಯದ ಮೂಲಕ ಜ್ಞಾನ ವೃದ್ಧಿಗೆ ಇದು ಸಹಕಾರಿಯಾಗಿರುವ ಕಾರಣದಿಂದಲೇ ‘ಅರಿವು ಕೇಂದ್ರ’ ಎಂದು ಗುರುತಿಸಿಕೊಂಡಿದೆ.
ಇಡೀ ಗ್ರಂಥಾಲಯವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿದೆ. ಸ್ವಚ್ಛ ಮತ್ತು ಪ್ರಶಾಂತ ವಾತಾವರಣ ಇರುವುದರಿಂದ ಓದುಗರಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ. ಕಿರಿಯರಿಂದ ಹಿರಿಯರವರೆಗೆ ಎಲ್ಲರೂ ನಿತ್ಯ ಇಲ್ಲಿಗೆ ಭೇಟಿ ಕೊಟ್ಟು, ಅವರಿಗಿಷ್ಟವಾದ ಪುಸ್ತಕಗಳನ್ನು ಓದುತ್ತಾರೆ.
ಇದು ಗ್ರಂಥಾಲಯದ ಒಳಗಿನ ಚಿತ್ರಣವಾದರೆ, ಹೊರಭಾಗ ಎಂತಹವರನ್ನೂ ಆಕರ್ಷಿಸುತ್ತದೆ. ಕಾರಣ ಇದರ ಗೋಡೆಗಳ ಮೇಲಿರುವ ವರ್ಲಿ ಕಲೆ. ಸಾಂಪ್ರದಾಯಿಕ ಚಿತ್ರಗಳನ್ನು ವರ್ಲಿಯಲ್ಲಿ ಬಿಡಿಸಲಾಗಿದೆ. ಗ್ರಾಮೀಣ ಕೃಷಿ ಚಟುವಟಿಕೆಗಳನ್ನು ಇದು ಬಿಂಬಿಸುತ್ತದೆ.
‘ಈ ಹಿಂದೆ ಈ ಭಾಗದಲ್ಲಿ ಗ್ರಂಥಾಲಯ ಇರಲಿಲ್ಲ. ಸುಸಜ್ಜಿತ ಗ್ರಂಥಾಲಯ ಆದ ನಂತರ ಓದಲು ಒಂದು ಸ್ಥಳ ಸಿಕ್ಕಂತಾಗಿದೆ. ಅನೇಕ ಬಗೆಯ ಪುಸ್ತಕಗಳಿರುವುದರಿಂದ ನಮಗಿಷ್ಟವಾದುದ್ದನ್ನು ಓದಲು ಅವಕಾಶ ಸಿಕ್ಕಿದೆ. ಇದು ಉತ್ತಮ ಕೆಲಸ’ ಎನ್ನುತ್ತಾರೆ ಗ್ರಾಮದ ಬಸವರಾಜ.
ಗ್ರಾಮೀಣ ಭಾಗದ ಜನರ ಜ್ಞಾನ ವೃದ್ಧಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಅರಿವು ಕೇಂದ್ರ ನಿರ್ಮಿಸಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಸಂತಸ ತಂದಿದೆಡಾ.ಗಿರೀಶ ಬದೋಲೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯಿತಿ
15ನೇ ಹಣಕಾಸು ಯೋಜನೆ ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ನಿಧಿಯಿಂದ ಈ ಅರಿವು ಕೇಂದ್ರ ನಿರ್ಮಿಸಲಾಗಿದೆ. ಓದು ಮತ್ತು ಕಲಿಕೆಗೆ ಪೂರಕವಾಗಿದೆಮಾಣಿಕರಾವ್ ಪಾಟೀಲ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ಬೀದರ್