ADVERTISEMENT

ಬಂಡೀಪುರ: ಪ್ರತಿದಿನ 5 ಗಂಟೆ ಸಫಾರಿಗೆ ಅನುಮತಿ

ಷರತ್ತುಗಳ ಪಾಲನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 3:11 IST
Last Updated 22 ಫೆಬ್ರುವರಿ 2026, 3:11 IST
   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸ್ಥಗಿತಗೊಂಡಿದ್ದ ಸಫಾರಿ ಮರು ಆರಂಭಕ್ಕೆ ಅನುಮತಿ ನೀಡಿರುವ ಸರ್ಕಾರ ಕೆಲವು ಷರತ್ತುಗಳ ಪಾಲನೆಗೆ ನಿರ್ದೇಶನ ನೀಡಿದೆ.

ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿ ಹುಲಿ ದಾಳಿಗೆ ಮೂವರು ಬಲಿಯಾಗಿದ್ದು ಒಬ್ಬರಿಗೆ ಗಾಯವಾದ ಹಿನ್ನೆಲೆಯಲ್ಲಿ ಜನರ ಜೀವ ಸುರಕ್ಷತೆ ದೃಷ್ಟಿಯಲ್ಲಿಟ್ಟುಕೊಂಡು ಹಾಗೂ ರೈತರ ನಾಯಕರ ಸಲಹೆಗಳನ್ನು ಗಮದಲ್ಲಿಟ್ಟುಕೊಂಡು ಸಫಾರಿಗೆ ನಿರ್ಬಂಧ ಹೇರಲಾಗಿತ್ತು.

ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪರಿಸರ ಪ್ರವಾಸೋದ್ಯಮ ಸಾಮರ್ಥ್ಯವನ್ನು ವೈಜ್ಞಾನಿಕವಾಗಿ ನಿರ್ಣಯಿಸಲು ತಾಂತ್ರಿಕ ಸಮಿತಿ ರಚಿಸಲಾಗಿ, ಪ್ರವಾಸೋದ್ಯಮ ಚಟುವಟಿಕೆಗಳನ್ನು ಹಂತ ಹಂತವಾಗಿ ಆರಂಭಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಯಿತು.

ADVERTISEMENT

ತಾಂತ್ರಿಕ ಸಮಿತಿ ಅಂತಿಮ ವರದಿ ಸಲ್ಲಿಸುವವರೆಗೂ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹಂತ ಹಂತವಾಗಿ ಪರಿಸರ ಪ್ರವಾದೋದ್ಯಮ ಚಟುವಟಿಕೆಗಳನ್ನು ಆರಂಭಿಸಬಹುದು ಎಂಬ ಮಧ್ಯಂತರ ವರದಿಯ ಶಿಫಾರಸ್ಸಿನಂತೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಮರು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಲವು ಷರತ್ತುಗಳನ್ನು ಪಾಲಿಸಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಆರಂಭಿಸಬೇಕು ಎಂದು ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಅವರಿಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಆದೇಶಿಸಿದ್ದಾರೆ.

ಷರತ್ತುಗಳು ಏನು: ಬಂಡೀಪುರದಲ್ಲಿ ಪ್ರತಿದಿನ ಗರಿಷ್ಠ 31 ಸಫಾರಿ ಭೇಟಿಗೆ ಅನುಮತಿ ಇದ್ದು, ಅರಣ್ಯ ಇಲಾಖೆ 19, ಜಂಗಲ್ ರೆಸಾರ್ಟ್‌ ಲಾಡ್ಜ್‌ನಿಂದ 12 ಭೇಟಿಗಳಿಗೆ ಅನುಮತಿಸಲಾಗಿದೆ. ಪ್ರತಿದಿನ 5 ಗಂಟೆ ಸಫಾರಿ ಮಾಡಬಹುದಾಗಿದ್ದು ಪ್ರತಿ ಟ್ರಿಪ್‌ 2.5 ಗಂಟೆಗೆ ನಿಗದಿಪಡಿಸಬೇಕು, ಬೆಳಿಗ್ಗೆ 6.30ರಿಂದ 9ಗಂಟೆ ಹಾಗೂ ಮಧ್ಯಾಹ್ನ 3.30ರಿಂದ 6ಗಂಟೆವರೆಗೆ ಸಫಾರಿ ಮಾಡಲು ಅನುಮತಿ ಇದೆ.

ಸಫಾರಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶ, ಎನ್‌ಟಿಸಿಎ ಹಾಗೂ ಅರಣ್ಯ ಕಾಯ್ದೆಗಳ ಮಾರ್ಗಸೂಚಿ ಪಾಲಿಸಬೇಕು, ಸಫಾರಿಯಿಂದ ಬರುವ ಆದಾಯದಲ್ಲಿ ಮೂರನೇ ಒಂದು ಭಾಗವನ್ನು ಜನಜಾಗೃತಿ ಕಾರ್ಯಕ್ರಮಗಳಿಗೆ ಹಾಗೂ ಪರಿಸರ ಅಭಿವೃದ್ಧಿ ಚಟುವಟಿಕೆಗಳಿಗೆ ವಿನಿಯೋಗಿಸಬೇಕು, ಮಾನವ ಪ್ರಾಣಿ ಸಂಘರ್ಷ ತಡೆಗೆ ಕ್ರಮ ಕೈಗೊಳ್ಳಬೇಕು, ಸಫಾರಿ ವಾಹನಗಳಿಗೆ ಜಿಪಿಎಸ್‌ ಉಪಕರಣ, ಡ್ಯಾಷ್ ಕ್ಯಾಮ್ ಅಳವಡಿಸಬೇಕು, ಶೇ 50ರಷ್ಟು ಇಲಾಖಾ ವಾಹನಗಳನ್ನು ಮಾತ್ರ ಬಳಕೆ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.