ADVERTISEMENT

ಜಿಲ್ಲಾಡಳಿತ, ಪೊಲೀಸರ ವಿರುದ್ಧ ಆಕ್ರೋಶ

ಅಕ್ರಮ ಗಣಿಗಾರಿಕೆ ವಿರುದ್ಧ ರೈತರ ಪ್ರತಿಭಟನೆ, ಬಾರುಕೋಲು ಚಳವಳಿ, ಉಗ್ರ ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 14:52 IST
Last Updated 18 ಜನವರಿ 2020, 14:52 IST
ಅಕ್ರಮ ಗಣಿಗಾರಿಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಚಾಮರಾಜನಗರದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು
ಅಕ್ರಮ ಗಣಿಗಾರಿಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಚಾಮರಾಜನಗರದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು   

ಚಾಮರಾಜನಗರ: ಜಿಲ್ಲೆಯಲ್ಲಿ ನಿರಂತರವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಘಟಕವು ಶನಿವಾರ ನಗರದಲ್ಲಿ ಪ್ರತಿಭಟನೆ ಹಾಗೂ ಬಾರುಕೋಲು ಚಳವಳಿ ನಡೆಸಿತು.

‘ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಹಾಗೂ ಕ್ರಷರ್‌ಗಳ ಹಾವಳಿಗೆ ಕಡಿವಾಣ ಹಾಕಲು ಗಣಿ ಇಲಾಖೆ, ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಸಂಪೂರ್ಣ ವಿಫಲವಾಗಿದೆ. ಪೊಲೀಸರು ಲಂಚ ಪಡೆದು ಅಕ್ರಮ ಗಣಿಗಾರಿಕೆ ಹಾಗೂ ಸಾಗಣಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸಮಾವೇಶಗೊಂಡ ರೈತ ಮುಖಂಡರು ಹಾಗೂ ಸಂಘದ ಕಾರ್ಯಕರ್ತರು ಗುಂಡ್ಲುಪೇಟೆ ವೃತ್ತ, ದೊಡ್ಡ ಅಂಗಡಿ ಬೀದಿ, ಡೀವಿಯೇಷನ್‌ ರಸ್ತೆಯ ಮೂಲಕ ಮೆರವಣಿಗೆ ನಡೆಸಿ, ಭುವನೇಶ್ವರಿ ವೃತ್ತದಲ್ಲಿ ಮಾನವ ಸರ‍ಪಳಿ ನಿರ್ಮಿಸಿ ವಾಹನಗಳ ಸಂಚಾರಕ್ಕೆ ತಡೆ ಒಡ್ಡಿದರು. ಬಾರುಕೋಲನ್ನು ಮೇಲಕ್ಕೆತ್ತಿ ತಿರುಗಿಸುತ್ತಾ ಜಿಲ್ಲಾಡಳಿತ, ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.

ADVERTISEMENT

ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡೆಸಿ ಭವನದ ಮುಂದೆ ಪ್ರತಿಭಟನೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಜಿಲ್ಲಾಡಳಿತ, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ‍್ರಕಾಶ್‌ ಅವರು, ‘ನೈಸರ್ಗಿಕವಾಗಿ ಶ್ರೀಮಂತವಾಗಿರುವ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಬೆಟ್ಟಗುಡ್ಡಗಳು ಕರಗುತ್ತಿವೆ. ಅರಣ್ಯ ನಾಶವಾಗುತ್ತಿದೆ. ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಜಿಲ್ಲಾಡಳಿತ, ಗಣಿ ಇಲಾಖೆ ಹಾಗೂ ಪೊಲೀಸ್‌ ಅಧಿಕಾರಿಗಳು ಅಕ್ರಮ ತಡೆಗೆ ಗಮನಕೊಡುತ್ತಿಲ್ಲ’ ಎಂದು ದೂರಿದರು.

‘ಸರ್ಕಾರಿ ಗೋಮಾಳಗಳಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿದೆ. ಗುತ್ತಿಗೆ ಪಡೆದುದಕ್ಕಿಂತಲೂ ಹೆಚ್ಚು ಜಾಗದಿಂದ ಕಲ್ಲು, ಖನಿಜಗಳನ್ನು ಲೂಟಿ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಮಿತಿ ಮೀರಿದ ಗಣಿಗಾರಿಕೆ ನಡೆಯುತ್ತಿದೆ’ ಎಂದು ಅವರು ಆರೋಪಿಸಿದರು.

‘ಜಿಲ್ಲೆಯ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುವುದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಅಕ್ರಮಕ್ಕೆ ಕಡಿವಾಣ ಹಾಕದಿದ್ದರೆ, ರೈತ ಸಂಘದಿಂದ ಉಗ್ರ ಹೋರಾಟ ಮಾಡಲಾಗುವುದು’ ಎಂದು ಅವರು ಎಚ್ಚರಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌ ಮಾತನಾಡಿ, ‘ಗಣಿ ಗುತ್ತಿಗೆ ಪಡೆದವರು ಹಾಗೂ ಮಾಲೀಕರು ನಿಯಮಗಳನ್ನು ಉಲ್ಲಂಘಿಸಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಗಣಿಯಲ್ಲಿ ನಿಗದಿತ ಆಳಕ್ಕಿಂತಲೂ ಹೆಚ್ಚು ಆಳ ಕೊ‌ರೆಯಲಾಗುತ್ತಿದೆ. ಪರವಾನಗಿ ಪಡೆಯದೆ ಕೊಳವೆಬಾವಿ ಕೊರೆದು ಸ್ಫೋಟ ನಡೆಸುವಂತಿಲ್ಲ. ಹಾಗಾಗಿದ್ದರೂ ಎಗ್ಗಿಲ್ಲದೆ ಸ್ಫೋಟ ಮಾಡಲಾಗುತ್ತಿದೆ. ಇದರಿಂದ ನೆಲದಡಿಯಲ್ಲಿ ಶಿಲಾಪದರ ಬಿರುಕು ಬಿಡುತ್ತಿದ್ದು, ರೈತರ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇಷ್ಟೆಲ್ಲ ನಡೆಯುತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ. ಗಣಿ ಉದ್ಯಮಿಗಳಿಂದ ಹಣ ಪಡೆದು ಪರವಾನಗಿ ಕೊಡುತ್ತಿದ್ದಾರೆ. ಗಣಿ ಮಾಲೀಕರು, ಉದ್ಯಮಿಗಳು ನಡೆಸುತ್ತಿರುವ ಅಕ್ರಮಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ನಮ್ಮ ಒತ್ತಾಯಕ್ಕೆ ಮಣಿದು ಗಣಿ ಇಲಾಖೆ ಎರಡು ಚೆಕ್‌ಪೋಸ್ಟ್‌ಗಳನ್ನು ಹಾಕಿ ಸುಮ್ಮನೆ ಕುಳಿತಿದೆ. ಹೆಲ್ಮೆಟ್‌ ಧರಿಸದಿದ್ದರೆ ₹ 1000 ದಂಡ ಹಾಕುವ ಸರ್ಕಾರ, ತನ್ನದೇ ಭೂಮಿಯನ್ನು ಅತಿಕ್ರಮಣ ಮಾಡಿರುವ ಗಣಿ ಮಾಲೀಕರ ವಿರುದ್ಧ ಯಾವುದೇ ದಂಡ ಹಾಕುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಸರ ಹಾಳು: ‘ಹೆಗ್ಗೋಠಾರ, ಬಿಸಲವಾಡಿ, ರಾಗಿಕಲ್ಲುಗುಡ್ಡ, ಮುಕ್ಕಡಹಳ್ಳಿ, ಬಿಳಿಗಿರಿರಂಗನಬೆಟ್ಟದ ತಪ್ಪಲು, ಯರಗಂಬಳ್ಳಿ, ವಡ್ಗಲ್ ಪುರ, ಹಿರಿಕಾಟಿ, ಮಡಳ್ಳಿ ಇನ್ನೂ ಅನೇಕ ಕಡೆ ಗಣಿಗಾರಿಕೆ, ಕ್ರಷರ್ ಹಾವಳಿಯಿಂದಾಗಿ ಜನರು ವಾಸಿಸಲು ಯೋಗ್ಯವಲ್ಲದ ವಾತಾವರಣ ನಿರ್ಮಾಣವಾಗಿದೆ. ಲಾರಿಗಳು ಭಾರ ಮಿತಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ಕರಿ ಕಲ್ಲು, ಜೆಲ್ಲಿ, ಮರಳು ಸೇರಿದಂತೆ ಇತರ ವಸ್ತುಗಳನ್ನು ಸಾಗಿಸುತ್ತಿವೆ. ಗಣಿ ಗುತ್ತಿಗೆ ಮಾಡಿದವರು ಸರ್ಕಾರಕ್ಕೆ ರಾಜಧನವನ್ನು ಸರಿಯಾಗಿ ಕೊಡದೆ ವಂಚಿಸುತ್ತಿದ್ದಾರೆ’ ಪ್ರತಿಭಟನಾನಿರತರು ದೂರಿದರು.

ಪೊಲೀಸರೊಂದಿಗೆ ವಾಗ್ವಾದ

ಪ್ರತಿಭಟನೆಯ ಸಂದರ್ಭದಲ್ಲಿ ಧ್ವನಿವರ್ಧಕ ಬಳಕೆ ವಿಚಾರದಲ್ಲಿ ಪೊಲೀಸರು ಹಾಗೂ ರೈತ ಮುಖಂಡರ ನಡುವೆ ವಾಗ್ವಾದ ನಡೆಯಿತು.

ಪ್ರತಿಭಟನಾನಿರತರು ಮೆರವಣಿಗೆ ನಡೆಯುತ್ತಿದ್ದಾಗ, ಧ್ವನಿವರ್ಧಕದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬರುತ್ತಿದ್ದರು. ಜಿಲ್ಲಾಡಳಿತ ಭವನದ ಗೇಟನ್ನು ಪ್ರವೇಶಿಸಿದ ನಂತರ ಧ್ವನಿವರ್ಧಕ ಬಳಸದಂತೆ ಪಟ್ಟಣ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಎನ್‌.ಸಿ.ನಾಗೇಗೌಡ ಅವರು ಮುಖಂಡರಿಗೆ ಸೂಚಿಸಿದರು.ಆದರೆ, ಅವರು ಮಾತು ಕೇಳಲಿಲ್ಲ.

ಜಿಲ್ಲಾಡಳಿತ ಭವನದ ಮುಂದೆ ಹೊನ್ನೂರು ಪ್ರಕಾಶ್‌ ಅವರು ಭಾಷಣ ಮಾಡಲು ಆರಂಭಿಸಿದಾಗ ನಾಗೇಗೌಡ ಅವರು ಧ್ವನಿವರ್ಧಕದ ಶಬ್ದವನ್ನು ಕಡಿಮೆ ಮಾಡಿದರು. ಇದು ಪ್ರತಿಭಟನಾನಿರತರನ್ನು ಕೆರಳಿಸಿತು.

ಧ್ವನಿವರ್ಧಕ ಬಳಕೆಗೆ ಅನುಮತಿ ಕೊಟ್ಟಿಲ್ಲ; ಧ್ವನಿವರ್ಧಕವನ್ನು ಕಟ್ಟಿದ್ದ ಆಟೊವನ್ನು ಠಾಣೆಗೆ ತೆಗೆದುಕೊಂಡು ಹೋಗುವಂತೆ ಸಿಬ್ಬಂದಿಗೆ ಅವರು ಸೂಚಿಸಿದರು.

ಆಗ ಕೆಲವು ರೈತರು ಆಟೊಗೆ ಅಡ್ಡವಾಗಿ ನಿಂತರು. ಈ ಸಂದರ್ಭದಲ್ಲಿ ರೈತ ಮುಖಂಡರು ಹಾಗೂ ನಾಗೇಗೌಡರ ನಡುವೆ ವಾಗ್ವಾದ ನಡೆಯಿತು. ಡಿವೈಎಸ್‌ಪಿ ಜೆ.ಮೋಹನ್‌ ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.