
ಬೀದರ್: ಜ.12, 13 ಹಾಗೂ 14ರಂದು ಮೂರು ದಿನ ಕೂಡಲಸಂಗಮದಲ್ಲಿ 39ನೇ ಶರಣ ಮೇಳ ಆಯೋಜಿಸಲಾಗುತ್ತಿದೆ ಎಂದು ಶರಣ ಮೇಳದ ಗೌರವಾಧ್ಯಕ್ಷ ಬಸವರಾಜ ಬುಳ್ಳಾ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜ.13ರಂದು ಬೆಳಿಗ್ಗೆ 10.30 ಗಂಟೆಗೆ ಉದ್ಘಾಟನೆ ಸಮಾರಂಭ ಜರುಗಲಿದೆ. ಮಾತೆ ಗಂಗಾದೇವಿ ಹಾಗೂ ಸಿದ್ಧರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲಕುಮಾರ ಶಿಂಧೆ ಉದ್ಘಾಟಿಸುವರು. ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ತರಂಗಿಣಿ ಕೃತಿ ಲೋಕಾರ್ಪಣೆ ಮಾಡುವರು. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಧ್ವಜಾರೊಹಣ ನೆರವೇರಿಸುವರು. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು’ ಎಂದರು.
‘ಇದೇ ವೇಳೆ ಸ್ವಾಮಿ ಲಿಂಗಾನಂದ ಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಗೋ.ರು. ಚನ್ನಬಸಪ್ಪ ಅವರಿಗೆ, ಬಸವಾತ್ಮಜ ರಾಷ್ಟ್ರೀಯ ಪ್ರಶಸ್ತಿಯನ್ನು ಗಾಯಕಿ ಸಂಗೀತಾ ಕಟ್ಟಿ ಅವರಿಗೆ ಪ್ರದಾನ ಮಾಡಲಾಗುತ್ತದೆ. ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರಿಗೆ ಶರಣ ಕಾಯಕರತ್ನ ಪ್ರಶಸ್ತಿ ಹಾಗೂ ಪತ್ರಕರ್ತ ರವಿ ಮೂಕಿ ಅವರಿಗೆ ಶರಣ ಜ್ಞಾನ ರತ್ನ ಪ್ರಶಸ್ತಿ ಪ್ರದಾನ ಜರುಗಲಿದೆ. ಶರಣ ಮೇಳವು ಸಮಾನತೆ ಮತ್ತು ಸಹೋದರತ್ವ ಬೆಳೆಸಲು ಸಹಕಾರಿಯಾಗಲಿದೆ’ ಎಂದು ತಿಳಿಸಿದರು.
ರಾಷ್ಟ್ರೀಯ ಬಸವದಳದ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಜೊನ್ನಿಕೇರಿ, ಜಿಲ್ಲಾಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ, ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷ ಕುಶಾಲರಾವ ಪಾಟೀಲ ಖಾಜಾಪುರ, ರಾಜೇಂದ್ರಕುಮಾರ ಗಂದಗೆ, ಸುರೇಶ ಸ್ವಾಮಿ, ಸಂಜು ಪಾಟೀಲ, ಕಂಟೆಪ್ಪ ಗಂದಿಗುಡಿ, ಮಲ್ಲಿಕಾರ್ಜುನ ಪಂಚಾಕ್ಷರಿ, ವೀರಶೆಟ್ಟಿ ಪಾಟೀಲ ಮರಖಲ, ಯೋಗೇಶ ಶ್ರೀಗೇರಿ, ನೆಹರು ಸ್ವಾಮಿ, ಗಣೇಶ ಬಿರಾದಾರ, ಉಮೇಶ ಗಾಯತೊಂಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.