ADVERTISEMENT

ಕಿರುಕುಳ: ಕಚೇರಿ ಎದುರೇ ನೀರುಗಂಟಿ ಆತ್ಮಹತ್ಯೆ

ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಪತಿ, ಪಿಡಿಒ ಕಿರುಕುಳ ಆರೋಪ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 9:21 IST
Last Updated 18 ಅಕ್ಟೋಬರ್ 2025, 9:21 IST
   

ಸಂತೇಮರಹಳ್ಳಿ (ಚಾಮರಾಜನಗರ): ತಾಲ್ಲೂಕಿನ ಹೊಂಗನೂರು ಗ್ರಾಮ ಪಂಚಾಯಿತಿಯ ನೀರುಗಂಟಿ ಚಿಕ್ಕೂಸ‌ ನಾಯಕ, ಶುಕ್ರವಾರ ಕಚೇರಿ ಕಿಟಕಿ ಸರಳಿಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು.

‘ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪಾ ಅವರ ಪತಿ ಮೋಹನ್ ಕುಮಾರ್, ಪಿಡಿಒ ರಾಮೇಗೌಡ ಅವರು ನೀಡಿದ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ’ ಎಂದು ಪತ್ರ ಬರೆದಿಟ್ಟಿದ್ದಾರೆ. ಈ ಮೂವರ ವಿರುದ್ಧ ರಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘2016ರಿಂದ ವಾಟರ್‌ ಮ್ಯಾನ್‌ ಆಗಿದ್ದು, 27 ತಿಂಗಳ ಬಾಕಿ ವೇತನ ಪಾವತಿಸುವಂತೆ ಪಿಡಿಒ ಹಾಗೂ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಲಿಲ್ಲ. ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ತಿಳಿಸಿದರೂ ಪ್ರಯೋಜನವಾಗಲಿಲ್ಲ. ರಜೆ ಕೇಳಿದರೆ ಬೇರೊಬ್ಬರನ್ನು ಕೆಲಸಕ್ಕೆ ಕಳಿಸಿ ಎಂದು ಮಾನಸಿಕ ಕಿರುಕುಳ ನೀಡುತ್ತಿದ್ದರು. ಬೆಳಿಗ್ಗೆ 8ರಿಂದ ಸಂಜೆ 6ಗಂಟೆಯವರೆಗೂ ಕಚೇರಿಯಲ್ಲಿರಬೇಕು ಎಂದು ತೊಂದರೆ ಕೊಡುತ್ತಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಚಿಕ್ಕೂಸ ನಾಯಕ ಮರಣಪತ್ರದಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಪಿಡಿಒ ರಾಮೇಗೌಡ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಅಮಾನತುಗೊಳಿಸಿದ್ದಾರೆ. 

ಕಲಬುರಗಿ ಜಿಲ್ಲೆ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದ ಗ್ರಂಥಾಲಯ ಮೇಲ್ವಿಚಾರಕಿ ಭಾಗ್ಯವತಿ ಅವರು, ‘ಮೂರು ತಿಂಗಳಿಂದ ವೇತನ ಪಾವತಿಸಿಲ್ಲ’ ಎಂದು ಮನನೊಂದು ಇತ್ತೀಚೆಗೆ ಗ್ರಂಥಾಲಯದಲ್ಲಿಯೇ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.