
ಕಮಲನಗರ: ತಾಲ್ಲೂಕಿನ ಚ್ಯಾಂಡೇಶ್ವರ ಗ್ರಾಮದ ಚಾಂದಬಿಲ್ಲೇಶ್ವರ ಮಂದಿರದಿಂದ ಲಕ್ಷ್ಮೀ ಮಂದಿರದವರೆಗಿನ ರಸ್ತೆಯಲ್ಲಿ ಚರಂಡಿ ನೀರು ನಿಂತಿದ್ದು ಸ್ವಚ್ಛತೆ ಮರೀಚಿಕೆಯಾಗಿದೆ. ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ.
ಮೂಲಸೌಲಭ್ಯ ವಂಚಿತ ಗ್ರಾಮದ ಅಸ್ವಚ್ಛತೆಯ ಆಗರವಾಗಿದ್ದು ಎಲ್ಲೆಡೆ ರಸ್ತೆಗಳ ಮೇಲೆ ಚರಂಡಿಯ ಹೊಲಸು ನೀರು ನಿಲ್ಲುತ್ತದೆ. ಸುತ್ತಲಿನ ವಾತಾರಣದಲ್ಲಿ ದುರ್ವಾಸನೆ ಹಬ್ಬಿದ್ದು ಜನ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಸೊಳ್ಳೆಗಳ ಕಾಟವೂ ವಿಪರೀತವಾಗಿ ಕಾಡುತ್ತಿದೆ. ಅಲ್ಲದೇ ಹೊಲಸು ನೀರು ನಿಂತು ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿದೆ.
‘ಕೊಳಚೆ ನೀರನ್ನು ತೆರವುಗೊಳಿಸಿ ರಸ್ತೆ ಸ್ವಚ್ಛ ಮಾಡಿಸಿ ಎಂದು ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜೆಜೆಎಂ ಕಾಮಗಾರಿ ವೇಳೆ ಅಗೆದ ರಸ್ತೆಗಳನ್ನು ಸರಿಯಾಗಿ ಮುಚ್ಚಿಲ್ಲ. ಹೂಳು ತುಂಬಿರುವ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಅಲ್ಲದೇ ಹೊಸ ರಸ್ತೆ ಹಾಗೂ ಚರಂಡಿ ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದರೆ ಮುಂಬರುವ ದಿನಗಳಲ್ಲಿ ಪಂಚಾಯಿತಿ ಎದುರು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ದಾರಿ ಇಲ್ಲದೆ ರಸ್ತೆ ಮೇಲೆ ಹರಿಯುತ್ತಿದೆ. ಇಂತಹ ಕೊಳಚೆ ನೀರಿನಲ್ಲಿಯೇ ಓಡಾಡುತ್ತಿದ್ದೇವೆ. ಕೂಡಲೇ ಹೊಸ ರಸ್ತೆ ಹಾಗೂ ಚರಂಡಿ ನಿರ್ಮಿಸಿಕೊಡಬೇಕು ಶ್ಯಾಮ ಪಾಟೀಲ ಗ್ರಾಮಸ್ಥ ಚ್ಯಾಂಡೇಶ್ವರದಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಿದ್ದೇವೆ. ಚರಂಡಿಗಳು ಕಿರಿದಾಗಿರುವುದರಿಂದ ಸ್ವಲ್ಪ ದಿವಸದಲ್ಲಿಯೇ ಹೂಳು ತುಂಬಿಕೊಳ್ಳುತ್ತಿದೆ. ಕೂಡಲೇ ಸ್ವಚ್ಛತೆ ಕಾರ್ಯ ಮಾಡಲಾಗುವುದು. ಅಲ್ಲದೇ ಹೊಸ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಇಟ್ಟುಕೊಂಡು ಕಾಮಗಾರಿ ಕೈಗೊಳ್ಳಲಾಗುವುದು ವೆಂಕಟೇಶ ದೇಶಪಾಂಡೆ ಪಿಡಿಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.