
ಹನೂರು: ಕಾಡಾನೆ ನುಗ್ಗಿ ಫಸಲನ್ನು ಹಾನಿ ಮಾಡಿದ್ದ ಜಮೀನಿಗೆ ಮಂಗಳವಾರ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿ, ರೈತರ ಜೊತೆ ಕಾಡಂಚಿನ ಸಮಸ್ಯೆಗಳ ಬಗ್ಗೆ ಚರ್ಚಿಸಿತು.
ಕಾವೇರಿ ವನ್ಯಧಾಮದ ಮಲ್ಲಯ್ಯನಪುರ ಗ್ರಾಮದ ಕಾಡಂಚಿನ ಜಮೀನುಗಳಿಗೆ ಕಳೆದ ನಾಲ್ಕೈದು ತಿಂಗಳಿನಿಂದಲೂ ಕಾಡಾನೆ ದಿನನಿತ್ಯ ಜಮೀನುಗಳಿಗೆ ನುಗ್ಗಿ ನೀರಿನ ಪರಿಕರಗಳನ್ನು ಧ್ವಂಸಗೊಳಿಸುತ್ತಿತ್ತು. ಇದರಿಂದ ಕಂಗಾಲಾಗಿದ್ದ ರೈತರು ಕಾಡಾನೆ ಹಾವಳಿ ತಡೆಗಟ್ಟುವಂತೆ ಆಕ್ರೋಶ ವ್ಯಕ್ತಪಡಿಸಿದ್ದರು.
ಮಂಗಳವಾರ ಕಾವೇರಿ ವನ್ಯಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮರಿಸ್ವಾಮಿ ಹಾಗೂ ವಲಯ ಅರಣ್ಯಾಧಿಕಾರಿ ನಿರಂಜನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ಅಲ್ಲಿನ ಸಮಸ್ಯೆಗಳ ಬಗ್ಗೆ ರೈತರೊಂದಿಗೆ ಚರ್ಚಿಸಿದರು.
ಈ ವೇಳೆ ರೈತ ಚಿಕ್ಕರಾಜು ಮಾತನಾಡಿ, ‘ನಮ್ಮ ಭಾಗದಲ್ಲಿ ಕಳೆದ ಮೂರು ವರ್ಷಗಳಿಂದಲೂ ಕಾಡಾನೆಗಳು ಪ್ರತಿನಿತ್ಯ ಜಮೀನಿಗೆ ಬಂದು ಫಸಲು ನಾಶಗೊಳಿಸುವುದರ ಜೊತೆಗೆ ನೀರಾವರಿ ಸಾಮಗ್ರಿಗಳನ್ನು ಹಾಳು ಮಾಡುತ್ತಿವೆ. ರಾತ್ರಿ ವೇಳೆ ರೈತರು ಕಾವಲು ಕಾಯಲು ಜಮೀನಿಗೆ ಬಂದಾಗ ಅವರ ಮೇಲು ದಾಳಿ ಮಾಡಿದರೆ ಅದಕ್ಕೆ ಯಾರು ಹೊಣೆ. ಕೂಡಲೇ ಕಾಡಿನ ಸುತ್ತಲೂ ರೈಲ್ವೆ ಕಂಬಿಗಳನ್ನು ಅಳವಡಿಸಬೇಕು. ಏನಾದರೂ ಅಪಾಯ ಸಂಭವಿಸಿದರೆ ಅದಕ್ಕೆ ಅರಣ್ಯ ಇಲಾಖೆಯೇ ನೇರ ಹೊಣೆಯಾಗಬೇಕಾಗುತ್ತದೆ. ಕಾಡಾನೆ ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು’ ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾವೇರಿ ವನ್ಯಧಾಮದ ಎಸಿಎಫ್ ಮರಿಸ್ವಾಮಿ, ‘ಇಲಾಖೆ ವತಿಯಿಂದ ಈಗಾಗಲೇ ಆನೆ ಕಾರ್ಯಪಡೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ ಆನೆ ಹಾವಳಿ ನಿಯಂತ್ರಣಕ್ಕೆ ಬಂದಿಲ್ಲ ಎಂಬುದು ಗೊತ್ತಾಗಿದೆ. ಆದ್ದರಿಂದ ಕಾವೇರಿ ವನ್ಯಧಾಮಕ್ಕೆ ರೈಲ್ವೆ ಕಂಬಿಗಳನ್ನು ಅಳವಡಿಸುವ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಕಾವೇರಿ ವನ್ಯಧಾಮಕ್ಕೆ ಹತ್ತೊಂಬತ್ತು ಕಿ.ಮೀ ರೈಲ್ವೆ ಕಂಬಿ ಅಳವಡಿಕೆಗೆ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ಅಲ್ಲದೆ ಕಾಡಂಚಿನ ಜಮೀನುಗಳಲ್ಲಿ ಉಪಟಳ ನೀಡುತ್ತಿರುವ ಆನೆ ಯಾವುದು ಎಂಬುದು ಕಂಡು ಹಿಡಿದು ಅದರ ಸೆರೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ರೈತರಾದ ಕನಕರಾಜು, ಮುಕುಂದ, ಶಿವರಾಜು, ಮುನಿಯಪ್ಪ ಮತ್ತು ಮಾದೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.