ADVERTISEMENT

ಆಲಮಟ್ಟಿ ಜಲಾಶಯ: ಬುರ್ಕಾಧಾರಿ ಯುವಕನ ಬಂಧನ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 7:02 IST
Last Updated 25 ಜುಲೈ 2022, 7:02 IST
   

ವಿಜಯಪುರ: ಸೋಮವಾರ ಬೆಳ್ಳಂಬೆಳಿಗ್ಗೆ ಮಹಿಳೆಯರ ವೇಷದಲ್ಲಿದ್ದ ಯುವಕ ಆಲಮಟ್ಟಿ ಬಳಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯಕ್ಕೆ ನುಗ್ಗಲು ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ.

ನಸುಕಿನಲ್ಲಿ ಆಲಮಟ್ಟಿ ಪರಿಸರದಲ್ಲಿ ಕಾಣಿಸಿಕೊಂಡ ಯುವಕ ಬುರ್ಖಾ ಧರಿಸಿ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯ ಪ್ರವೇಶಕ್ಕೆ ಮುಂದಾಗಿದ್ದಾನೆ. ಈ ವೇಳೆ ಜಲಾಶಯದ ಪ್ರವೇಶ ದ್ವಾರದಲ್ಲಿ ಭದ್ರತೆಗೆ ಇದ್ದ ಪೊಲೀಸರು ಇಷ್ಟು ಬೇಗ ಜಲಾಶಯ ವೀಕ್ಷಣೆಗೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.

ಈ ವೇಳೆ ನಡೆದ ಮಾತುಕತೆಯಲ್ಲಿ ಬುರ್ಖಾ ಧರಿಸಿರುವವ ಮಹಿಳೆಯಲ್ಲ ಪುರುಷ ಎಂಬುದು ಧ್ವನಿಯಿಂದ ಸ್ಪಷ್ಟವಾಗಿದೆ. ಪೊಲೀಸರು ಆತನ ಮೇಲೆ ನಿಗಾ ಇರಿಸಿದಾಗ ಕೆಲ ಸಮಯದ ಬಳಿಕ ಬುರ್ಖಾಧಾರಿ ಪಕ್ಕದ ಬೇಲಿಯತ್ತ ತೆರಳಿ ಬುರ್ಖಾ ಬದಲಿಸಿ ಯುವಕನ ವೇಷದಲ್ಲಿ ಮತ್ತೆ ಜಲಾಶಯದ ಪ್ರವೇಶ ದ್ವಾರದಲ್ಲಿ ಪತ್ತೆಯಾಗಿದ್ದಾನೆ.

ADVERTISEMENT

ಇದರಿಂದ ಕೂಡಲೇ ಎಚ್ಚೆತ್ತ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಕೈಚೀಲದಲ್ಲಿ ಯುವತಿಯರು ಧರಿಸುವ ಬಟ್ಟೆಗಳು, ಲಿಪ್ ಸ್ಟಿಕ್, ನೈಲ್ ಪಾಲಿಶ್ ಇತರೆ ವಸ್ತುಗಳು ಪತ್ತೆಯಾಗಿವೆ. ವಶಕ್ಕೆ ಪಡೆದ ಯುವಕನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ಪೊಲೀಸ್ ವಶದಲ್ಲಿರುವ ಯುವಕ ತನ್ನ ಹೆಸರು ಕಿಶೋರ್ (22)ಹಾಸನದ ನಿವಾಸಿ ಎಂದು ಹೇಳಿಕೊಂಡಿದ್ದಾನೆ.

ಹಾಸನದಲ್ಲಿ ಬೇಕರಿ, ಅಂಗಡಿ ಹೊಂದಿರುವುದಾಗಿ, ದೈಹಿಕವಾಗಿ ತನ್ನಲ್ಲಿ ಮಹಿಳಾತನ ಪರಿವರ್ತನೆ ಆಗುತ್ತಿರುವ ಕಾರಣ ಯುವತಿಯರ ವೇಷ ಧರಿಸುತ್ತಿರುವುದಾಗಿ ಹೇಳಿಕೊಂಡಿದ್ದಾನೆ.

ಹೆತ್ತವರು ತನಗೆ ಮದುವೆ ಮಾಡಲು ವಧು ಹುಡುಕುತ್ತಿದ್ದಾರೆ. ಆದರೆ, ನಾನು ತೃತೀಯ ಲಿಂಗಿಯಾಗಿ ಪರಿವರ್ತನೆ ಹೊಂದುತ್ತಿರುವೆ. ನನಗೆ ಮದುವೆ ಬೇಡ ಎಂದರೂ ಒತ್ತಡ ಹೇರುತ್ತಿರುವ ಕಾರಣ ಮನೆ ತೊರೆದು ಬಂದಿರುವುದಾಗಿ ಹೇಳಿಕೊಂಡಿದ್ದಾನೆ.

ಆದರೂ ಯುವಕ ಹಾಸನದಿಂದ ಆಲಮಟ್ಟಿಗೆ ಬಂದದ್ದು ಏಕೆ, ನಸುಕಿನಲ್ಲೇ ಜಲಾಶಯ ಪ್ರವೇಶಕ್ಕೆ ಯತ್ನಿಸಿದ್ದು ಏಕೆ ಎಂದೆಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.