ಚಾಮರಾಜನಗರ: ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಯುಜಿಡಿಗೆ ಅಳವಡಿಸಿರುವ ಮ್ಯಾನ್‌ಹೋಲ್‌ಗಳು ಹಾಳಾಗಿದ್ದು ವಾಹನ ಸವಾರರಿಗೆ ಹಾಗೂ ಪಾದಚಾರಿಗಳ ಜೀವಕ್ಕೆ ಕುತ್ತು ಎದುರಾಗಿದೆ.
ರಸ್ತೆಯ ಮಧ್ಯೆ ಮುರಿದು ಬಿದ್ದಿರುವ ಮ್ಯಾನ್‌ಹೋಲ್‌ಗಳಲ್ಲಿ ದ್ವಿಚಕ್ರ ವಾಹನಗಳು ಸಿಲುಕಿ ಸವಾರರು ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ. ನಾಗರಿಕರು ರಸ್ತೆಯಲ್ಲಿ ನಡೆಯುವಾಗ ಮ್ಯಾನ್‌ಹೋಲ್‌ಗಳಿಗೆ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ದಶಕಗಳ ಹಿಂದೆ ಯುಜಿಡಿ ಕಾಮಗಾರಿ ಮಾಡುವಾಗ ಮ್ಯಾನ್‌ಹೋಲ್‌ಗಳನ್ನು ನಿರ್ಮಿಸಲಾಗಿತ್ತು. ನಿರ್ವಹಣೆ ಕೊರತೆ ಹಾಗೂ ಭಾರಿ ವಾಹನಗಳ ಸಂಚಾರದಿಂದ ಬಹುತೇಕ ಯುಜಿಡಿ ಮುಚ್ಚಳಗಳು ಹಾಳಾಗಿವೆ. ಕೆಲವು ಮ್ಯಾನ್‌ಹೋಲ್‌ಗಳು ಕುಸಿದಿದ್ದರೆ ಕೆಲವು ಬಿರುಕು ಬಿಟ್ಟಿವೆ.. ಕೆಲವು ಕಡೆ ಆಳವಾದ ಗುಂಡಿಗಳು ಕಾಣುತ್ತವೆ.
ನಗರದ ಪ್ರಮುಖ ಬಡಾವಣೆಗಳ ಮುಖ್ಯ ರಸ್ತೆಗಳಲ್ಲೇ ಮ್ಯಾನ್‌ಹೋಲ್ ಮುಚ್ಚಳಗಳು ಅಪಾಯಕ್ಕೆ ಆಹ್ವಾನ ನೀಡುವಂತಿದ್ದರೂ ದುರಸ್ತಿ ಮಾಡಿಸಲು ಸ್ಥಳೀಯ ಕೌನ್ಸಿಲರ್‌ಗಳು, ನಗರಸಭೆ ಅಧಿಕಾರಿಗಳು ಮುಂದಾಗಿಲ್ಲ. ನಗರಸಭೆಯಲ್ಲಿ ಮುಚ್ಚಳ ಖರೀದಿಸುವಷ್ಟು ಅನುದಾನ ಇಲ್ಲವೇ ಎಂದು ನಾಗರಿಕರು ಪ್ರಶ್ನೆ ಮಾಡುತ್ತಿದ್ದು ಸ್ಥಳೀಯ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲೆಲ್ಲಿ ಸಮಸ್ಯೆ: ಬುದ್ಧನಗರದ ಎರಡನೇ ಕ್ರಾಸ್ ರಸ್ತೆಯಲ್ಲಿ ಮ್ಯಾನ್‌ಹೋಲ್ ಮುಚ್ಚಳ ಕುಸಿದು ಎರಡು ತಿಂಗಳು ಕಳೆದಿದೆ. ಬಡಾವಣೆಯ ಮಕ್ಕಳು, ಮಹಿಳೆಯರು, ವೃದ್ಧರು ಸಹಿತ ಸಾರ್ವಜನಿಕರು ರಸ್ತೆಯಲ್ಲಿ ನಡೆಯುವಾಗ ತೊಂದರೆ ಅನುಭವಿಸುತ್ತಿದ್ದಾರೆ. ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿದೆ.
ಜಿಲ್ಲಾ ನ್ಯಾಯಾಲಯದಿಂದ ನಿಜಗುಣ ರೆಸಾರ್ಟ್‌ಗೆ ಸಂಪರ್ಕಿಸುವ ಮುಖ್ಯ ರಸ್ತೆಯ ಕಾಮಗಾರಿ ಆರಂಭವಾಗಿ ದಶಕಗಳು ಕಳೆದರೂ ಪೂರ್ಣಗೊಂಡಿಲ್ಲ. ರಸ್ತೆಯ ಬದಿ ಯುಜಿಡಿ ನಿರ್ಮಾಣ ಮಾಡಿರುವ ಗುತ್ತಿಗೆದಾರರು ಮುಚ್ಚಳಗಳನ್ನು ಅಳವಡಿಸುವುದನ್ನು ಮರೆತಿದ್ದಾರೆ !. ಸತ್ತಿ ರಸ್ತೆಗೆ ಸಂಪರ್ಕಿಸುವ ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಾತ್ರಿಯ ಹೊತ್ತು ಇಲ್ಲಿ ಸಂಚಾರ ದುಸ್ತರವಾಗಿದ್ದು ನಿತ್ಯವೂ ಅಪಘಾತಗಳು ನಡೆಯುತ್ತಿವೆ.
ಸೇವಾ ಭಾರತಿ ಶಾಲೆ ಹಾಗೂ ಕಾಲೇಜಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಾಗಿರುವ ಸಂತೇಮರಹಳ್ಳಿ ವೃತ್ತದಿಂದ ವಿಎಚ್‌ಪಿ ಶಿಕ್ಷಣ ಸಂಸ್ಥೆಗೆ ಹೋಗುವ ದಾರಿಯಲ್ಲಿ ಮ್ಯಾನ್‌ಹೋಲ್ ಮುಚ್ಚಳ ಮುರಿದು ಬರೋಬ್ಬರಿ ವರ್ಷ ಕಳೆದರೂ ಬದಲಾಯಿಸಿಲ್ಲ. ರಸ್ತೆಯ ಮಧ್ಯೆ ಇರುವ ಯುಜಿಡಿ ಗುಂಡಿಗೆ ಅಡ್ಡಲಾಗಿ ಬ್ಯಾರಿಕೇಡ್ ಇರಿಸಲಾಗಿದೆ.
ಸಾವಿರಾರು ಮಕ್ಕಳು ಓದುವ ವಿಎಚ್‌ಪಿ ಶಾಲೆಯ ಪ್ರಮುಖ ರಸ್ತೆ ಇದಾಗಿದ್ದು ಬೆಳಿಗ್ಗೆ ಹಾಗೂ ಸಂಜೆ ಮಕ್ಕಳು ಆತಂಕದಲ್ಲಿ ಓಡಾಡಬೇಕಾಗಿದೆ. ಶಾಲಾ ವಾಹನಗಳು, ಮೊಳೆ ರಸ್ತೆಯಲ್ಲಿರುವ ಹೂವಿನ ಮಾರುಕಟ್ಟೆಗೆ ಹೋಗುವ ವಾಹನಗಳು, ಸಂತೇಮರಹಳ್ಳಿ ಕಡೆಗೆ ಹೋಗುವವರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ರಾಘವೇಂದ್ರ ಚಿತ್ರಮಂದಿರಕ್ಕೆ ಹೋಗುವ ರಸ್ತೆಯಲ್ಲೂ ಸಮಸ್ಯೆ ಗಂಭೀರವಾಗಿದೆ.
ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಮ್ಯಾನ್‌ಹೋಲ್‌ಗಳು ಕುಸಿಯುವ ಭೀತಿಯಲ್ಲಿದ್ದು ಅವಘಡ ಸಂಭವಿಸುವ ಮುನ್ನ ಬದಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕುಲಮೆ ರಸ್ತೆಯಲ್ಲೂ ಮ್ಯಾನ್‌ಹೋಲ್‌ಗಳು ಹಾಳಾಗಿವೆ. ಹೌಸಿಂಗ್ ಬೋರ್ಡ್ ಬಡಾವಣೆ, ಪ್ರಶಾಂತ್ ನಗರ, ಪ್ರಗತಿ ನಗರ ಸಹಿತ ಹಲವು ಬಡಾವಣೆಗಳಲ್ಲಿ ಯುಜಿಡಿ ಗುಂಡಿಗಳು ಶಿಥಿಲಗೊಂಡಿವೆ.
ಉಕ್ಕುವ ಯುಜಿಡಿ: ಕೊಳ್ಳೇಗಾಲ ನಗರದ ಹಲವು ಬಡಾವಣೆಗಳಲ್ಲಿ ಮ್ಯಾನ್ ಹೋಲ್‌ಗಳು ದುರಸ್ತಿಯಲ್ಲಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಕೆಲವು ಕಡೆ ಯಜಿಡಿಗೆ ಮುಚ್ಚಳಗಳು ಇಲ್ಲದೆ ಅಪಘಾತಗಳು ಸಂಭವಿಸುತ್ತಿವೆ. ಹಲವು ಕಡೆ ಯುಜಿಡಿ ತುಂಬಿ ಹೊಲಸು ರಸ್ತೆಗೆ ಹರಿದು ಸಾಂಕ್ರಮಿಕ ರೋಗಗಳ ಹರಡುವಿಕೆಗೆ ಕಾರಣವಾಗಿದೆ.
ನಗರದ ಬಸ್ ನಿಲ್ದಾಣದ ಎದುರಿಗಿರುವ ಶಾಂತಿ ಚಿತ್ರ ಮಂದಿರದ ಸಮೀಪ ತಿಂಗಳಿಂದಲೂ ಮ್ಯಾನ್ ಹೋಲ್ ತುಂಬಿ ಕಾರಂಜಿಯಂತೆ ಉಕ್ಕುತ್ತಿದೆ. ನಗರಸಭೆ ಇಲಾಖೆ ಅಧಿಕಾರಿಗಳಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ದುರಸ್ತಿ ಕಾರ್ಯ ಮಾಡಿಲ್ಲ. ರಸ್ತೆಯಲ್ಲಿ ಹೋಗಬೇಕಾದರೆ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಕೆಲವೆಡೆ ರಸ್ತೆಯಿಂದ ಅಡಿ ಎತ್ತರಕ್ಕೆ ಯುಜಿಡಿ ನಿರ್ಮಾಣ ಮಾಡಲಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ಗುಂಡ್ಲುಪೇಟೆ ಪಟ್ಟಣದ 23 ವಾರ್ಡ್‌ಗಳಲ್ಲಿ 50 ಕಿ.ಮೀ ಉದ್ದದ ಪೈಪ್‌ಲೈನ್ ಕಾಮಗಾರಿ ನಡೆದಿದ್ದು ಹೊಸೂರು ಮತ್ತು ಕಲ್ಯಾಣದ ಕೊಳದ ಬಳಿ ಮಲೀನ ನೀರನ್ನು ಶುದ್ಧೀಕರಣ ಮಾಡುವ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾಮಗಾರಿ ಮುಗಿಸಿ ಪುರಸಭೆಗೆ ಹಸ್ತಾಂತರಿಸುವ ತಯಾರಿಯಲ್ಲಿದ್ದಾರೆ.
ಆದರೆ ಅವೈಜ್ಞಾನಿಕ ಕಾಮಗಾರಿಯಿಂದ ಮಲಿನ ನೀರು ಪಟ್ಟಣದ ಹೊರ ವಲಯದಲ್ಲಿ ನಿರ್ಮಾಣವಾಗಿರುವ ಶುದ್ಧೀಕರಣ ಘಟಕ ತಲುಪುತ್ತಿಲ್ಲ. ಪಟ್ಟಣದ ಕೆ.ಎಸ್.ನಾಗರತ್ನಮ್ಮ ಬಡಾವಣೆ, 11, 12ನೇ ವಾರ್ಡ್‌ನಲ್ಲಿ ಕಾಮಗಾರಿ ಪೂರ್ಣವಾಗುವ ಮುನ್ನವೇ ಒಳಚರಂಡಿಗೆ ಶೌಚಾಲಯ ಸಂಪರ್ಕ ನೀಡಲಾಗಿದ್ದು ತಗ್ಗು ಭಾಗದಲ್ಲಿರುವ ಮ್ಯಾನ್‌ಹೋಲ್‌ಗಳಿಂದ ಹೊಲಸು ಹೊರ ಬರುತ್ತಿದೆ.
ಕೆ.ಎಸ್.ನಾಗರತ್ನಮ್ಮ ಬಡಾವಣೆಯ ನಿವಾಸಿಗಳು ದುರ್ವಾಸನೆಯಿಂದ ಬೇಸತ್ತಿದ್ದಾರೆ. ಈ ಬಗ್ಗೆ ಪುರಸಭೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರುತ್ತಾರೆ.
ನಿರ್ವಹಣೆ: ಬಾಲಚಂದ್ರ ಎಚ್.
ಪೂರಕ ಮಾಹಿತಿ: ಅವಿನ್ ಪ್ರಕಾಶ್, ಮಲ್ಲೇಶ ಎಂ.
ಕಳೆದ ತಿಂಗಳು ನಗರದಲ್ಲಿ ಮ್ಯಾನ್‌ಹೋಲ್‌ಗಳನ್ನು ದುರಸ್ತಿ ಮಾಡಲಾಗಿದೆ. ಎಲ್ಲೆಲ್ಲಿ ಸಮಸ್ಯೆಗಳಿವೆ ಎಂಬುದನ್ನು ಪತ್ತೆ ಹಚ್ಚಿ ಮತ್ತೊಮ್ಮೆ ದುರಸ್ತಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು.–ರೇಖಾ ಕೊಳ್ಳೇಗಾಲ ನಗರಸಭೆ ಅಧ್ಯಕ್ಷೆ
ನಗರದ ಹಲವು ಬಡಾವಣೆಗಳಲ್ಲಿ ಮ್ಯಾನ್‌ಹೋಲ್ ಮುಚ್ಳಳಗಳು ಹಾಳಾಗಿರುವ ದೂರುಗಳು ಬಂದಿದ್ದು ಈಗಾಗಲೇ 100 ಮುಚ್ಚಳಗಳ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ದುರಸ್ತಿಯಲ್ಲಿರುವ ಮ್ಯಾನ್‌ಹೋಲ್‌ಗಳನ್ನು ಗುರುತಿಸಿ ಮುಚ್ಚಳಗಳನ್ನು ಬದಲಾಯಿಸಲಾಗುವುದು.–ಪ್ರಕಾಶ್, ಚಾಮರಾಜನಗರ ನಗರಸಭೆ ಪ್ರಭಾರ ಪೌರಾಯುಕ್ತ
ಬುದ್ಧ ನಗರದ ಎರಡನೇ ಕ್ರಾಸ್ ರಸ್ತೆಯಲ್ಲಿ ಮ್ಯಾನ್‌ಹೋಲ್ ಮುಚ್ಚಳ ಹಾಳಾಗಿದ್ದು ಬಡಾವಣೆಯ ಮಕ್ಕಳು ಸಹಿತ ನಾಗರಿಕರು ಓಡಾಡಲು ತೊಂದರೆಯಾಗಿದೆ. ದ್ವಿಚಕ್ರ ವಾಹನ ಕಾರುಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಅವಘಡಗಳು ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ದುರಸ್ತಿಗೊಳಿಸಬೇಕು.–ಕೃಷ್ಣಮೂರ್ತಿ ಬುದ್ಧನಗರ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.