ಎಚ್.ಆಂಜನೇಯ
ಬೀದರ್: ‘ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಹರಿಕಾರರು. ಅವರೇ ನಮ್ಮ ಪಾಲಿಗೆ ಅಂಬೇಡ್ಕರ್’ ಎಂದು ಮಾಜಿ ಸಚಿವರೂ ಆದ ಕಾಂಗ್ರೆಸ್ ಮುಖಂಡ ಎಚ್.ಆಂಜನೇಯ ಹೇಳಿದರು.
ಇಡೀ ದೇಶದಲ್ಲಿ ಸಿದ್ದರಾಮಯ್ಯನವರಂತೆ ಯಾವ ಮುಖ್ಯಮಂತ್ರಿಯೂ ಕೆಲಸ ಮಾಡಿಲ್ಲ. ಅವರು ದೇಶದ ನಂಬರ್ ಒನ್ ಮುಖ್ಯಮಂತ್ರಿ ಎಂದು ನಗರದಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿಗಾಗಿ ಜಾತಿ ಜನಗಣತಿ ಸಮೀಕ್ಷೆ ಕೈಗೊಳ್ಳಲಾಗಿದೆ. ಆರಂಭದಲ್ಲಿ ತಾಂತ್ರಿಕ ದೋಷ, ಸಿಬ್ಬಂದಿಗೆ ಸೂಕ್ತ ತರಬೇತಿಯಿಲ್ಲದ ಕಾರಣದಿಂದ ವಿಳಂಬವಾಗಿತ್ತು. ಈಗ ಜಿಪಿಎಸ್ ಆಧಾರಿತ ಆ್ಯಪ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಪರಿಶಿಷ್ಟ ಜಾತಿಯಲ್ಲಿರುವ 101 ಉಪಜಾತಿಯವರು ಸಮೀಕ್ಷೆಯಲ್ಲಿ ಭಾಗವಹಿಸಿ, ಉಪಜಾತಿ ಸೇರಿದಂತೆ ಎಲ್ಲ ವಿವರ ದಾಖಲಿಸಬೇಕು. ಇಂದೇ ಹುಟ್ಟಿದ ಮಗುವಿನಿಂದ ವಯಸ್ಸಾದ ಎಲ್ಲರೂ ಕೂಡ ಸಮೀಕ್ಷೆಯಲ್ಲಿ ಪಾಲ್ಗೊಂಡು ಅಗತ್ಯ ಮಾಹಿತಿ ಸಲ್ಲಿಸಬೇಕು’ ಎಂದು ಸಲಹೆ ಮಾಡಿದರು.
ಒಳಮೀಸಲಾತಿ ಕಲ್ಪಿಸಬೇಕೆಂದು 30–35 ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರಲಾಗಿದೆ. ಹೋರಾಟ ಒಂದೆಡೆಯಾದರೆ, ಸಮೀಕ್ಷೆಯಲ್ಲಿ ಸ್ವಯಂಪ್ರೇರಣೆಯಿಂದ ಪಾಲ್ಗೊಂಡು ನಮ್ಮ ವಿವರ ದಾಖಲಿಸುವುದು ಕೂಡ ಅಷ್ಟೇ ಮುಖ್ಯ. ಎಲ್ಲ ಮಾದಿಗರು ಸಮೀಕ್ಷೆಯಲ್ಲಿ ಮಾದಿಗರೆಂದು ನಮೂದಿಸಬೇಕು. ಮಾದಿಗ ಸಂಘಟನೆಗಳವರು, ಮುಖಂಡರು ಈ ಕುರಿತು ಮಾದಿಗರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.
ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರ ಏಕ ಸದಸ್ಯ ಆಯೋಗದಿಂದ ನ್ಯಾಯ ಸಿಗುವ ವಿಶ್ವಾಸ ಇದೆ. ಪರಿಶಿಷ್ಟ ಜಾತಿಯಲ್ಲಿರುವ ಅನೇಕ ಜಾತಿಗಳು ರಾಜಕೀಯ, ಶೈಕ್ಷಣಿಕವಾಗಿ ಬಹಳ ಹಿಂದುಳಿದಿವೆ. ಸಮೀಕ್ಷೆ ಪೂರ್ಣಗೊಂಡ ನಂತರ ಒಳಮೀಸಲಾತಿಯನ್ನು ಸರ್ಕಾರ ಜಾರಿಗೆ ತರುವ ವಿಶ್ವಾಸವಿದೆ. ಆಗ ವಂಚಿತರಿಗೆ ನ್ಯಾಯ ದೊರಕಲಿದೆ ಎಂದು ಹೇಳಿದರು.
ಮುಖಂಡರಾದ ಚಂದ್ರಕಾಂತ ಹಿಪ್ಪಳಗಾಂವ್, ಪೀಟರ್ ಶ್ರೀಮಂಡಲ್, ವಿಜಯಕುಮಾರ ಜಿ. ರಾಮಕೃಷ್ಣ, ರಾಜು ಕಡ್ಯಾಳ, ವಿಜಯಕುಮಾರ ಕೌಡ್ಯಾಳ, ದೇವದಾಸ ಚಿಂತಲಗೇರಾ, ಕಲಪ್ಪ ವೈದ್ಯ, ಶಾಮಣ್ಣ ಬಂಬುಳಗಿ, ದೇವದಾಸ ತುಮಕುಂಟೆ, ರಮೇಶ ಕಟ್ಟಿತೂಗಾಂವ್, ಕಮಲಾಕರ ಹೆಗಡೆ, ಸುಧಾಕರ ಕೊಳ್ಳೂರ, ಜೀವನ ರಿಕ್ಕೆ, ಶಿವಣ್ಣ ಹಿಪ್ಪಳಗಾಂವ್, ಹರೀಶ ಗಾಯಕವಾಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.