ಬೀದರ್: ‘ಕೆಎಸ್‌ಆರ್‌ಟಿಸಿ ಬಸ್ ಸ್ಟ್ಯಾಂಡ್ ಯಾಕಿಷ್ಟು ಹೊಲಸು?’
ಹೀಗೆ ಪ್ರಶ್ನಿಸಿದ್ದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ. ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಸೋಮವಾರ ಭೇಟಿ ನೀಡಿ, ಅಲ್ಲಿನ ದುರವಸ್ಥೆ ಸಾಕ್ಷಾತ್ ನೋಡಿದ ನಂತರ ಮೇಲಿನಂತೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಬಸ್ ನಿಲ್ದಾಣಕ್ಕೆ ನಿತ್ಯ ನೂರಾರು ಜನ ಬಂದು ಹೋಗುತ್ತಾರೆ. ಆದರೆ, ನಿಲ್ದಾಣವನ್ನು ಸ್ವಚ್ಛವಾಗಿ ಇಟ್ಟುಕೊಂಡಿಲ್ಲ. ಇಲ್ಲಿನ ಶೌಚಾಲಯಗಳ ನಿರ್ವಹಣೆ ಸರಿ ಇಲ್ಲ. ಶೌಚಾಲಯ ಸ್ವಚ್ಛಗೊಳಿಸಲು ಫಿನೈಲ್ ಸೇರಿದಂತೆ ಏನೂ ನೀಡುವುದಿಲ್ಲ. ಪೊರಕೆಯೊಂದನ್ನು ಬಿಟ್ಟರೆ ಏನೂ ನೀಡಿಲ್ಲ. ಅವರಿಗೆ ಸುರಕ್ಷತಾ ಪರಿಕರಗಳನ್ನು ಒದಗಿಸಿಲ್ಲ. ಗುತ್ತಿಗೆ ಆಧಾರದ ಮೇಲೆ ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಿಕೊಂಡರೂ ಅವರಿಗೆ ಅವರ ಖಾತೆಗೆ ಹಣ ಜಮೆ ಮಾಡಬೇಕು. ಅದು ಬಿಟ್ಟು ಕೈಯಿಂದ ನೀಡುತ್ತಿದ್ದಾರೆ ಎಂಬ ವಿಷಯ ಗೊತ್ತಾಗಿದೆ. ಇದು ಸರಿಯಾದ ರೀತಿಯಲ್ಲ ಎಂದು ಅಸಮಾಧಾನ ಹೊರಹಾಕಿದರು.
ಪ್ರಯಾಣಿಕರ ಅನುಕೂಲಕ್ಕಾಗಿ ಕುಡಿಯುವ ನೀರಿನ ಘಟಕ ಇದೆ. ಆದರೆ, ಅದನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಇದರಿಂದಾಗಿ ಅದು ಬಂದ್ ಆಗಿದೆ. ಜನ ಖಾಸಗಿ ಮಳಿಗೆಗಳಲ್ಲಿ ಬಾಟಲ್ ನೀರು ಖರೀದಿಸುವ ಪರಿಸ್ಥಿತಿ ಇದೆ. ಇಡೀ ನಿಲ್ದಾಣದಲ್ಲಿ ಎಂಟು ಸಿಸಿಟಿವಿ ಕ್ಯಾಮೆರಾಗಳಿವೆ. ಅವುಗಳು ಎಲ್ಲಿವೆ ಎಂಬುದೇ ಗೊತ್ತಿಲ್ಲ. ತುರ್ತು ಸಂದರ್ಭಗಳಲ್ಲಿ ಜನ ಯಾರನ್ನೂ ಸಂಪರ್ಕಿಸಬೇಕೆಂಬ ಮಾಹಿತಿ ಎಲ್ಲೂ ಕಂಡು ಬಂದಿಲ್ಲ ಎಂದರು.
ತಾಯಂದಿರು ಮಕ್ಕಳಿಗೆ ಹಾಲುಣಿಸಲು ಸಹಾಯವಾಗಲೆಂದು ಕೊಠಡಿ ಸ್ಥಾಪಿಸಲಾಗಿದೆ. ಆದರೆ, ಅದು ಜನರ ಸೇವೆಗಿಲ್ಲ. ಅದನ್ನು ಸ್ವಚ್ಛಗೊಳಿಸಿಲ್ಲ. ಎಲ್ಲಾ ದೂಳು ಹಿಡಿದಿದೆ. ಅಲ್ಲಿಗೆ ಹೋಗಿ ತಾಯಂದಿರು ಹೇಗೆ ಹಾಲುಣಿಸುತ್ತಾರೆ.
ಬಸ್ ನಿಲ್ದಾಣದ ವಿಭಾಗೀಯ ಸಂಚಾರ ಅಧಿಕಾರಿ ಐ.ಜಿ.ಬಿರಾದಾರ ಹಾಜರಿದ್ದರು.
ಕಣ್ಣೀರು ಹಾಕಿದ ಮಹಿಳೆ
ಕೊಳಾರ ಗ್ರಾಮದ ಮಹಿಳೆಯೊಬ್ಬರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಎದುರು ಗೋಳು ತೋಡಿಕೊಂಡು ಕಣ್ಣೀರು ಹಾಕಿದರು. ಶಾರ್ಟ್ ಸರ್ಕ್ಯೂಟ್‌ನಿಂದ ಹಾನಿಯಾಗಿದೆ. ಆದರೆ, ಪರಿಹಾರ ಸಿಕ್ಕಿಲ್ಲ ಎಂದು ದುಃಖ ತೋಡಿಕೊಂಡರು.
ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ, ಶೀಘ್ರವೇ ಪರಿಹಾರ ಒದಗಿಸಿಕೊಡಬೇಕೆಂದು ನಾಗಲಕ್ಷ್ಮೀ ಚೌಧರಿ ಸೂಚನೆ ನೀಡಿದರು.
ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳ ನಿರ್ವಹಣೆಗೆ ಸರ್ಕಾರದಿಂದ ಅನುದಾನ ಬರುತ್ತದೆ. ಹೀಗಿದ್ದರೂ ಸ್ವಚ್ಛತೆಗೆ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ.–ನಾಗಲಕ್ಷ್ಮೀ ಚೌಧರಿ, ಅಧ್ಯಕ್ಷೆ, ರಾಜ್ಯ ಮಹಿಳಾ ಆಯೋಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.