ADVERTISEMENT

ಖಾಸಗಿ ಕೊಳವೆಬಾವಿಯೇ ಊರಿನ ಉಸಿರು; ಗ್ರಾಮಸ್ಥರಿಗೆ ಆತಂಕ

ಬೇಸಿಗೆ ಬಂದರೆ ಕಾಕನಾಳ, ಲಂಜವಾಡ ಗ್ರಾಮಗಳಲ್ಲಿ ಸಮಸ್ಯೆ

ಚಂದ್ರಕಾಂತ ಮಸಾನಿ
Published 16 ಮೇ 2019, 4:39 IST
Last Updated 16 ಮೇ 2019, 4:39 IST
ಮಧ್ಯಾಹ್ನದ ಸುಡು ಬಿಸಿಲಲ್ಲೂ ಭಾಲ್ಕಿ ತಾಲ್ಲೂಕಿನ ಕಾಕನಾಳ ಗ್ರಾಮದಲ್ಲಿ ಖಾಸಗಿ ಕೊಳವೆಬಾವಿಯಿಂದ ಕಿರು ನೀರು ಸರಬರಾಜು ಟ್ಯಾಂಕಿನಲ್ಲಿ ಸಂಗ್ರಹಿಸಿದ ನೀರು ಪಡೆದುಕೊಳ್ಳುತ್ತಿರುವ ಗ್ರಾಮಸ್ಥರು
ಮಧ್ಯಾಹ್ನದ ಸುಡು ಬಿಸಿಲಲ್ಲೂ ಭಾಲ್ಕಿ ತಾಲ್ಲೂಕಿನ ಕಾಕನಾಳ ಗ್ರಾಮದಲ್ಲಿ ಖಾಸಗಿ ಕೊಳವೆಬಾವಿಯಿಂದ ಕಿರು ನೀರು ಸರಬರಾಜು ಟ್ಯಾಂಕಿನಲ್ಲಿ ಸಂಗ್ರಹಿಸಿದ ನೀರು ಪಡೆದುಕೊಳ್ಳುತ್ತಿರುವ ಗ್ರಾಮಸ್ಥರು   

ಬೀದರ್‌: ಬೇಸಿಗೆ ಬಂದರೆ ಸಾಕು ಭಾಲ್ಕಿ ತಾಲ್ಲೂಕಿನ ಕಾಕನಾಳ ಹಾಗೂ ಲಂಜವಾಡ ಗ್ರಾಮಸ್ಥರಿಗೆ ಆತಂಕ ಶುರುವಾಗುತ್ತದೆ. ಆರು ವರ್ಷಗಳಿಂದ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಎರಡೂ ಗ್ರಾಮಗಳ ಉಸಿರು ಜಲದಾನಿಗಳಿಂದಾಗಿ ಉಳಿದುಕೊಂಡಿದೆ. ಇಬ್ಬರು ದಾನಿಗಳು ಈ ಗ್ರಾಮಗಳಲ್ಲಿ  ನೀರು ಪೂರೈಸಿ ಮಾನವೀಯತೆ ಮೆರೆಯುತ್ತಿದ್ದಾರೆ.

ಲಂಜವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ತಲಾ ನಾಲ್ಕು ಸಾವಿರ ಜನಸಂಖ್ಯೆ ಹೊಂದಿರುವ ಕಾಕನಾಳ ಹಾಗೂ ಲಂಜವಾಡ ಗ್ರಾಮಗಳಲ್ಲಿ ಸರ್ಕಾರಿ ಕೊಳವೆಬಾವಿಗಳು ಬತ್ತಿವೆ. ಕಾಕನಾಳ ಗ್ರಾಮವನ್ನು ಸೀಳಿಕೊಂಡು ಹೋಗಿರುವ ಕಾರಂಜಾ ನಾಲಾದಲ್ಲಿ ಒಂದು ತೊಟ್ಟೂ ನೀರಿಲ್ಲ. ಎರಡು ಎಕರೆ ಜಮೀನು ಹೊಂದಿರುವ ರೈತ ರಾಮ ಮಾರುತಿ ಮಾಡಗೋಳೆ ಅವರ ಹೊಲದ ಕೊಳವೆಬಾವಿಯಲ್ಲಿ ಮಾತ್ರ ನೀರಿದೆ.

ಕಾಕನಾಳದ ನಲ್ಲಿಗಳಲ್ಲಿ ಮಳೆಗಾಲದಲ್ಲಿ ನಾಲ್ಕು ತಿಂಗಳು ಮಾತ್ರ ನೀರು ಬರುತ್ತದೆ. ಉಳಿದ ಎಂಟು ತಿಂಗಳು ನೀರು ಹೊತ್ತು ತರಬೇಕಾದ ಸ್ಥಿತಿ ಇದೆ. ರಾಮ ಅವರ ಹೊಲದಿಂದ ಕಾಕನಾಳವರೆಗೆ ಪೈಪ್‌ಲೈನ್‌ ಅಳವಡಿಸಿ ಕಿರು ನೀರು ಸರಬರಾಜು ಟ್ಯಾಂಕಿಗೆ ತುಂಬಿಸಲಾಗುತ್ತಿದೆ. ಅಲ್ಲಿಂದಲೇ ಜನ ನೀರು ಒಯ್ಯುತ್ತಿದ್ದಾರೆ.

ADVERTISEMENT

ವಿದ್ಯುತ್‌ ಕೈಕೊಟ್ಟರೆ ಮಾತ್ರ ಕೊಳವೆಬಾವಿಯ ನೀರು ಪೂರೈಕೆ ಬಂದ್‌ ಆಗುತ್ತದೆ. ಇಲ್ಲದಿದ್ದರೆ ನೀರು ಪೂರೈಕೆ ನಿರಂತರವಾಗಿರುತ್ತದೆ. ಹೀಗಾಗಿ ಗ್ರಾಮಸ್ಥರು ದಿನದ 24 ಗಂಟೆಯೂ ಸರತಿ ಸಾಲಿನಲ್ಲಿ ನಿಂತು ನೀರು ಪಡೆಯುತ್ತಿದ್ದಾರೆ.

ನೀರಿನ ಸಮಸ್ಯೆ ಮಧ್ಯೆ ಬದುಕು ನಡೆಸುವುದು ಗ್ರಾಮಸ್ಥರಿಗೆ ಇದೀಗ ರೂಢಿಯಾಗಿದೆ. ಜಲಕುಂಭದ ಹತ್ತಿರ ಇರುವ ಜನರು ಬೆಳಿಗ್ಗೆ ತಲೆಯ ಮೇಲೆ ಕೊಡ ಹೊತ್ತು ನೀರು ಒಯ್ದರೆ, ದೂರದಲ್ಲಿ ಮನೆ ಇರುವವರು ಸಂಜೆ ಸೈಕಲ್‌ ಹಾಗೂ ದ್ವಿಚಕ್ರವಾಹನಗಳಿಗೆ ಕೊಡಗಳನ್ನು ಕಟ್ಟಿಕೊಂಡು ಬಂದು ನೀರು ತುಂಬಿಕೊಂಡು ಹೋಗುತ್ತಿದ್ದಾರೆ.

‘ಗ್ರಾಮದೊಳಗೆ ಕಾಲುವೆ ಹಾಯ್ದು ಹೋದರೂ ಅದರಲ್ಲಿ ನೀರಿಲ್ಲ. ಗ್ರಾಮದ ಸಮೀಪ ನದಿ, ಕೆರೆ ಕಟ್ಟೆಗಳೂ ಇಲ್ಲ. ಪ್ರತಿ ವರ್ಷ ಅಂತರ್ಜಲಮಟ್ಟ ಕುಸಿದು ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಜಲ ದಾನಿಗಳಿಂದಾಗಿಯೇ ಊರಿನ ಜನ ನೆಮ್ಮದಿಯಿಂದ ನೀರು ಕುಡಿಯುತ್ತಿದ್ದಾರೆ’ ಎನ್ನುತ್ತಾರೆ ಕಾಕನಾಳದ ಪಂಚಾಯಿತಿ ಸದಸ್ಯ ಸುಧಾಕರ ಸೂರ್ಯವಂಶಿ.

‘ಕಾಕನಾಳಕ್ಕೆ ರಾಮ ಹಾಗೂ ಲಂಜವಾಡಕ್ಕೆ ಭಾನುಬಾಯಿ ರಾಮಚಂದ್ರ ಅವರ ಮಾಲೀಕತ್ವದ ಕೊಳವೆಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಇವರಿಗೆ ಜಿಲ್ಲಾ ಆಡಳಿತದ ಸೂಚನೆಯಂತೆ ತಿಂಗಳಿಗೆ ₹ 12 ಸಾವಿರ ಗೌರವ ಧನ ನಿಗದಿಪಡಿಸಲಾಗಿದೆ. ಈ ಕೊಳವೆಬಾವಿಗಳಲ್ಲಿ ನೀರು ಇರದಿದ್ದರೆ ಗಂಭೀರ ಪರಿಸ್ಥಿತಿ ಎದುರಿಸಬೇಕಾಗುತ್ತಿತ್ತು’ ಎಂದು ಲಂಜವಾಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ವೇತಾ ಹೇಳುತ್ತಾರೆ.

‘ಜಿಲ್ಲಾ ಪಂಚಾಯಿತಿ ಸದಸ್ಯೆ ಶೀತಲ್ ಚವಾಣ ಅವರೂ ತಮ್ಮ ಹೊಲದಲ್ಲಿರುವ ಕೊಳವೆಬಾವಿಗಳ ಮೂಲಕ ಜನರಿಗೆ ಉಚಿತ ನೀರು ಕೊಡುತ್ತಿದ್ದಾರೆ. ಇವರು ಮೂರು ವರ್ಷಗಳಿಂದ ಜಲ ಸೇವೆ ಮಾಡುತ್ತಿದ್ದಾರೆ’ ಎನ್ನುತ್ತಾರೆ.

‘ದಾನಿಗಳು ಕೊಡುತ್ತಿರುವ ನೀರಿನಿಂದ ಸ್ವಲ್ಪ ಅನುಕೂಲವಾಗಿದೆ. ಆದರೆ, ದನಗಳಿಗೆ ಹೊಟ್ಟೆ ತುಂಬ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಇರುವ ಬಾವಿ ಬತ್ತಿದರೆ ಊರು ಬಿಟ್ಟು ಹೋಗುವುದು ಅನಿವಾರ್ಯವಾಗಲಿದೆ’ ಎಂದು ಜಲಕುಂಭದ ಬಳಿ ನೀರು ತುಂಬಿಕೊಳ್ಳುತ್ತಿದ್ದ ಮಹಿಳೆಯರು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.