ADVERTISEMENT

ಬೀದರ್ | ಸರ್ಕಾರಿ ಶಾಲೆಯಲ್ಲಿ ಬೇಸಿಗೆ ಶಿಬಿರ

ಔರಾದ್‌ ತಾಲ್ಲೂಕಿನ ಸಂತಪುರ ಪ್ರೌಢಶಾಲೆಯ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳಿಂದ ಪಾಠ

​ಪ್ರಜಾವಾಣಿ ವಾರ್ತೆ
Published 15 ಮೇ 2025, 0:30 IST
Last Updated 15 ಮೇ 2025, 0:30 IST
<div class="paragraphs"><p>ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನ ಸಂತಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರು</p></div>

ಬೀದರ್ ಜಿಲ್ಲೆ ಔರಾದ್ ತಾಲ್ಲೂಕಿನ ಸಂತಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರು

   

ಔರಾದ್ (ಬೀದರ್ ಜಿಲ್ಲೆ): ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗಿಂತ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಕಡಿಮೆ ಇಲ್ಲ ಎಂಬ ಸಂದೇಶ ರವಾನಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಸಂತಪುರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದ್ದಾರೆ.

ಫಲಿತಾಂಶ ಹೆಚ್ಚಳದ ಜತೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಸಂತಪುರ ಶಾಲೆಯಲ್ಲಿ ವಿಶೇಷ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಏಪ್ರಿಲ್ 28ರಿಂದ ಆರಂಭವಾದ ಈ ಶಿಬಿರ ಮೇ 25ರ ವರೆಗೆ ನಡೆಯಲಿದ್ದು, ಸುಮಾರು 13 ಗ್ರಾಮಗಳ 86 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ. ಇವರಲ್ಲಿ ಶೇ 60ರಷ್ಟು ವಿದ್ಯಾರ್ಥಿನಿಯರಿದ್ದಾರೆ. ಈ ರೀತಿ ಶಿಬಿರ ನಡೆಸುವಂತೆ ಸರ್ಕಾರ ಆದೇಶ ಹೊರಡಿಸಿಲ್ಲ. ಶಿಕ್ಷಕರೇ ಸ್ವಯಂ ಪ್ರೇರಣೆಯಿಂದ ಮಕ್ಕಳಿಗೆ ಅನುಕೂಲವಾಗಲಿ ಎಂಬ ಕಳಕಳಿಯಿಂದ ಬೇಸಿಗೆ ರಜೆಯಲ್ಲೂ ಒಂದಿಷ್ಟು ಸಮಯ ವಿದ್ಯಾರ್ಥಿಗಳಿಗಾಗಿ ನೀಡುತ್ತಿದ್ದಾರೆ.

ADVERTISEMENT

ಬೆಳಿಗ್ಗೆ 9ರಿಂದ ಬೇಸಿಗೆ ವಿಶೇಷ ತರಗತಿ ನಡೆಯುತ್ತಿದ್ದು, ಮೊದಲಿಗೆ ಒಂದೂವರೆ ಗಂಟೆ ವ್ಯಕ್ತಿತ್ವ ವಿಕಸನ (ಪರೀಕ್ಷೆ ಎದುರಿಸುವ) ಬಗ್ಗೆ ನಿತ್ಯ ಒಬ್ಬ ಸಂಪನ್ಮೂಲ ವ್ಯಕ್ತಿ ಬಂದು ಹೇಳಿ ಕೊಡುತ್ತಾರೆ. ನಂತರ ಎರಡು ಗಂಟೆ ಪಠ್ಯ ವಿಷಯದ ಬಗ್ಗೆ ಶಾಲೆ ಶಿಕ್ಷಕರು ಪಾಠ ಮಾಡುತ್ತಾರೆ. ಶಿಬಿರ ನಡೆಯುವ 28 ದಿನಗಳ ವೇಳಾಪಟ್ಟಿ ಮೊದಲೇ ತಯಾರಿಸಿದ್ದು, ನಿಗದಿತ ದಿನದಂದು ಆಯಾ ಶಿಕ್ಷಕರು, ಸಂಪನ್ಮೂಲ ವ್ಯಕ್ತಿಗಳು ಬಂದು ಪಾಠ ಮಾಡಿ ಹೋಗುತ್ತಾರೆ ಎಂದು ಶಿಬಿರದ ಆಯೋಜಕರೂ ಆದ ಶಿಕ್ಷಕ ಶಿವಲಿಂಗ ಹೇಡೆ ಹೇಳಿದರು.

‘ಶಿಬಿರದಲ್ಲಿ ಕಠಿಣ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜತೆಗೆ ಕಲಿಕೆಯಲ್ಲಿ ಒಂದಿಷ್ಟು ಹಿಂದಿರುವ ಮಕ್ಕಳ ಕಡೆಗೂ ನಿಗಾ ವಹಿಸಲಾಗುತ್ತಿದ್ದು, ಒಟ್ಟಿನಲ್ಲಿ ನಮ್ಮ ಸರ್ಕಾರಿ ಶಾಲೆ ಯಾವ ವಿದ್ಯಾರ್ಥಿಯೂ ಹಿಂದೆ ಬೀಳಬಾರದು ಎಂಬುದು ನಮ್ಮ ಈ ಶಿಬಿರದ ಉದ್ದೇಶ’ ಎಂದು ಹೇಡೆ ತಿಳಿಸಿದ್ದಾರೆ.

ಶಿಬಿರದಲ್ಲಿ ಮಕ್ಕಳ ದೈಹಿಕ, ಬೌದ್ಧಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ಬೇಕಾದ ಮಾರ್ಗದರ್ಶನ ನೀಡಲಾಗುತ್ತಿದೆ. ಕೆಲ ಮಕ್ಕಳಲ್ಲಿ ನಕಾರಾತ್ಮಕ ವಿಚಾರಗಳು ಹೆಚ್ಚಿಗೆ ಕಂಡುಬರುತ್ತಿದ್ದು, ಅದನ್ನು ಬದಲಾಯಿಸುವುದಕ್ಕಾಗಿ ವಿವಿಧ ವಿಷಯಗಳ ತರಬೇತಿ ನೀಡಲಾಗುತ್ತಿದೆ. ವ್ಯಕ್ತಿತ್ವ ವಿಕಸನದ ಪಾಠಗಳಿಂದಾಗಿ ಮಕ್ಕಳ ಮನೋಭಾವದಲ್ಲಿ ಬದಲಾವಣೆಗಳು ಕಂಡುಬರುತ್ತಿದ್ದು, ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ ಎನ್ನುತ್ತಾರೆ ಶಿಕ್ಷಕ ಶಿವಲಿಂಗ ಹೇಡೆ.

‘ಇಂತಹ ಬೇಸಿಗೆ ಬಿಸಿಲಲ್ಲಿ ನಾವು ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದರೂ ಏನೂ ಕಷ್ಟ ಅನಿಸುತ್ತಿಲ್ಲ. ಶಾಲೆಯಲ್ಲಿ ಶುದ್ಧ ನೀರಿದೆ. ಫ್ಯಾನ್ ಇದೆ. ಗಾಳಿ, ಬೆಳಕು ಬರುತ್ತದೆ. ಶಿಬಿರದ ವ್ಯವಸ್ಥೆ ಮಾಡಿದ ನಮ್ಮ ಶಿಕ್ಷಕರಿಗೆ ನಾವು ಆಭಾರಿ’ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಸ್ಪರ್ಧೆ ಎದುರಿಸಲು ಹಾಗೂ ಎಸ್ಎಸ್ಎಲ್‌ಸಿ ಫಲಿತಾಂಶ ಹೆಚ್ಚಿಸಲು ಈ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.
ಅಜಯಕುಮಾರ ದುಬೆ, ಮುಖ್ಯ ಶಿಕ್ಷಕ
ಈ ಶಿಬಿರದಲ್ಲಿ ಒಟ್ಟು 14 ಜನ ಸಂಪನ್ಮೂಲ ವ್ಯಕ್ತಿಗಳು ನಮಗೆ ಸಮಯ ಕೊಟ್ಟಿದ್ದಾರೆ. ಇದರಿಂದ ಮಕ್ಕಳಲ್ಲಿ ಉತ್ಸಾಹ ಹೆಚ್ಚಲಿದೆ.
ಶಿವಲಿಂಗ ಹೇಡೆ, ಬೇಸಿಗೆ ಶಿಬಿರದ ಆಯೋಜಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.