ADVERTISEMENT

ಹುಲಸೂರ: ಗ್ರಾಮೀಣ ಜನರ ಆದಾಯದ ಮೂಲವೇ ಹುಣಸೆ

ಉತ್ತಮ ಗುಣಮಟ್ಟದ ಹುಣಸೆಗೆ ಪ್ರತಿ ಕ್ವಿಂಟಲ್‌ಗೆ ₹32 ಸಾವಿರದವರೆಗೆ ಮಾರಾಟ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2025, 5:44 IST
Last Updated 17 ಮಾರ್ಚ್ 2025, 5:44 IST
ಹುಲಸೂರು ಪಟ್ಟಣ ಹೊರವಲಯದ ಅರವಿಂದ ಬಂಡೆ ಅವರ ಜಮೀನಿನಲ್ಲಿರುವ ಹುಣಸೆ ಮರ
ಹುಲಸೂರು ಪಟ್ಟಣ ಹೊರವಲಯದ ಅರವಿಂದ ಬಂಡೆ ಅವರ ಜಮೀನಿನಲ್ಲಿರುವ ಹುಣಸೆ ಮರ   

ಹುಲಸೂರ: ತಾಲ್ಲೂಕಿನ ಗ್ರಾಮೀಣರಲ್ಲಿ ಬಹುತೇಕರು ಹುಣಸೆ ಹಣ್ಣು ಆಯ್ದು ಬಿಡಿಸಿ, ಹದಮಾಡಿ ಮಾರಾಟ ಮಾಡುವ ಮೂಲಕ ಜೀವನ ರೂಪಿಸಿಕೊಡಿದ್ದಾರೆ.

ಹುಣಸೆ ಹಣ್ಣು ರುಚಿಯಲ್ಲಿ ಹುಳಿಯಾದರೂ ಆರೋಗ್ಯಕ್ಕೆ ಸಿಹಿ ಎಂದರೆ ತಪ್ಪಲ್ಲ. ನೈಸರ್ಗಿಕವಾಗಿ ಬೆಳೆಯುವ ಹುಣಸೆಗೆ ಸದ್ಯ ಮಾರುಕಟ್ಟೆಯಲ್ಲಿ ಈಗ ಹೆಚ್ಚಿನ ಬೇಡಿಕೆ ಬಂದಿದೆ. ತಾಲ್ಲೂಕಿನ ಹಲವೆಡೆ ವ್ಯಾಪಾರಿಗಳು ಮತ್ತು ರೈತರು ಹುಣಸೆ ಬೆಳೆಗಾರರಿಂದ ಹುಣಸೆಕಾಯಿ ಖರೀದಿಸಿ ರಾಶಿ ಹಾಕಿ ಸಂಸ್ಕರಿಸಿ ಹುಣಸೆ ಹಣ್ಣು ಮಾರಾಟ ಮಾಡುತ್ತಿದ್ದಾರೆ.

ತಾಲ್ಲೂಕಿನ ಮುಚಳಂಬ ಮತ್ತು ಭಾಲ್ಕಿ ತಾಲ್ಲೂಕಿನ ಸಾಯಗಾಂವ ಹೋಬಳಿಯಲ್ಲಿ ಹೆಚ್ಚಾಗಿ ಸಿಗುವ ಹುಣಸೆ ಮರಗಳಿಂದ ಹುಣಸೆ ಹಣ್ಣನ್ನು ಬಿಡಿಸಿ ಅದನ್ನು ಮಾರಾಟ ಮಾಡುವುದು ಕಂಡು ಬರುತ್ತಿದೆ.

ADVERTISEMENT

ಟೊಮೆಟೊಗೆ ಪರ್ಯಾಯವಾಗಿರುವ ಹುಣಸೆಗೆ, ಈಚೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುದುರಿದೆ. ಮರವೊಂದರ ಹುಣಸೆ ಕಾಯಿಗಳನ್ನು ₹5 ಸಾವಿರಕ್ಕೆ ಖರೀದಿಸಿದರೆ ಅದರಲ್ಲಿ ಕನಿಷ್ಠ 500ರಿಂದ 1000 ಕೆಜಿವರೆಗೆ ಹುಣಸೆಕಾಯಿ ಸಿಗುತ್ತವೆ. ಸ್ಥಳೀಯ ಮಾರುಕಟ್ಟೆಯಲ್ಲಿ ಈ ಕಾಯಿಗಳನ್ನು ಸಕಾಲಕ್ಕೆ ಉದುರಿಸಿ ಹಣ್ಣು ಮಾರಾಟ ಮಾಡಿದರೆ ಕೆ.ಜಿ ಹುಣಸೆ ಹಣ್ಣಿಗೆ ₹150 ರಿಂದ ₹190ರ ವರೆಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿದೆ.

ತಾಲ್ಲೂಕಿನ ವ್ಯಾಪಾರಿಗಳು ಮರದಿಂದ ಹಣ್ಣುಗಳನ್ನು ತೆಗೆದು ಕಲಬುರಗಿ ಮತ್ತು ಮಹಾರಾಷ್ಟ್ರದ ಉದಗಿರ, ಲಾತೂರ ಮಾರುಕಟ್ಟೆಯಲ್ಲಿ ಹೋಗಿ ಮಾರಾಟ ಮಾಡುತ್ತಾರೆ. ಅಲ್ಲಿಂದ ಬೇರೆ ಬೇರೆ‌ ರಾಜ್ಯಗಳಿಗೆ ಹುಣಸೆ ಹಣ್ಣು ರಫ್ತಾಗುತ್ತದೆ. ಹುಣಸೆ ಹಣ್ಣಿನ ವ್ಯಾಪಾರ ಹುಲಸೂರ ರೈತರಿಗೆ ಬದಲಿ ಆದಾಯದ ಮೂಲವಾಗಿದೆ.

ಈ ಬಾರಿ ಉತ್ತಮ ಬೆಲೆ: ಹುಣಸೆ ಹಣ್ಣಿನ ಇಳುವರಿ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಸಲ ಶೇ 30ರಿಂದ 40ರಷ್ಟು ಮಾತ್ರ ಬೆಳೆ ರೈತರ ಕೈಸೇರಿದೆ. ಇಳುವರಿ ಕುಸಿತ, ಮಾರುಕಟ್ಟೆಯಲ್ಲಿ ಆವಕ ತಗ್ಗಿರುವುದು ಹಾಗೂ ಖರೀದಿ ಬೇಡಿಕೆಯಿಂದಾಗಿ ಧಾರಣೆ ಹೆಚ್ಚುವಂತೆ ಮಾಡಿದೆ.

ಹಿಂದಿನ ವರ್ಷವೂ ಆರಂಭದ ದಿನಗಳಲ್ಲಿ ಉತ್ತಮ ಬೆಲೆ ಸಿಕ್ಕಿತ್ತು. ಕಳೆದ ವರ್ಷದ ಇದೇ ಹೊತ್ತಿಗೆ ಕ್ವಿಂಟಲ್ ಹುಣಸೆ ಗರಿಷ್ಠ ₹26 ಸಾವಿರದವರೆಗೂ ಮಾರಾಟವಾಗಿತ್ತು. ಆವಕ ಹೆಚ್ಚಿದಂತೆ ಹಾಗೂ ಹಣ್ಣಿನ ಗುಣಮಟ್ಟ ಕುಸಿದಂತೆ ಧಾರಣೆಯೂ ಇಳಿಕೆ ಕಂಡಿತ್ತು. ಸರಾಸರಿ ಕ್ವಿಂಟಲ್‌ಗೆ ₹13 ಸಾವಿರದಿಂದ ₹20 ಸಾವಿರದ ವರೆಗೂ ಮಾರಾಟವಾಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಬೆಲೆ ಸಿಗುತ್ತಿದೆ.

ಲಾತುರ ಮಾರುಕಟ್ಟೆಯಲ್ಲಿ ಈಚೆಗೆ ಕ್ವಿಂಟಲ್ ಹುಣಸೆಗೆ ₹32 ಸಾವಿರದವರೆಗೂ ಮಾರಾಟವಾಗಿರುವುದು ಬೆಳೆಗಾರರಲ್ಲಿ ನಗು ಮೂಡಿಸಿದೆ. ಉತ್ತಮ ಗುಣಮಟ್ಟದ ಹುಣಸೆ ಹಣ್ಣು ಕ್ವಿಂಟಲ್‌ಗೆ ಕನಿಷ್ಠ ₹13 ಸಾವಿರದಿಂದ ಗರಿಷ್ಠ ₹32 ಸಾವಿರದವರೆಗೂ ಮಾರಾಟವಾಗಿದೆ.

‘ಫೆಬ್ರುವರಿ ಮಧ್ಯ ಭಾಗದಿಂದ ಎಪಿಎಂಸಿ ಮಾರುಕಟ್ಟೆಗೆ ಹುಣಸೆ ಹಣ್ಣು ಬರುತ್ತಿದ್ದು ಆರಂಭದಿಂದಲೂ ಉತ್ತಮ ಬೆಲೆ ಸಿಗುತ್ತಿದೆ. ಇನ್ನೂ ಎರಡು ತಿಂಗಳು ವಹಿವಾಟು ನಡೆಯಲಿದೆ. ಮಾರ್ಚ್ ತಿಂಗಳಲ್ಲಿ ಹುಣಸೆ ವಹಿವಾಟು ಬಿರುಸು ಪಡೆದುಕೊಳ್ಳುತ್ತದೆ. ಮುಂದಿನ ದಿನಗಳಲ್ಲೂ ಇದೇ ರೀತಿಯ ಧಾರಣೆ ಸಿಗುವ ಸೂಚನೆ ಕಾಣಿಸುತ್ತಿವೆ’ ಎನ್ನುತ್ತಾರೆ ವರ್ತಕ ಬಾಲಾಜಿ.

ಹುಣಸೆಹಣ್ಣು ಬಹುಪಯೋಗಿ

ಹುಣಸೆ ಹಣ್ಣು ಹಾಕಿದ ಸಾರಿನ ರುಚಿ ಹೆಚ್ಚು ಎನ್ನುವ ಕಾರಣಕ್ಕಾಗಿ ಅಡುಗೆಯಲ್ಲಿ ಹುಣಸೆ ಹಣ್ಣಿನ ಬಳಕೆ ಹೆಚ್ಚಿದೆ. ಬರೀ ಸಾಂಬಾರು ಮಾತ್ರವಲ್ಲ. ಚಟ್ನಿ ರೈಸ್ ಬಾತ್ ಹೀಗೆ ಅನೇಕ ಅಡುಗೆಗಳಲ್ಲಿ ಹುಣಸೆ ಹಣ್ಣಿನ ರಸಕ್ಕೆ ಕಾಯಂ ಸ್ಥಾನವಿದೆ. ಅಂತೆಯೇ ಮಾಂಸಾಹಾರದಲ್ಲೂ ಹುಣಸೆ ಹಣ್ಣಿನ ಪಾಲು ಇದೆ. ಚಿಕನ್ ಮಟನ್ ಖಾದ್ಯಗಳಿಗಷ್ಟೇ ಅಲ್ಲ ಮೀನು ಸ್ವಚ್ಛ ಮಾಡಲು ಹುಣಸೆ ಬಳಸುವುದು ವಾಡಿಕೆ. ಅಂತೆಯೇ ಮೀನಿನ ಸಾರ್‌ಗೆ ಹುಣಸೆ ಹಣ್ಣು ಹಾಕಿದರೆ ಅದರ ರುಚಿಯೇ ಬೇರೆ ಅನ್ನುತ್ತಾರೆ ಗೃಹಣಿಯರು. ಹುಣಸೆ ರಸ ಜೀರ್ಣಕ್ರಿಯೆಗೆ ಸಹಕಾರಿ. ತಂಪು ಪಾನೀಯ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ. ಹುಣಸೆ ಹಣ್ಣಿನ ಸೇವನೆಯಿಂದ ಕೊಬ್ಬಿನಾಂಶ ಮಟ್ಟ ನಿಯಂತ್ರಣ ಹೃದಯ ರಕ್ತನಾಳದ ಆರೋಗ್ಯಕ್ಕೂ ಪೂರಕ. ಹುಣಸೆ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ ದೇಹದಲ್ಲಿ ಕೆಟ್ಟ ಕೊಬ್ಬಿನಾಂಶ ಹೊರಹಾಕಿ ರಕ್ತ ಸಂಚಾರ ಸುಗಮಗೊಳಿಸಿ ಹೃದಯ ಬಡಿತ ಸರಾಗವಾಗಿಸುತ್ತದೆ ಎನ್ನುತ್ತಾರೆ ಆಯುರ್ವೇದ ವೈದ್ಯರು.

20 ವರ್ಷಗಳಿಂದ ಹುಣಸೆ ಹಣ್ಣು ವ್ಯಾಪಾರ ಮಾಡುತ್ತಿರುವೆ. ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರ ಅಭಾವದಿಂದ ಹುಣಸೆಹಣ್ಣನ್ನು ಸಮಯಕ್ಕೆ ಸರಿಯಾಗಿ ಉದುರಿಸಲು ಸಾಧ್ಯವಾಗುತ್ತಿಲ್ಲ.
ಅರವಿಂದ ಭಂಡೆ, ಹುಣಸೆ ವ್ಯಾಪಾರಿ
ರೈತರು ಹುಣಸೆಯನ್ನು ಹೊಲಗಳ ಬದುಗಳಲ್ಲಿ ಬೆಳೆದು ಕುಟುಂಬದ ಆರ್ಥಿಕ ಮಟ್ಟ ಹೆಚ್ಚಲು ಅನುಕೂಲ ಮಾಡಿಕೊಳ್ಳಬಹುದು.
ವೈಜಯಂತ ಕದಮ್‌, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಹುಲಸೂರ ಮತ್ತು ಬಸವಕಲ್ಯಾಣ
ರೈತ ಅರವಿಂದ ಬಂಡೆ ಅವರು ಹುಣಸೆ ಹಣ್ಣನ್ನು ಆಯ‌್ದುಕೊಳ್ಳುತ್ತಿರುವುದು
ಬುಟ್ಟಿಯಲ್ಲಿ ಸಂಗ್ರಹಿಸಿಡಲಾದ ಹುಣಸೆ ಹಣ್ಣು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.