ADVERTISEMENT

ಹುಲಸೂರ | ಮಳೆಗಾಲದಲ್ಲೇ ಮದ್ರಾಸ್‌ ಐ! ಮುನ್ನೆಚ್ಚರಿಕೆ ಅಗತ್ಯ ಎಂದ ವೈದ್ಯರು

ಪ್ರಜಾವಾಣಿ ವಿಶೇಷ
Published 30 ಜುಲೈ 2023, 5:59 IST
Last Updated 30 ಜುಲೈ 2023, 5:59 IST
ಹುಲಸೂರ ತಾಲ್ಲೂಕಿನ ಸಮೀಪದ ಜಮಖಂಡಿ ಗ್ರಾಮದ ವಿದ್ಯಾರ್ಥಿ ಕೆಂಗಣ್ಣು ಕಾಯಿಲೆಯಿಂದ ಬಳಲುತ್ತಿರುವುದು 
ಹುಲಸೂರ ತಾಲ್ಲೂಕಿನ ಸಮೀಪದ ಜಮಖಂಡಿ ಗ್ರಾಮದ ವಿದ್ಯಾರ್ಥಿ ಕೆಂಗಣ್ಣು ಕಾಯಿಲೆಯಿಂದ ಬಳಲುತ್ತಿರುವುದು     

ಗುರುಪ್ರಸಾದ ಮೆಂಟೆ

ಹುಲಸೂರ: ತಾಲ್ಲೂಕಿನಾದ್ಯಂತ ಹಲವು ಕಡೆಗಳಲ್ಲಿ ಕೆಂಗಣ್ಣು ಕಾಯಿಲೆ(ಮದ್ರಾಸ್‌ ಐ) ಸಮಸ್ಯೆ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆ ವಹಿಸುವುದು ಸೂಕ್ತ ಎಂದು ವೈದ್ಯರು ತಿಳಿಸಿದ್ದಾರೆ.

ತಾಲ್ಲೂಕಿನ ಸಮೀಪದ ಜಮಖಂಡಿ ಗ್ರಾಮಗಳಲ್ಲಿ ಸುಮಾರು 10 ದಿನಗಳ ಹಿಂದೆ ಹಲವಾರು ಮನೆಗಳ ಸದಸ್ಯರು ಈ ಕಾಯಿಲೆಗೆ ತುತ್ತಾಗಿದ್ದರು. ಪ್ರಸ್ತುತ ಮಿರಕಲ, ಗಡಿಗೌಡಗಾಂವ, ಬೇಲೂರ, ಹುಲಸೂರ ಪಟ್ಟಣ ಸೇರಿ ಪಂಚಾಯತ್‌ ವ್ಯಾಪ್ತಿಗೂ ಹರಡಿದ್ದು, ಬಾಧಿತರಲ್ಲಿ ವಿದ್ಯಾರ್ಥಿಗಳು, ವ್ಯಾಪಾರಿಗಳು ಇದ್ದಾರೆ. ಅವರ ಮೂಲಕ ವೇಗವಾಗಿ ಇತರರಿಗೆ ಹರಡುವ ಸಾಧ್ಯತೆ ಇದೆ.

ADVERTISEMENT

ತಾಲ್ಲೂಕಿನ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಿತ್ಯ ಹತ್ತಾರು ಮಂದಿ ಕಣ್ಣು ಕೆಂಪಗಾಗಿಸಿಕೊಂಡು ಎಡತಾಕುತ್ತಿದ್ದಾರೆ. ಹಲವು ಶಾಲಾ ಮಕ್ಕಳಲ್ಲೂ ಸಮಸ್ಯೆ ಕಾಣಿಸಿಕೊಂಡಿದ್ದು ಅವರೆಲ್ಲ ಶಾಲೆಯಿಂದ ದೂರ ಉಳಿದು ಮನೆಯಲ್ಲಿ ಉಪಚಾರ ಮಾಡಿಕೊಳ್ಳುತ್ತಿದ್ದಾರೆ.

ಮುನ್ನೆಚ್ಚರಿಕೆ ಅಗತ್ಯ: ಈ ಬಗ್ಗೆ ಬಜಪೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಚಾರಿಸಿದಾಗ ಕೆಂಗಣ್ಣು ಸಮಸ್ಯೆ ಬಗ್ಗೆ ಸೂಕ್ತ ಮುನ್ನೆಚ್ಚರಿಕೆ ವಹಿಸುವುದರಿಂದ ಈ ಕಾಯಿಲೆಯಿಂದ ದೂರ ಇರಬಹುದು ಎಂದು ತಿಳಿಸಿದರು.

ಏನಿದು ಕಾಯಿಲೆ?

‘ಮದ್ರಾಸ್‌ ಐ’ ಎಂದು ಕರೆಯಲ್ಪಡುವ ಕೆಂಗಣ್ಣು ಅಥವಾ ಕಂಜಕ್ಟಿವಿಟಿಸ್‌ಗೆ ಕಾರಣ ವೈರಾಣು ಅಥವಾ ಬ್ಯಾಕ್ಟೀರಿಯಾ ಸೋಂಕು. ಕಣ್ಣಿನ ಬಿಳಿಭಾಗದ ಮೇಲ್ಮೈ ಮತ್ತು ಕಣ್ಣಿನ ಒಳಭಾಗ ಉರಿಯೂತಕ್ಕೆ ಈಡಾಗಿ ಕಣ್ಣು ಕೆಂಪು ಅಥವಾ ಗುಲಾಬಿ ಬಣ್ಣ ಹೊಂದಿ ಊದಿಕೊಳ್ಳುವುದು ಇದರ ಲಕ್ಷಣ. ಇದು ಸುಲಭವಾಗಿ ಹರಡುವ ಸೋಂಕು ರೋಗ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗ ಲಕ್ಷಣಗಳನ್ನು ಕಡಿಮೆ ಮಾಡಲು ಐ ಡ್ರಾಪ್‌ನಂತಹ ಔಷಧಗಳನ್ನು ವೈದ್ಯರು ಸೂಚಿಸುತ್ತಾರೆ.

‘ಕೆಂಗಣ್ಣು ರೋಗ ಪ್ರದೇಶದಲ್ಲಿ ಇರುವಾಗ ಕಣ್ಣುಗಳನ್ನು ಮುಟ್ಟಿ ಕೊಳ್ಳದಿರುವುದು, ಆಗಾಗ ಕೈಗಳನ್ನು ತೊಳೆಯುವುದು. ರೋಗಪೀಡಿತರ ಸಂಪರ್ಕದಿಂದ ದೂರ ಇರುವ ಮೂಲಕ ಕೆಂಗಣ್ಣು ಸೋಂಕು ಪ್ರಸರಣ ತಪ್ಪಿಸಬಹುದು’ ಎಂದು ಆಡಳಿತ ವೈದ್ಯಾಧಿಕಾರಿ ಶಶಿಕಾಂತ ಕನ್ನಡೆ ‘ಪ್ರಜಾವಾಣಿಗೆ’ ತಿಳಿಸಿದ್ದಾರೆ.

ಈ ಬಗ್ಗೆ ಆತಂಕ ಪಡೆಯುವ ಅವಶ್ಯಕತೆ ಇಲ್ಲ, ರೋಗ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಸಮೀಪದ ಅರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ..
- ಮಲ್ಲಿಕಾರ್ಜುನ ಹುಮನಾಬಾದೆ, ಮಕ್ಕಳ ತಜ್ಞ
ಈ ಸಮಸ್ಯೆಯು ದೃಷ್ಟಿಯ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ, ದೃಷ್ಟಿ ಸ್ವಲ್ಪ ಸಮಯದವರೆಗೆ ಮಸುಕಾಗಿ ಕಾಣಬಹುದು.
- ಋಷಿಕೇಶ, ವೈದ್ಯಾಧಿಕಾರಿ 
ಮಲ್ಲಿಕಾರ್ಜುನ ಹುಮನಾಬಾದೆ ಮಕ್ಕಳ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.