
ಬೀದರ್: ಕಬ್ಬಿನ ಬೆಲೆ ನಿಗದಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಧರಣಿ ನಿರತ ರೈತರೊಂದಿಗೆ ಸೋಮವಾರ ನಡೆಸಿದ ಮಾತುಕತೆ ಫಲ ಕೊಡಲಿಲ್ಲ.
ರೈತರು ಪಟ್ಟು ಬಿಡದ ಕಾರಣ ಸಚಿವರು ಅಲ್ಲಿಂದ ಹಿಂತಿರುಗಿದರು. ರೈತರ ಅಹೋರಾತ್ರಿ ಧರಣಿ ಸೋಮವಾರ ಐದನೇ ದಿನವೂ ಮುಂದುವರೆಯಿತು. ಸೋಮವಾರವೂ ಜಿಲ್ಲೆಯ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ರೈತರು ಧರಣಿಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.
ಪ್ರತಿ ಟನ್ ಕಬ್ಬಿಗೆ ₹3,200 ದರ ನಿಗದಿಪಡಿಸಬೇಕೆನ್ನುವುದು ರೈತರ ಹಕ್ಕೊತ್ತಾಯವಾಗಿದೆ. ಜಿಲ್ಲಾಡಳಿತವು ಮೂರು ಸಲ ಕಬ್ಬು ಬೆಳೆಗಾರರ ಸಭೆ ನಡೆಸಿದರೂ ಯಾವುದೇ ತೀರ್ಮಾನಕ್ಕೆ ಬರಲಾಗಿಲ್ಲ. ರೈತರ ಬೇಡಿಕೆ ಈಡೇರಿಲ್ಲ. ಇದರಿಂದ ಆಕ್ರೋಶಗೊಂಡ ರೈತರು ಕಳೆದ ಐದು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಬೀದರ್ ಜಿಲ್ಲಾ ಸಂಯುಕ್ತ ಕಿಸಾನ್ ಮೋರ್ಚಾ (ರೈತ ಸಂಘಗಳ ಒಕ್ಕೂಟ) ನೇತೃತ್ವದಲ್ಲಿ ನಡೆಸಲಾಗುತ್ತಿರುವ ಧರಣಿಗೆ ಬಿಜೆಪಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ.
ಮೊದಲ ಸಲ ಧರಣಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಸಚಿವ ಈಶ್ವರ ಬಿ. ಖಂಡ್ರೆ, ಪ್ರತಿ ಟನ್ ಕಬ್ಬಿಗೆ ₹2,900 ನೀಡಲಾಗುವುದು. ₹2,800 ಜೊತೆಗೆ ರಾಜ್ಯ ಸರ್ಕಾರ ಘೋಷಿಸಿರುವ ₹50 ಹಾಗೂ ಕಾರ್ಖಾನೆಗಳಿಂದ ಪ್ರತಿ ಟನ್‌ಗೆ ₹50 ಒದಗಿಸಲಾಗುವುದು. ಒಟ್ಟು ₹2,900 ಕೊಡುತ್ತೇವೆ. ಇದಕ್ಕಿಂತ ಹೆಚ್ಚಿಗೆ ಕೊಡಲಾಗುವುದಿಲ್ಲ ಎಂದು ಕಾರ್ಖಾನೆಗಳವರು ತಿಳಿಸಿದ್ದಾರೆ. ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ರೈತರು ವಿರೋಧ ಸೂಚಿಸಿದರು. ಪ್ರತಿ ಟನ್ ಕಬ್ಬಿಗೆ ಬೆಳಗಾವಿಯಲ್ಲಿ ₹3,300, ಕಲಬುರಗಿಯಲ್ಲಿ ₹3,200 ನೀಡಲಾಗುತ್ತಿದೆ. ಬೀದರ್ ಜಿಲ್ಲೆಯ ಸಮೀಪದಲ್ಲೇ ಕಲಬುರಗಿ ಇದೆ. ನಮಗೂ ಅದಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಟನ್‌ಗೆ ₹3,200 ದರ ಘೋಷಿಸಬೇಕು. ಬೇರೆ ಜಿಲ್ಲೆಗಳಲ್ಲಿ ಹೆಚ್ಚಿನ ದರ ಕೊಡುತ್ತಿದ್ದಾರೆ. ಇಲ್ಲಿ ಸಕ್ಕರೆ ಕಾರ್ಖಾನೆಯವರು ರಿಕವರಿ ಕದಿಯುತ್ತಿದ್ದಾರೆ. ಹಿಂದೆ ನೀವು ಬಿಎಸ್‌ಎಸ್‌ಕೆ ಅಧ್ಯಕ್ಷರಿದ್ದಾಗ ರಿಕವರಿ ಪ್ರಮಾಣ ಶೇ 11ರಷ್ಟು ತೋರಿಸಿದ್ದೀರಿ. ಈಗ ಹೆಚ್ಚು ಬರಬೇಕು. ಆದರೆ, ಕಡಿಮೆ ತೋರಿಸುತ್ತಿದ್ದಾರೆ. ನಮ್ಮ ಬೇಡಿಕೆ ಈಡೇರಿಸುವ ತನಕ ಧರಣಿ ಕೈಬಿಡುವುದಿಲ್ಲ ಎಂದು ಕಡ್ಡಿ ಮುರಿದಂತೆ ರೈತ ಮುಖಂಡರು ಹೇಳಿದರು.
‘ಮಂಗಳವಾರ ಬೆಂಗಳೂರಿಗೆ ಹೋಗುತ್ತಿದ್ದೇನೆ. ಅಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ, ನಿಮ್ಮ ಬೇಡಿಕೆಯ ಬಗ್ಗೆ ಅವರಿಗೆ ತಿಳಿಸುತ್ತೇನೆ. ಈಗ ಧರಣಿ ಕೈಬಿಡಬೇಕು’ ಎಂದು ಕೋರಿದರು. ರೈತರು ಅದಕ್ಕೆ ಒಪ್ಪಲಿಲ್ಲ. ಸರ್ಕಾರ ನಮ್ಮ ಬೇಡಿಕೆಯನ್ನು ಈಡೇರಿಸಿ, ಘೋಷಿಸುವ ತನಕ ಅಹೋರಾತ್ರಿ ಧರಣಿ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರೈತ ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ, ಸಿದ್ರಾಮಪ್ಪ ಆಣದೂರೆ, ಜಗದೀಶ್ವರ ಬಿರಾದಾರ ಮತ್ತಿತರರು ಪಾಲ್ಗೊಂಡಿದ್ದರು.
‘ರೈತರ ದಾರಿ ತಪ್ಪಿಸುವ ಕೆಲಸ’
‘ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ರಾಜಕೀಯ ವ್ಯಕ್ತಿಗಳು ಭಾಗವಹಿಸುವುದು ಸೂಕ್ತವಲ್ಲ. ಬಿಜೆಪಿ ಮುಖಂಡ, ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಅವರು ರೈತರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಆರೋಪಿಸಿದರು.
ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ರಾಜ್ಯ ಸರ್ಕಾರದ ಬಗ್ಗೆ ಅವಾಚ್ಯವಾಗಿ ಮಾತನಾಡಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಯಾವತ್ತಿಗೂ ರೈತರು ಹಾಗೂ ಕಬ್ಬು ಬೆಳೆಗಾರರ ಪರ ಇದೆ ಎಂದರು.
ಅತಿವೃಷ್ಟಿ ಪರಿಹಾರ ವಿಳಂಬ
ಬೀದರ್ ಜಿಲ್ಲೆಯಾದ್ಯಂತ ರೈತರು ಅತಿವೃಷ್ಟಿಯಿಂದ ತೊಂದರೆಗೆ ಒಳಗಾಗಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ. ಆದರೆ, ಕೆಲವು ತಾಲ್ಲೂಕುಗಳಲ್ಲಿ ರೈತರಿಗೆ ಇದುವರೆಗೆ ಪರಿಹಾರ ಸಿಕ್ಕಿಲ್ಲ ಎಂದು ರೈತ ಮುಖಂಡರು ಸಚಿವ ಈಶ್ವರ ಬಿ. ಖಂಡ್ರೆಯವರ ಗಮನ ಸೆಳೆದರು.
‘ಈಗಾಗಲೇ ಪರಿಹಾರ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೇ ಹಲವರ ಖಾತೆಗೆ ಹಣ ಜಮೆ ಆಗಿದೆ. ಶೀಘ್ರದಲ್ಲೇ ಎಲ್ಲರ ಖಾತೆಗೂ ಪರಿಹಾರದ ಮೊತ್ತ ಜಮೆ ಆಗಲಿದೆ’ ಎಂದು ಸಚಿವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.