
ಬೀದರ್: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
‘ಯಾವುದೇ ಕಾರಣಕ್ಕೂ ಅರ್ಹರು ಯೋಜನೆಯ ವ್ಯಾಪ್ತಿಯಿಂದ ಹೊರಗುಳಿಯಬಾರದು. ಯೋಜನೆಯ ಅನುಷ್ಠಾನ ಕೂಡ ವಿಳಂಬವಾಗಬಾರದು. ಪ್ರತಿ ಹಂತದಲ್ಲೂ ಅಧಿಕಾರಿಗಳು ಗಮನ ವಹಿಸಿ, ಅರ್ಹ ಫಲಾನುಭವಿಗಳಿಗೆ ಸಮರ್ಥವಾಗಿ ಇದರ ಲಾಭ ಸಿಗುವಂತೆ ಮಾಡಬೇಕು’ ಎಂದು ಸೂಚಿಸಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲೆಯಲ್ಲಿ 3,44,896 ಗೃಹಲಕ್ಷ್ಮೀ ಫಲಾನುಭವಿಗಳಿದ್ದಾರೆ. ಮೃತ ಫಲಾನುಭವಿಗಳ ಕುರಿತು ಪ್ರತಿ ತಿಂಗಳು ನಿರಂತರ ಪರಿಷ್ಕರಿಸಬೇಕು. ಗೃಹಲಕ್ಷ್ಮೀ ಯೋಜನೆಯಲ್ಲಿ 2025ರ ಸೆಪ್ಟೆಂಬರ್‌ವರೆಗೆ ₹1,547.49 ಕೋಟಿ ಸಹಾಯಧನ ಡಿ.ಬಿ.ಟಿ. ಮೂಲಕ ಖಾತೆಗಳಿಗೆ ಜಮಾ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ 3,56,422 ಅರ್ಹ ಫಲಾನುಭವಿಗಳಿದ್ದು, 2025ರ ಡಿಸೆಂಬರ್ ವರೆಗೆ ₹462.46 ಕೋಟಿ ಸಬ್ಸಿಡಿ ನೀಡಲಾಗಿದೆ. ಶಕ್ತಿ ಯೋಜನೆಯಡಿ 2026ರ ಜನವರಿ ಅಂತ್ಯದ ವರೆಗೆ ₹11.11 ಕೋಟಿ ಸಲ ಮಹಿಳೆಯರು ಪ್ರಯಾಣಿಸಿದ್ದು ₹327.66 ಕೋಟಿ ಸಂದಾಯವಾಗಿದೆ. ಪ್ರತಿನಿತ್ಯ ಸರಾಸರಿ 1 ಲಕ್ಷ 16 ಸಾವಿರ ಮಹಿಳೆಯರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದರು.
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 13,13,305 ಫಲಾನುಭವಿಗಳಿದ್ದು, 5 ಕೆಜಿ ಅಕ್ಕಿ ಜೊತೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ನೀಡಲಾಗುವ 5 ಕೆಜಿ ಅಕ್ಕಿ ಮೊತ್ತವನ್ನು 2024ರ ಡಿಸೆಂಬರ್ ವರೆಗೆ ಡಿ.ಬಿ.ಟಿ. ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ₹333.28 ಕೋಟಿ ಹಣ ಜಮೆ ಮಾಡಲಾಗಿದೆ ಎಂದು ಹೇಳಿದರು.
ಯುವನಿಧಿ ಯೋಜನೆಯ ಅಡಿಯಲ್ಲಿ ಪದವಿ ಪಡೆದ 15,211 ಮತ್ತು ಡಿಪ್ಲೋಮಾ ಪಡೆದ 375 ಸೇರಿದಂತೆ ಒಟ್ಟು 15,586 ವಿದ್ಯಾರ್ಥಿಗಳಿಗೆ 2025ರ ಆಗಸ್ಟ್ ತನಕ ₹30.10 ಕೋಟಿ ಹಣ ಡಿಬಿಟಿ ಮೂಲಕ ಪವತಿಸಲಾಗಿದೆ. ಯುವನಿಧಿ ಯೋಜನೆಯಲ್ಲಿ ಜಿಲ್ಲೆಯ ಪದವೀಧರರು ನೋಂದಾಯಿತರಾದವರಿಗೆ ಉದ್ಯೋಗ ಹೊಂದಲು ಸರಿಯಾದ ಕೌಶಲ ತರಬೇತಿ, ಮಾರ್ಗದರ್ಶನ ನೀಡಬೇಕು. ಅಧಿಕಾರಿಗಳು ತಾಲ್ಲೂಕು ಮಟ್ಟದಲ್ಲಿ ಯುವನಿಧಿ ಯೋಜನೆಯ ಕುರಿತು ಕ್ಯಾಂಪ್ ಮಾಡಿ ಮಾಹಿತಿ ನೀಡಬೇಕೆಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾ ಅಧಿಕಾರಿ ಕಿಶೋರ ದುಬೆ ಮಾತನಾಡಿ, ಗ್ಯಾರಂಟಿ ಯೋಜನೆಗಳು ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಲಿಖಿತ ರೂಪದಲ್ಲಿ ದೂರು ಸಲ್ಲಿಸಿದ್ದಲ್ಲಿ ಅವರ ಸಮಸ್ಯೆಗೆ ಸ್ಪಂದಿಸಬೇಕು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಲತಾ ಹಾರಕೂಡ, ಮಾರುತಿ ಬಂಗಾರೆ, ಮಹೆಬೂಬ್ ಖಾನ್, ಪೂಜಾ ಜಾರ್ಜ್, ಉದಯಕುಮಾರ ವಾರದ ಮತ್ತಿತರರು ಪಾಲ್ಗೊಂಡಿದ್ದರು.
ಪ್ರತಿ ಹಂತದಲ್ಲಿ ಅಧಿಕಾರಿಗಳು ಗಮನಹರಿಸಲಿಮೃತರ ವಿವರ ಪ್ರತಿ ತಿಂಗಳು ಪರಿಷ್ಕರಿಸಬೇಕು ಯುವನಿಧಿ ಮಾಹಿತಿಗೆ ಕ್ಯಾಂಪ್ ಹಾಕಲು ಸೂಚನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.