
ಬೀದರ್: 12ನೇ ಶತಮಾನದ ಶಿವಶರಣರ ಮಡಿವಾಳ ಮಾಚಿದೇವರ ಜಯಂತಿಯನ್ನು ನಗರದಲ್ಲಿ ಭಾನುವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ನಗರದ ಉದಗೀರ್ ರಸ್ತೆಯಲ್ಲಿರುವ ಮಡಿವಾಳೇಶ್ವರ ವೃತ್ತವನ್ನು ಹೂ, ವಿದ್ಯುತ್ ದೀಪಗಳಿಂದ ಅಲಂಕರಿಸಿ, ಮಾಚಿದೇವರ ಪುತ್ಥಳಿಗೆ ಹೂಮಾಲೆ ಹಾಕಿ ಗೌರವ ಸಮರ್ಪಿಸಿದರು. ಮಡಿವಾಳ ಸಮಾಜದ ನೂರಾರು ಜನ ಬಂದು ಗೌರವ ಸಲ್ಲಿಸಿದರು. ಬಳಿಕ ಮೆರವಣಿಗೆ ನಡೆಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಡಿವಾಳ ಸಮಾಜದ ಸಹಯೋಗದಲ್ಲಿ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮಡಿವಾಳ ಸಮಾಜವು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಇನ್ನೂ ಪ್ರಗತಿ ಸಾಧಿಸಬೇಕಿದೆ. ಸಮಾಜದ ಕುಲ ಕಸುಬಿಗೆ ಬೇಕಾಗುವ ಸೌಲಭ್ಯಗಳ ಈಡೇರಿಕೆಗೆ ಪ್ರಯತ್ನಿಸಲಾಗುವುದು. ಭವನ ನಿರ್ಮಾಣಕ್ಕೆ ಸಮಾಜದವರು ಬೇಡಿಕೆ ಇಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಬೇಡಿಕೆಯಂತೆ ಭವನಕ್ಕಾಗಿ ನಿವೇಶನ ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಮಾತನಾಡಿ, ಮಡಿವಾಳ ಸಮಾಜದ ಅಭಿವೃದ್ಧಿಗಾಗಿ ಮಡಿವಾಳ ಮಾಚಿದೇವರ ಅಭಿವೃದ್ಧಿ ನಿಗಮ ಸ್ಥಾಪಿಸಿ ಅದಕ್ಕೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಎಲ್ಲರೂ ಈ ಅಭಿವೃದ್ದಿ ನಿಗಮದ ಲಾಭ ಪಡೆಯಬೇಕು ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ನಿವೃತ್ತ ಪ್ರಾಚಾರ್ಯ ಶಿವಶರಣಪ್ಪ ಹುಗ್ಗಿ ಪಾಟೀಲ್, ಮಡಿವಾಳ ಮಾಚಿದೇವರು ಎಂದರೆ ಶಕ್ತಿಯ ಪ್ರತೀಕ, ಎಲ್ಲ ಶರಣರನ್ನು ಹಾಗೂ ವಚನ ಸಾಹಿತ್ಯವನ್ನು ಸಂರಕ್ಷಿಸಿದ ಶ್ರೇಯಸ್ಸು ಮಾಚಿದೇವರಿಗೆ ಸಲ್ಲುತ್ತದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜಶೇಖರ ವಟಗೆ, ಮಡಿವಾಳ ಸಮಾಜದ ಕಲಬುರಗಿ ವಲಯ ಕಾರ್ಯಾಧ್ಯಕ್ಷ ದಿಗಂಬರ ಮಡಿವಾಳ, ಮಡಿವಾಳ ಸಮಾಜದ ಬೀದರ್ ಗೌರವಾಧ್ಯಕ್ಷ ಬಾಬುರಾವ ಮಡಿವಾಳ, ಜಿಲ್ಲಾಧ್ಯಕ್ಷ ಸುಭಾಷ ಮಡಿವಾಳ, ಉಪಾಧ್ಯಕ್ಷ ಶ್ರೀನಿವಾಸ ಚೌಧರಿ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಂದಗೂಳ್, ಮಹೇಶ ಮಡಿವಾಳ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.