ADVERTISEMENT

ವೀರಶೈವ ಲಿಂಗಾಯತರಲ್ಲಿ ಒಗ್ಗಟ್ಟಿದ್ದರೆ ಸಮೃದ್ಧಿ: ಶಂಕರ ಬಿದರಿ

ಅಖಿಲ ಭಾರತ ವೀರಶೈವ ಮಹಾಸಭೆ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 20:48 IST
Last Updated 27 ಸೆಪ್ಟೆಂಬರ್ 2025, 20:48 IST
<div class="paragraphs"><p>ಬಸವಕಲ್ಯಾಣದಲ್ಲಿ ಶನಿವಾರ ರಂಭಾಪುರಿ ವೀರ ಸೋಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ನಡೆದ ದಸರಾ ಧರ್ಮ ಸಮ್ಮೇಳನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ‘ರಂಭಾಪುರಿ ಬೆಳಗು’ ಸಂಚಿಕೆ ಬಿಡುಗಡೆ ಮಾಡಿದರು</p></div>

ಬಸವಕಲ್ಯಾಣದಲ್ಲಿ ಶನಿವಾರ ರಂಭಾಪುರಿ ವೀರ ಸೋಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ನಡೆದ ದಸರಾ ಧರ್ಮ ಸಮ್ಮೇಳನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ‘ರಂಭಾಪುರಿ ಬೆಳಗು’ ಸಂಚಿಕೆ ಬಿಡುಗಡೆ ಮಾಡಿದರು

   

ಬಸವಕಲ್ಯಾಣ: `ವೀರಶೈವ ಲಿಂಗಾಯತರಲ್ಲಿ ಯಾವುದೇ ಭೇದ ಮಾಡದೆ ಒಗ್ಗಟ್ಟಾಗಿದ್ದರೆ ಶಕ್ತಿ ದೊರಕುತ್ತದೆ. ಸಮಾಜ ಸಮೃದ್ಧವಾಗಲು ಸಾಧ್ಯ ಆಗುತ್ತದೆ' ಎಂದು ಅಖಿಲ ಭಾರತ ವೀರಶೈವ ಮಹಾಸಭೆ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಹೇಳಿದರು.

ನಗರದ ಅಕ್ಕ ಮಹಾದೇವಿ ಕಾಲೇಜು ಆವರಣದಲ್ಲಿ ಶನಿವಾರ ರಾತ್ರಿ ನಡೆದ ದಸರಾ ಧರ್ಮ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ADVERTISEMENT

`ಬಸವಣ್ಣನವರು ಹೇಳಿದಂತೆ ಕಾಯಕ ಮಾಡಿ ಉದ್ಧಾರವಾಗಬೇಕು. ದಾಸೋಹವೂ ಕೈಗೊಳ್ಳಬೆಕು. ಯಹೂದಿ, ಜೈನ್, ಸಿಖ್ ರಿಂದ ಪಾಠ ಕಲಿತು ಶಕ್ತಿಮೀರಿ ದುಡಿಯಬೇಕು. ನಮ್ಮ ಕಾಲಮೇಲೆ ನಾವು ನಿಲ್ಲಬೇಕು. ಪ್ರತಿಯೊಂದಕ್ಕೂ ಸರ್ಕಾರವನ್ನು ಅವಲಂಬಿಸಬಾರದು. ಮುಸ್ಲಿಂ ಸಮುದಾಯದವರು ಜಕಾತ್ ನೀಡುವಂತೆ ವೀರಶೈವ ಲಿಂಗಾಯತರು ಸಹ ವಾರ್ಷಿಕ ಆದಾಯದಲ್ಲಿ ಶೇ 2 ರಷ್ಟನ್ನು ಸಮಾಜಕ್ಕಾಗಿ ವಿನಿಯೋಗಿಸಬೇಕು. ಮಹಾಸಭೆಯಿಂದ ಪ್ರತಿ ತಾಲ್ಲೂಕಿನ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಸಹಾಯಕ್ಕಾಗಿ ₹10 ಕೋಟಿ ಒದಗಿಸುವ ಗುರಿಯಿದೆ. ರಾಜ್ಯದಲ್ಲಿ ಒಟ್ಟು ₹2,000 ಕೋಟಿ ಸಂಗ್ರಹವಾಗುವ ಭರವಸೆಯಿದೆ' ಎಂದರು.

ಶಾಸಕ ಬಿ.ಆರ್.ಪಾಟೀಲ ಮಾತನಾಡಿ, `ಎಲ್ಲರೂ ಒಂದಾಗಿದ್ದು ಅಭಿವೃದ್ದಿ ಹೊಂದಬೇಕು. ಚಾತುರ್ವರ್ಣ್ಯ ಪದ್ಧತಿ ಪ್ರತಿಪಾದಿಸುವುದನ್ನು ಒಪ್ಪಬಾರದು' ಎಂದರು. ಮುಗಳನಾಗಾವಿ ಸಿದ್ದಲಿಂಗ ಶಿವಾಚಾರ್ಯರು, ಅಭಿನವ ಶಾಂತವೀರ ಶಿವಾಚಾರ್ಯರು ಮಾತನಾಡಿದರು.  

ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಅವರು ತ್ರಿಪುರಾಂತ ಗವಿಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರಿಗೆ `ಸಾಧನ ಸಿರಿ' ಪ್ರಶಸ್ತಿ ಪ್ರದಾನ ಮಾಡಿದರು. ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ ಮತ್ತು ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ ಹಾಗೂ ನಿರ್ದೇಶಕರನ್ನು ಸನ್ಮಾನಿಸಲಾಯಿತು.

ತಡೋಳಾ ರಾಜೇಶ್ವರ ಶಿವಾಚಾರ್ಯರು, ಹಾರಕೂಡ ಚನ್ನವೀರ ಶಿವಾಚಾರ್ಯರು, ಶಾಸಕ ಶರಣು ಸಲಗರ, ಮಾಜಿ ಶಾಸಕ ರಾಜಶೇಖರ ಪಾಟೀಲ, ಮುಖಂಡರಾದ ಸುನಿಲ ಪಾಟೀಲ, ಸುರೇಶ ಸ್ವಾಮಿ, ಪ್ರೊ.ರುದ್ರೇಶ್ವರ ಸ್ವಾಮಿ ಗೋರಟಾ, ಸೂರ್ಯಕಾಂತ ಶೀಲವಂತ, ಸೂರ್ಯಕಾಂತ ಮಠ ಪಂಢರಗೇರಾ, ಚಂದ್ರಶೇಖರ ಪಾಟಿಲ, ವೀರಣ್ಣ ಶೀಲವಂತ, ಸೋಮಶೇಖರ ವಸ್ತ್ರದ್, ಕಲ್ಪನಾ ಶೀಲವಂತ ಉಪಸ್ಥಿತರಿದ್ದರು.

‘ಅರ್ಧಮರ್ಧ ತಿಳಿದವರಿಂದ ವೀರಶೈವ-ಲಿಂಗಾಯತ ಬೇರೆ ಎಂಬ ಗೊಂದಲ ಸೃಷ್ಟಿ’

ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು ಮಾತನಾಡಿ, `ಏನೂ ತಿಳಿಯದವರಿಗೆ ತಿಳಿಸಬಹುದು. ಆದರೆ, ಅರ್ಧಮರ್ಧ ತಿಳಿದವರಲ್ಲಿ ಸುಧಾರಣೆ ತರುವುದು ಅಸಾಧ್ಯ. ಇಂಥವರೇ ವೀರಶೈವರೇ ಬೇರೆ, ಲಿಂಗಾಯತರೇ ಬೇರೆ ಎಂದು ಹೇಳಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಂವಿಧಾನದಲ್ಲಿ ಆರನೇ ಧರ್ಮಕ್ಕೆ ಆಸ್ಪದವಿಲ್ಲ. ಆದರೂ ಈ ಬಗ್ಗೆ ಹೇಳಿಕೆ ನೀಡುವುದು ಬಿಡುತ್ತಿಲ್ಲ. ವೀರಶೈವ ಧರ್ಮದಲ್ಲಿ ಹುಟ್ಟಿ ಇದಕ್ಕೆ ಅಪಚಾರ ಎಸಗುತ್ತಿರುವುದು ಎಷ್ಟು ಸರಿ' ಎಂದರು.

`ಬಸವಣ್ಣನವರ ಹೆಸರಲ್ಲಿ ಬಾಳು ಬೆಳಗಿಸಿಕೊಂಡ ಕೆಲ ಮಠಾಧೀಶರೇ ಅವರ ವಿಚಾರಗಳಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ನನಗಿಂತ ಕಿರಿಯರಿಲ್ಲ. ಶಿವಭಕ್ತರಗಿಂತ ಹಿರಿಯರಿಲ್ಲ ಎಂಬ ಅವರ ತತ್ವ ಇವರಿಗೆ ನೆನಪು ಆಗುತ್ತಿಲ್ಲ. ನಾವು ನಿರಾಶಾವಾದಿಗಳಲ್ಲ. ಆಶಾವಾದಿಗಳು, ಜವಾಬ್ದಾರಿಯ ಸ್ಥಾನವಾದ ಪೀಠದಲ್ಲಿದ್ದು ಜನರನ್ನು ತಿದ್ದುವ ಕೆಲಸ ಕೈಗೊಳ್ಳುತ್ತಿದ್ದೇವೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.