ADVERTISEMENT

ವಿವೇಚನೆಯಿಂದ ಮತ ಹಕ್ಕು ಚಲಾಯಿಸಿ

ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 14:38 IST
Last Updated 25 ಜನವರಿ 2020, 14:38 IST
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಹೊಸ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಹೊಸ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು   

ಬೀದರ್‌: ‘ದೇಶದ ಸಂವಿಧಾನವು 18 ವರ್ಷ ತುಂಬಿದ ಎಲ್ಲರಿಗೂ ಮತದಾನದ ಹಕ್ಕನ್ನು ಕಲ್ಪಿಸಿದೆ. ಮತದಾನದ ಹಕ್ಕು ಪಡೆದವರು ವಿವೇಚನೆಯಿಂದ ಹಕ್ಕು ಚಲಾಯಿಸಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದು ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಹೇಳಿದರು.

ಇಲ್ಲಿಯ ಜಿಲ್ಲಾ ರಂಗ ಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘18 ವರ್ಷ ತುಂಬಿದ ಎಲ್ಲ ಯುವಕ, ಯುವತಿಯರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಳ್ಳಬೇಕು. ಭವಿಷ್ಯದಲ್ಲಿ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕಾಗಿರುವುದರಿಂದ ರಾಜಕೀಯ ಆಗುಹೋಗುಗಳ ಬಗ್ಗೆಯೂ ಅರಿತುಕೊಳ್ಳಬೇಕು’ ಎಂದು ತಿಳಿಸಿದರು.

‘ಯುವಕರಲ್ಲಿ ಶಿಸ್ತು ಹಾಗೂ ಸಂಯಮ ಅಗತ್ಯ. ಇದರ ಜತೆಗೆ ಸಂಸ್ಕೃತಿಯ ಅರಿವೂ ಇರಬೇಕು. ಈ ಮೂರು ಅಂಶಗಳು ಮೇಳೈಸಿದರೆ ಉತ್ತಮ ಪ್ರಜೆಯಾಗಿ ಗುರುತಿಸಿಕೊಳ್ಳಬಹುದು’ ಎಂದರು.

ADVERTISEMENT

ಸ್ವೀಪ್ ಸಮಿತಿಯ ಜಿಲ್ಲಾ ಸಂಯೋಜಕ ಡಾ.ಗೌತಮ ಅರಳಿ ಮಾತನಾಡಿ, ‘2011ರ ಜನವರಿ 25ರಂದು ಮೊದಲ ಬಾರಿಗೆ ಮತದಾರರ ದಿನ ಆಚರಿಸಲಾಯಿತು. ಮತದಾರರಲ್ಲಿ ಜಾಗೃತಿ ಮೂಡಿಸುವ ದಿಸೆಯಲ್ಲಿ ಪ್ರತಿ ವರ್ಷ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಯುವ ಮತದಾರರಲ್ಲಿ ಜಾಗೃತಿ ಮೂಡಿಸಲು ಪ್ರತಿಯೊಂದು ಕಾಲೇಜಿನಲ್ಲಿ ಎಲೆಕ್ಟ್ರೋಲ್‌ ಲಿಟರಸಿ ಕ್ಲಬ್‌ ಪ್ರಾರಂಭಿಸಿ ಕ್ಯಾಂಪಸ್‌ ರಾಯಭಾರಿಗಳನ್ನು ನೇಮಕ ಮಾಡಲಾಗಿದೆ. 18 ವರ್ಷ ತುಂಬಿದ ಎಲ್ಲ ವಿದ್ಯಾರ್ಥಿಗಳ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಿದ ಕ್ಲಬ್‌ಗಳ ಪ್ರಮುಖರಿಗೆ ಸನ್ಮಾನ ಮಾಡಲಾಗುತ್ತಿದೆ’ ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಲಕ್ಷ್ಮಣ ಪಂಢರಿ ಮಾತನಾಡಿ, ‘ಸಂವಿಧಾನ ದೇಶದ ಪ್ರತಿಯೊಬ್ಬರ ಕೈಗೆ ಮತದಾನ ಎನ್ನುವ ಪ್ರಬಲ ಅಸ್ತ್ರವನ್ನು ನೀಡಿದೆ. ಮತದಾನದ ಹಕ್ಕವನ್ನು ಬಳಸಿಕೊಂಡು ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಮತದಾರರೇ ಅಭಿವೃದ್ಧಿಗೆ ಮುನ್ನುಡಿ ಬರೆಯಬೇಕು’ ಎಂದು ಹೇಳಿದರು.

‘ರಾಜಕಾರಣಿಗಳು ಮಂದಿರ, ಮಸೀದಿ ಹಾಗೂ ಚರ್ಚ್‌ಗಳಿಗೆ ನೆರವು ಕೊಡುವ ಭರವಸೆ ನೀಡಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ರಾಷ್ಟ್ರದ ಅಭಿವೃದ್ಧಿಯ ಹೆಸರಲ್ಲಿ ಯಾರೊಬ್ಬರು ಮತ ಕೇಳಲು ಬರುತ್ತಿಲ್ಲ. ರಾಜಕಾರಣಿಗಳು ಎಷ್ಟೇ ಆಮಿಷ ಒಡ್ಡಿದರೂ ಪ್ರಾಮಾಣಿಕ ಹಾಗೂ ಅರ್ಹರನ್ನು ಆಯ್ಕೆ ಮಾಡುವ ಜವಾಬ್ದಾರಿ ಇಂದಿನ ಯುವ ಮತದಾರರ ಮೇಲೆ ಇದೆ’ ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಉಪನ್ಯಾಸ ನೀಡಿದರು. ಭೂಮರಡ್ಡಿ ಕಾಲೇಜಿನ ವಿದ್ಯಾರ್ಥಿನಿ ಆಶಾ ಪಾಟೀಲ ಮಾತನಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್, ಬೀದರ್‌ ಉಪ ವಿಭಾಗಾಧಿಕಾರಿ ಅಕ್ಷಯ ಶ್ರೀಧರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ಸಿ.ಎಚ್., ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ, ತಹಶೀಲ್ದಾರ್ ಕೀರ್ತಿ ಚಾಲಕ ಇದ್ದರು.

ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯ ಪ್ರಾಚಾರ್ಯ ಶಿವಶಂಕರ ಟೋಕರೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.