ADVERTISEMENT

ಆಂಧ್ರ ಅಬಕಾರಿ ಹಗರಣ; ಯಳಂದೂರು ರೆಸಾರ್ಟ್‌ನಲ್ಲಿ ಆರೋಪಿ ಬಾಲಾಜಿ 6 ದಿನ ವಾಸ್ತವ್ಯ

ಆಂಧ್ರದ ಅಬಕಾರಿ ಹಗರಣದ ಆರೋಪಿ ಬಾಲಾಜಿ ಗೋವಿಂದಪ್ಪಗೆ ‘ಸ್ನೇಹಿತನ’ ನೆರವು

ಎಚ್.ಬಾಲಚಂದ್ರ
Published 15 ಮೇ 2025, 0:30 IST
Last Updated 15 ಮೇ 2025, 0:30 IST
ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಬೆಟ್ಟದ ನೋಟ
ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಬೆಟ್ಟದ ನೋಟ   

ಚಾಮರಾಜನಗರ: ಆಂಧ್ರಪ್ರದೇಶದ ವೈಎಸ್‌ಆರ್‌ಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಅಬಕಾರಿ ಹಗರಣ ಪ್ರಕರಣದಲ್ಲಿ ಮಂಗಳವಾರ ಬಂಧನಕ್ಕೊಳಗಾಗಿರುವ ಆರೋಪಿ ಬಾಲಾಜಿ ಗೋವಿಂದಪ್ಪ ಮೇ 8ರಿಂದ 13ರವರೆಗೂ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಬೆಟ್ಟ ವ್ಯಾಪ್ತಿಯಲ್ಲಿರುವ ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಹೂಡಿದ್ದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ.

ಆಂಧ್ರದ ಮಾಜಿ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ಪತ್ನಿ ವೈ.ಎಸ್‌.ಭಾರತಿ ಅಧ್ಯಕ್ಷರಾಗಿರುವ ಭಾರತಿ ಸಿಮೆಂಟ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಲೆಕ್ಕ ಪರಿಶೋಧಕ ಹಾಗೂ ನಿರ್ದೇಶಕರಾಗಿರುವ ಬಾಲಾಜಿ, ₹3,200 ಕೋಟಿ ಅಬಕಾರಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಈಚೆಗಷ್ಟೆ ವಿಚಾರಣೆಗೆ ಹಾಜರಾಗುವಂತೆ ಆಂಧ್ರದ ಎಸ್‌ಐಟಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು.

ನೋಟಿಸ್‌ ಜಾರಿಯಾದ ಬೆನ್ನಲ್ಲೇ ಆಂಧ್ರದಿಂದ ನಾಪತ್ತೆಯಾಗಿದ್ದ ಆರೋಪಿ, ಬೆಂಗಳೂರು ಹಾಗೂ ಮೈಸೂರಿನಲ್ಲಿ ಕೆಲಕಾಲ ವಾಸ್ತವ್ಯ ಹೂಡಿ, ಸ್ನೇಹಿತರೊಬ್ಬರ ನೆರವಿನಿಂದ ಬಿಳಿಗಿರಿ ರಂಗನಬೆಟ್ಟಕ್ಕೆ ಬಂದಿದ್ದರು. ಮೇ 8ರಂದು ಇಲ್ಲಿನ ಗಿರಿದರ್ಶಿನಿ ಹೋಟೆಲ್‌ಗೆ ಬಂದು ತಂಗಿದ್ದರು. ಆದರೆ ಬಂಧನ ಭೀತಿಯಿಂದ, ಮಾರನೆಯ ದಿನವೇ ರೆಸಾರ್ಟ್‌ನಿಂದ ದಿಢೀರ್ ನಿರ್ಗಮಿಸಿದ್ದರು. ಬಳಿಕ, ಕೆಲವೇ ತಾಸುಗಳಲ್ಲಿ ವಾಪಸ್ ಬಂದು ಮೇ 10ರವರೆಗೂ ಅಲ್ಲಿಯೇ ಉಳಿದುಕೊಂಡಿದ್ದರು.

ADVERTISEMENT

ವಾಸ್ತವ್ಯ ಬದಲಿಸಿದ್ದ ಆರೋಪಿ: ಆಂಧ್ರ ಪೊಲೀಸರು ಬೆನ್ನತ್ತಿರುವ ಮಾಹಿತಿ ತಿಳಿದು, ಮೇ 11ರಂದು ದಿಢೀರ್ ಗೊರುಕನ ಆಯುರ್ವೇದಿಕ್ ಎಕೊ ವೆಲ್‌ನೆಸ್ ರೆಸಾರ್ಟ್‌ಗೆ ವಾಸ್ತವ್ಯ ಬದಲಿಸಿದ್ದರು.

ಪಂಚನಾಮೆಗೆ ಒಪ್ಪದ ಸ್ಥಳೀಯರು: 

‘ಹೊರರಾಜ್ಯದ ಮತ್ತು ಹೈಪ್ರೊಫೈಲ್ ಪ್ರಕರಣವೆಂಬ ಕಾರಣಕ್ಕೆ, ಆರೋಪಿಯ ಬಂಧನದ ಬಗ್ಗೆ ಮಾಹಿತಿ ಬಹಿರಂಗಪಡಿಸದೇ ಇದ್ದುದರಿಂದ ಸ್ಥಳೀಯರು ಪಂಚನಾಮೆಗೆ ಸುಲಭವಾಗಿ ಒಪ್ಪದೆ, ಆಂಧ್ರ ಪೊಲೀಸರು ಕೆಲವು ತಾಸು ಕಾಯಬೇಕಾಯಿತು. ಕೊನೆಗೆ ಸ್ಥಳೀಯ ಪೊಲೀಸರು ನೆರವಿಗೆ ಧಾವಿಸಿದರು’ ಎಂದು ಸ್ಥಳೀಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಚೆಕ್‌ಪೋಸ್ಟ್‌ನಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ. ನಿಯಮಬಾಹಿರವಾಗಿ ಚೆಕ್‌ಪೋಸ್ಟ್ ಪ್ರವೇಶ ಮಾಡಲಾಗಿದೆಯೇ ಎಂಬುದನ್ನು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪರಿಶೀಲಿಸಲಾಗುವುದು.
ಶ್ರೀಪತಿ ಬಿಆರ್‌ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ

ಚೆಕ್‌ಪೋಸ್ಟ್‌ ಮೂಲಕ ಪ್ರವೇಶ: ಆರೋಪ

‘ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿರುವ ಗುಂಬಳ್ಳಿ ಚೆಕ್‌ಪೋಸ್ಟ್‌ನಲ್ಲಿ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ಆಂಬುಲೆನ್ಸ್‌ ಸೇರಿ ಸ್ಥಳೀಯರ ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ಇದೆ. ಈ ಸಡಿಲಿಕೆಯ ಅವಕಾಶವನ್ನು ಬಳಸಿಕೊಂಡ ಆರೋಪಿ ಸ್ನೇಹಿತನ ಕಾರಿನಲ್ಲಿ ಚೆಕ್‌ಪೋಸ್ಟ್ ದಾಟಿದ್ದಾರೆ’ ಎಂದು ಸ್ಥಳೀಯರು ದೂರಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಅಲ್ಲಗಳೆದಿದ್ದು ‘ನಿರ್ಬಂಧಿತ ಅವಧಿಯಲ್ಲಿ ಖಾಸಗಿ ವಾಹನಗಳಿಗೆ ಪ್ರವೇಶ ನೀಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.