ADVERTISEMENT

ಹುಮನಾಬಾದ್: ನೆಚ್ಚಿನ ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 6:32 IST
Last Updated 14 ಸೆಪ್ಟೆಂಬರ್ 2025, 6:32 IST
ಚಿಟಗುಪ್ಪ ತಾಲ್ಲೂಕಿನ ಬಸೀರಾಪೂರ್ ಗ್ರಾಮದ ರಸ್ತೆ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು 
ಚಿಟಗುಪ್ಪ ತಾಲ್ಲೂಕಿನ ಬಸೀರಾಪೂರ್ ಗ್ರಾಮದ ರಸ್ತೆ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು    

ಚಿಟಗುಪ್ಪ (ಹುಮನಾಬಾದ್): ತಾಲ್ಲೂಕಿನ ಬಸೀರಾಪೂರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕ, ನಾಗಪ್ಪ ಕರಕನ್ನಳ್ಳಿ ಅವರ ವರ್ಗಾವಣೆ ರದ್ದು ಪಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಶನಿವಾರ ಗ್ರಾಮದ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ಎಂದಿನಂತೆ ಶಾಲಾ ಮೈದಾನದಲ್ಲಿ ಪ್ರಾರ್ಥನೆ ಮಾಡಿದ್ದ 1- 8ನೇ ತರಗತಿಯ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಗತಿ ಕೊಠಡಿಯೊಳಗೆ ಕುಳಿತುಕೊಳ್ಳದೆ ಮತ್ತು ಶಿಕ್ಷಕರನ್ನು ಒಳಗಡೆ ಇರಲು ಬಿಡದೆ ಎಲ್ಲಾ ಶಿಕ್ಷಕರಿಗೆ ಹೊರಗಡೆ ಕಳಿಸಿ ಕೊಠಡಿಗಳಿಗೆ ಬೀಗ ಹಾಕಿದ್ದಾರೆ.

ತರಗತಿ ಬಹಿಷ್ಕರಿಸಿ ಕಾಂಪೌಂಡ್ ಹೊರಗೆ ಬಂದ ವಿದ್ಯಾರ್ಥಿಗಳು ಶಾಲಾ ಗೇಟ್‌ಗೆ ಬೀಗಹಾಕಿ ಗೇಟ್ ಬಳಿಯೆ ಕುಳಿತು ಯಾವುದೇ ಕಾರಣಕ್ಕೂ ನಮ್ಮ ನೆಚ್ಚಿನ ಕನ್ನಡ ಶಿಕ್ಷಕ ನಾಗಪ್ಪ ಕರಕನ್ನಳ್ಳಿ ಅವರನ್ನು ಬೇರೆಡೆ ವರ್ಗಾವಣೆ ಮಾಡಬಾರದು. ಅವರ ವರ್ಗಾವಣೆ ಆದೇಶವನ್ನು ಈ ಕೂಡಲೇ ರದ್ದುಗೊಳಿಸಬೇಕು. ಆದೇಶ ಹಿಂಪಡೆಯುವವರೆಗೂ ನಾವು ತರಗತಿ ಒಳಗೆ ಕುಳಿತುಕೊಳ್ಳುವುದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದರು.

ADVERTISEMENT

ಈ ಮಧ್ಯೆ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಮನವೊಲಿಸಿ ಪ್ರತಿಭಟನೆ ಕೈಬಿಡುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾಗ ಪ್ರತಿಭಟನೆ ನಿಲ್ಲಿಸಿ ಎಂದಿನಂತೆ ತರಗತಿಗೆ ಹಾಜರಾದರು.

‘ಇಲ್ಲಿನ ಕನ್ನಡ ಶಿಕ್ಷಕ ನಾಗಪ್ಪ ಕರಕನ್ನಳ್ಳಿ ಅವರು 25 ವರ್ಷ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸರ್ಕಾರ ನಿಯಮ ಅನುಸಾರ ಹೆಚ್ಚುವರಿ ಶಿಕ್ಷಕರಾಗಿ ಆಯ್ಕೆಯಾದ ಪ್ರಯುಕ್ತ ಸೆ.11ರಂದು ತಾಲ್ಲೂಕಿನ ಪೋಲಕಪಳ್ಳಿ ಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಶಿಕ್ಷಕ ನಾಗಪ್ಪ ಕರಕನ್ನಳ್ಳಿ ಸರ್ಕಾರದ ನಿಯಮಾನುಸಾರ ವರ್ಗಾವಣೆ ಆಗಿದೆ. ಆದರೆ ವಿದ್ಯಾರ್ಥಿಗಳು ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ, ನೋಡಿದರೆ ಇಲ್ಲಿಂದ ಕಾಲ್ಕಿತ್ತಲು ಮನಸ್ಸು ಒಪ್ಪುತ್ತಿಲ್ಲ’ ಎಂದು ನೋವಿನಿಂದ ಹೇಳಿದರು. ಈ ಬಗ್ಗೆ ಮಾಹಿತಿ ಪಡೆಯಲು ಹಲವು ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಗೂಡಾಳ್ ಅವರಿಗೆ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ. 

ಶಿಕ್ಷಕರ ವರ್ಗಾವಣೆ ಖಂಡಿಸಿ 15ರಂದು ಗ್ರಾಮಸ್ಥರಿಂದ ಶಾಲೆಯ ಎದುರುಗಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ
ಶ್ರೀಕಾಂತ ಪಾಟೀಲ ಬಸೀರಾಪೂರ್ ಗ್ರಾ.ಪಂ. ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.