
ಚಾಮರಾಜನಗರ: ಮಾರ್ಚ್ 6ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಜಿಲ್ಲೆಗೆ ಈ ಬಾರಿಯ ಬಜೆಟ್‌ನಲ್ಲಾದರೂ ಭರ್ಜರಿ ಕೊಡುಗೆಗಳು ಸಿಗಬಹುದೇ ಎಂಬ ನಿರೀಕ್ಷೆಗಳು ಗರಿಗೆದರಿವೆ.
ಪ್ರೊ.ನಂಜುಂಡಪ್ಪ ವರದಿಯ ಪ್ರಕಾರ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವ ಚಾಮರಾಜನಗರ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದು ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದೆ. ನಗರ, ಪಟ್ಟಣ, ಗ್ರಾಮಾಂತರ ಭಾಗಗಳಲ್ಲಿ ಇಂದಿಗೂ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಒಳ ಚರಂಡಿ ಹದಗೆಟ್ಟಿದೆ. ಉತ್ತಮ ಶಿಕ್ಷಣ ಹಾಗೂ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಪಡೆಯಲು ನೆರೆಯ ಜಿಲ್ಲೆಗಳ ಮೇಲಿನ ಅವಲಂಬನೆ ತಪ್ಪಿಲ್ಲ.
ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ತೆವಳುತ್ತಾ ಸಾಗುತ್ತಿವೆ. ನೆಲದ ಮೂಲನಿವಾಸಿಗಳಾದ ಬುಡಕಟ್ಟು ಸಮುದಾಯಗಳ ದಶಕಗಳ ಬೇಡಿಕೆಗಳು ಈಡೇರಿಲ್ಲ. ಪ್ರತಿವರ್ಷ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಭರಪೂರ ಯೋಜನೆ, ಅನುದಾನ ಸಿಗಬಹುದು ಎಂಬ ನಿರೀಕ್ಷೆಗಳು ಗರಿಗೆದರುತ್ತಿದ್ದು ಈ ಬಾರಿಯೂ ಮುಂದುವರಿದಿದೆ.
ಹನೂರು, ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ಹಾಗೂ ಚಾಮರಾಜಗರ ತಾಲ್ಲೂಕು ವ್ಯಾಪ್ತಿಯ ಕಾಂಡಂಚಿನಲ್ಲಿ 148 ಪೋಡುಗಳಿದ್ದು 7,500 ಆದಿವಾಸಿಗಳು ಕುಟುಂಬಗಳು ನೆಲೆಸಿವೆ. 40,000ಕ್ಕೂ ಹೆಚ್ಚು ಸೋಲಿಗರು, ಬೆಟ್ಟ ಕುರುಬ, ಜೇನು ಕುರುಬ ಸಮುದಾಯಗಳು ಜಿಲ್ಲೆಯಲ್ಲಿ ವಾಸವಾಗಿದ್ದು ಕೆಲವು ಹಾಡಿಗಳಿಗೆ ಇಂದಿಗೂ ಕುಡಿಯುವ ನೀರು, ವಿದ್ಯುತ್, ರಸ್ತೆ, ಆರೋಗ್ಯ, ಶಿಕ್ಷಣದಂತಹ ಕನಿಷ್ಠ ಮೂಲಸೌಕರ್ಯಗಳು ಇಲ್ಲ. ಬಜೆಟ್‌ನಲ್ಲಿ ಹಾಡಿಗಳ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸುತ್ತಾರೆ ಆದಿವಾಸಿ ಸಮುದಾಯದ ಮುಖಂಡರಾದ ಕೇತಮ್ಮ.
ಹಾಡಿಗಳಿಂದ ಮುಖ್ಯರಸ್ತೆಗಳಿಗೆ ತಲುಪಲು ಸಂಪರ್ಕ ರಸ್ತೆಗಳು ಇಲ್ಲ. ಆರೋಗ್ಯ ಹದಗೆಟ್ಟರೆ ಡೋಲಿಯಲ್ಲಿ ಹತ್ತಾರು ಕಿ.ಮೀ ದೂರ ರೋಗಿಯನ್ನು ಹೊತ್ತೊಯ್ದು ಚಿಕಿತ್ಸೆ ಕೊಡಿಸಬೇಕಾಗಿದೆ. ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು.
ಆದಿವಾಸಿ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಆಶ್ರಮ ಶಾಲೆಗಳನ್ನು ತೆರೆದಿದ್ದರೂ ಕಾಯಂ ಶಿಕ್ಷಕರನ್ನು ನೇಮಕ ಮಾಡದೆ ಯೋಜನೆಯ ಆಶಯ ಸಂಪೂರ್ಣವಾಗಿ ಈಡೇರಿಲ್ಲ. ಕಾಯಂ ಶಿಕ್ಷಕರ ನೇಮಕಕ್ಕೆ ಒತ್ತು ನೀಡುವ ಜೊತೆಗೆ ಆಶ್ರಮ ಶಾಲೆಗಳ ಉನ್ನತೀಕರಣಕ್ಕೆ ವಿಶೇಷ ಅನುದಾನ ಘೋಷಿಸಬೇಕು. ಹಾಡಿಗಳಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ ನೀಡಲು ಅರಣ್ಯ ಕಾನೂನುಗಳನ್ನು ಸರಳೀಕರಣಗೊಳಿಸಬೇಕು.
ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಪ್ರತ್ಯೇಕವಾಗಿ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದಿವಾಸಿಗಳ ಜೀವನೋಪಾಯ ಹಾಗೂ ಆರ್ಥಿಕ ಸಬಲೀಕರಣ ಮಾಡಬೇಕು ಎನ್ನುತ್ತಾರೆ ಮುಖಂಡರು.
ಜಿಲ್ಲೆಯಲ್ಲಿ ಐದು ತಾಲ್ಲೂಕುಗಳಿದ್ದು ಕೊಳ್ಳೇಗಾಲ ಉಪ ವಿಭಾಗ ಮಾತ್ರ ಒಂದೇ ಅಸ್ತಿತ್ವದಲ್ಲಿರುವುದರಿಂದ ಚಾಮರಾಜನಗರ ಗುಂಡ್ಲುಪೇಟೆ ತಾಲ್ಲೂಕಿನವರು ಸರ್ಕಾರದ ಕೆಲಸ ಕಾರ್ಯಗಳಿಗೆ ಕೊಳ್ಳೇಗಾಲ ಉಪ ವಿಭಾಗ ಕಚೇರಿಗೆ ಅಲೆಯಬೇಕಾಗಿದೆ. ಜಿಲ್ಲಾ ಕೇಂದ್ರ ಚಾಮರಾಜನಗರವನ್ನೊಳಗೊಂಡ ಉಪವಿಭಾಗ ರಚನೆ ಮಾಡಿದರೆ ಹೆಚ್ಚು ಅನುಕೂಲವಾಗಲಿದೆ ಎಂಬ ಬೇಡಿಕೆ ಇದೆ.
ಜಿಲ್ಲೆಯಲ್ಲಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು, ಹುಲಿ ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಧಾಮಗಳು ಹಾಗೂ ಪ್ರವಾಸಿ ತಾಣಗಳಿದ್ದರೂ ಪ್ರವಾಸೋದ್ಯಮ ಕ್ಷೇತ್ರ ನಿರೀಕ್ಷಿತ ಪ್ರಗತಿಯಾಗಿಲ್ಲ. ಪ್ರವಾಸಿತಾಣಗಳಿಗೆ ಸಮರ್ಪಕ ಸಾರಿಗೆ ಸಂಪರ್ಕ, ಕುಡಿಯುವ ನೀರು, ಶೌಚಾಲಯ, ವಾಸ್ತವ್ಯ ಹಾಗೂ ಆತಿಥ್ಯಕ್ಕೆ ವಸತಿಗೃಹ ಹಾಗೂ ಹೋಟೆಲ್‌ಗಳ ಅಲಭ್ಯತೆಯಿಂದ ಪ್ರವಾಸಿಗರನ್ನು ಸೆಳೆಯಲು ವಿಫಲವಾಗಿದೆ. ಬಜೆಟ್‌ನಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ಘೋಷಣೆಯಾಗಬೇಕು ಎಂಬ ನಿರೀಕ್ಷೆ ಇದೆ.
ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ತಿ.ನರಸೀಪುರದಿಂದ ಕಾವೇರಿ ನೀರು ಪೂರೈಸಲಾಗುತ್ತಿದ್ದರೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಕನಿಷ್ಠ 10 ರಿಂದ 15 ದಿನಗಳಿಗೊಮ್ಮೆ ನೀರು ಬರುತ್ತಿದ್ದು ನಾಗರಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಪಟ್ಟಣಕ್ಕೆ ಎರಡನೇ ಹಂತದ ಕಾವೇರಿ ಕುಡಿಯುವ ನೀರು ಪೂರೈಸುವ ಮಾಲಂಗಿಯಿಂದ ನಗರಕ್ಕೆ ನೀರು ಸರಬರಾಜು ಮಾಡುವ ₹ 279 ಕೋಟಿ ವೆಚ್ಚದ ಯೋಜನೆ ಶೀಘ್ರ ಅನುಷ್ಠಾನಗೊಳ್ಳಬೇಕು.
ಸಂತೇಮರಹಳ್ಳಿ ರಸ್ತೆಯ ರೇಷ್ಮೆ ಇಲಾಖೆ ಕಟ್ಟಡದ ಬಳಿ ವಿಶಾಲವಾದ ಹೈಟೆಕ್ ಬಸ್‌ನಿಲ್ದಾಣ ನಿರ್ಮಿಸುವ ಯೋಜನೆ ಘೋಷಣೆಯಾಗಿದ್ದರೂ ಅನುಷ್ಠಾನ ಹಂತದಲ್ಲಿ ತೆವಳುತ್ತಾ ಸಾಗಿದೆ. ಬಜೆಟ್‌ನಲ್ಲಿ ಅಗತ್ಯ ಅನುದಾನ ಮಂಜೂರು ಮಾಡುವ ಮೂಲಕ ಶೀಘ್ರ ನಿಲ್ದಾಣ ನಿರ್ಮಾಣ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ತಾಲ್ಲೂಕು ಘೋಷಣೆಯಾಗಿ 8 ವರ್ಷ ಕಳೆದರೂ ಇದುವರೆಗೂ ಪೂರ್ಣ ಪ್ರಮಾಣದ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿಲ್ಲ. ಹಾಲಿ ಇರುವ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಹನೂರು ತಾಲ್ಲೂಕಿನಲ್ಲಿದ್ದ ತಾತ್ಕಾಲಿಕ ನ್ಯಾಯಾಲಯವನ್ನು ಕೊಳ್ಳೇಗಾಲಕ್ಕೆ ಸ್ಥಳಾಂತರ ಮಾಡಿದ್ದು ಮತ್ತೆ ಹಾನೂರಿಗೆ ಸ್ಥಳಾಂತರಿಸಬೇಕು. ಕಾವೇರಿ ನದಿಯಿಂದ ಉಡುತೊರೆ ಜಲಾಶಯಕ್ಕೆ ನೀರು ತುಂಬಿಸಬೇಕು, ಮಾನವ ವನ್ಯಜೀವಿ ಸಂಘರ್ಷ ಕಡಿಮೆ ಮಾಡಬೇಕು, ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಜಾರಿ ಮಾಡಬೇಕು.
ಚಾಮರಾಜನಗರದ ಜಿಲ್ಲಾ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ, ಅರಣ್ಯದಂಚಿನ ಗ್ರಾಮಗಳ ಸ್ಥಳಾಂತರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸಲು ವಿಶೇಷ ಒತ್ತು, ರಾಜ್ಯ, ಜಿಲ್ಲಾ ಹೆದ್ದಾರಿಗಳ ಅಭಿವೃದ್ಧಿ, ಮಾನವ ಪ್ರಾಣಿ ಸಂಘರ್ಷ ತಡೆಗೆ ಒತ್ತು, ಪರಿಸರ ಹಾಗೂ ಕೃಷಿ ಪ್ರವಾಸೋದ್ಯಮಕ್ಕೆ ಒತ್ತು, ಎಳನೀರು ಮಾರುಕಟ್ಟೆ, ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆ, ಕೈಗಾರಿಕೆಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
‘ಕನ್ನಡ ಸಂಸ್ಕೃತಿ ಇಲಾಖೆಗೆ ಒತ್ತು ಕೊಡಿ’ ಬಜೆಟ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುದಾನ ಮೀಸಲಿಡಬೇಕು. ಚಾಮರಾಜನಗರದಲ್ಲಿ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರ ನಿರ್ಮಾಣವಾಗಿದ್ದರೂ ರಂಗಕಲೆಗಳ ಪ್ರದರ್ಶನಕ್ಕೆ ಪೂರಕವಾದ ಸೌಲಭ್ಯಗಳನ್ನು ಒದಗಿಸಿಲ್ಲ. ನಾಟಕಗಳ ಪ್ರದರ್ಶನಕ್ಕೆ ಅಗತ್ಯವಾಗಿ ಒಳಾಂಗಣಕ್ಕೆ ಬೇಕಾದ ಲೈಟ್‌ಗಳು ಗ್ರೀನ್ ರೂಂನಲ್ಲಿರಬೇಕಾದ ತಾಂತ್ರಿಕ ಪರಿಕರಗಳು ಧ್ವನಿವರ್ಧಕ ವ್ಯವಸ್ಥೆ ರಿಹರ್ಸಲ್ ಕೊಠಡಿ ಬಯಲು ರಂಗಮಂದಿರ ನಿರ್ಮಾಣವಾಗಬೇಕಿದ್ದು ಬಜೆಟ್‌ನಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಬೇಕು.ಕೆ.ವೆಂಕಟರಾಜು ರಂಗಕರ್ಮಿ
‘ಸಾಂಸ್ಕೃತಿಕ ಆಪತ್ತು ನಿಧಿ ಘೋಷಿಸಿ’ ಜನಪದ ಕಲಾವಿದರು ತೀರಾ ಆರ್ಥಿಕ ಸಂಕಷ್ಟದಲ್ಲಿ ಬದುಕುತ್ತಿದ್ದು ಕೊನೆಯ ಕಾಲದಲ್ಲಿ ಚಿಕಿತ್ಸೆ ಹಾಗೂ ಅಂತ್ಯಕ್ರಿಯೆಗೂ ಹಣ ಹೊಂದಿಸಲು ಪರದಾಡಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಕಲಾವಿದರ ಕೊನೆಗಾಲದಲ್ಲಿ ಆರ್ಥಿಕ ನೆರವು ನೀಡಲು ಸಾಂಸ್ಕೃತಿಕ ಆಪತ್ತು ನಿಧಿ ಸ್ಥಾಪಿಸಬೇಕು. ಸಾಹಿತಿ ಬರಗೂರು ರಾಮಚಂದ್ರಪ್ಪನವರು ನಿಧಿ ಸ್ಥಾಪನೆಗೆ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಬಜೆಟ್‌ನಲ್ಲಿ ಅನುಷ್ಠಾನ ಮಾಡಬೇಕು. ಚಾಮರಾಜನಗರದಲ್ಲಿ ಪ್ರತಿವರ್ಷ ರಾಜ್ಯಮಟ್ಟದ ಜನಪದ ಉತ್ಸವ ಆಯೋಜಿಸಲು ಅನುದಾನ ಬಿಡುಗಡೆ ಮಾಡಬೇಕು. ಬುಡಕಟ್ಟು ಸಮುದಾಯ ದಲಿತರು ಹಿಂದುಳಿದ ವರ್ಗಳು ಹೆಚ್ಚಾಗಿ ವಾಸವಾಗಿರುವ ಜಿಲ್ಲೆಯಲ್ಲಿ ಬುಡಕಟ್ಟು ಜಾನಪದ ರಂಗಾಯಣ ಸ್ಥಾಪನೆಯಾಗಬೇಕು.ಸಿ.ಎಂ.ನರಸಿಂಹ ಮೂರ್ತಿ ಜಾನಪದ ಕಲಾವಿದ
‘ಆದಿವಾಸಿಗಳಿಗೆ ಬೇಕು ಸೂರು’ ಜಿಲ್ಲೆಯ 148 ಹಾಡಿಗಳಲ್ಲಿ ವಾಸವಾಗಿರುವ ಹೆಚ್ಚಿನವರು ಸ್ವಂತ ಸೂರು ಹೊಂದಿಲ್ಲ. ಶೆಡ್‌ಗಳ ಮೇಲೆ ಟಾರ್ಪಾಲ್ ಹೊದಿಸಿ ಜೀವನ ಮಾಡುತ್ತಿದ್ದಾರೆ. 2995 ಮನೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದರೂ ಅನುಷ್ಠಾನ ಹಂತದಲ್ಲಿ ವಿಳಂಬವಾಗುತ್ತಿದ್ದು ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಟ್ಟು ಸೂರು ನೀಡಬೇಕು. ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕುಡಿಯುವ ನೀರು ಹಾಗೂ ಮೂಲಸೌಕರ್ಯ ಕಲ್ಪಿಸುವ ಯೋಜನೆ ನನೆಗುದಿಗೆ ಬಿದ್ದಿದ್ದು ಶೀಘ್ರ ಅನುಷ್ಠಾನಗೊಳಿಸಬೇಕು.ಕೇತಮ್ಮ ಆದಿವಾಸಿ ಸಮುದಾಯದ ಮುಖಂಡರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.