
ಕೊಳ್ಳೇಗಾಲ: ನಗರದ ವಿವಿಧ ದಿನಸಿ ಅಂಗಡಿಗಳು, ಹೋಟೆಲ್ ಗಳು, ಹಾಸ್ಟೆಲ್ ಗಳು, ಮಟನ್, ಚಿಕನ್ ಅಂಗಡಿಗಳು ಹಾಗೂ ಹೋಮ್ ಮೇಡ್ ತಿಂಡಿ ತಿನಿಸು ತಯಾರು ಮಾಡುವ ಸ್ಥಳಕ್ಕೆ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ದಿಡೀರ್ ದಾಳಿ ನಡೆಸಿ ಅನೇಕ ವಸ್ತುಗಳನ್ನು ವಶಪಡಿಸಿಕೊಂಡು ಎರಡು ಅಂಗಡಿಗಳನ್ನು ಬಂದ್ ಮಾಡಿದರು.
ಆಹಾರ ಸುರಕ್ಷಿತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸುಮಾರು 50ಕ್ಕೂ ಹೆಚ್ಚು ಅಂಗಡಿಗಳಿಗೆ ಭೇಟಿ ನೀಡಿ, ಆಹಾರ ಪದಾರ್ಥಗಳಿಗೆ ಬಳಸುವ ಕೆಂಪು ಹಸಿರು ಹಾಗೂ ನೀಲಿ ಸೇರಿದಂತೆ ಕೆಮಿಕಲ್ ಕಲರ್, ಟೆಸ್ಟಿಂಗ್ ಪೌಡರ್, ಸೇರಿದಂತೆ ಅನೇಕ ಮಾದಕ ವಸ್ತುಗಳನ್ನು ಸಹ ವಶಪಡಿಸಿಕೊಂಡರು.
ಹೋಟೆಲ್ ಗಳಿಗೆ ಭೇಟಿ ನೀಡಿದ ಉಪವಿಭಾಗಾಧಿಕಾರಿಗಳು ಆಹಾರ ಪದಾರ್ಥಗಳನ್ನು ಹಾಗೂ ತಿಂಡಿ ತಿನಿಸುಗಳನ್ನು ತೆಗೆದುಕೊಂಡು ಸ್ಥಳದಲ್ಲೇ ಇದ್ದ ವಾಹನದಲ್ಲಿ ಪರೀಕ್ಷೆ ಮಾಡಿಸಿದರು. ಕೆಲವು ದಿನಸಿ ಅಂಗಡಿಗಳಿಗೆ ಭೇಟಿ ನೀಡಿ ಪ್ರತಿಯೊಂದು ಆಹಾರ ಪದಾರ್ಥದ ಗುಣಮಟ್ಟಗಳನ್ನು ಸಹ ಪರೀಕ್ಷಿಸಿದರು ಯಾವುದು ಯೋಗ್ಯವಿಲ್ಲ ಅಂತಹ ವಸ್ತುಗಳನ್ನೆಲ್ಲ ವಶಪಡಿಸಿಕೊಂಡರು. ಮಾಂಸದ ಅಂಗಡಿಗಳಿಗೂ ಸಹ ಭೇಟಿ ನೀಡಿ ಸುಚಿತ್ವ ಕಾಪಾಡಿಕೊಳ್ಳಬೇಕು ಎಂಬುದಾಗಿ ಸಲಹೆಯನ್ನು ನೀಡಿದರು. ಹೋಟೆಲ್ ಗಳು ಹಾಗೂ ಬೇಕರಿ ಸೇರಿದಂತೆ ಇನ್ನಿತರ ತಿಂಡಿ ತಿನಿಸು ತಯಾರಿಸುವ ಕಡೆಗೆ ಹೋಗಿ ಕಲಬೆರಿಕೆ ಪದಾರ್ಥಗಳನ್ನು ಹಾಕಿ ತಿಂಡಿ ತಿನಿಸುಗಳನ್ನು ತಯಾರು ಮಾಡಬಾರದು ಇದರಿಂದ ಕ್ಯಾನ್ಸರ್ ಕಾಯಿಲೆ ಉತ್ಪತ್ತಿಯಾಗುತ್ತದೆ ಹಾಗಾಗಿ ಒಂದುವೇಳೆ ನಮ್ಮ ಗಮನಕ್ಕೆ ಬಂದರೆ ಮುಲಾಜಿ ಲ್ಲದೆ ಅಂಗಡಿಯನ್ನು ಬಂದ್ ಮಾಡಬೇಕಾಗುತ್ತದೆ ಹಾಗಾಗಿ ಮುಂದಿನ ದಿನಗಳಲ್ಲಿ ಇಂತಹ ವಸ್ತುಗಳನ್ನು ಬಳಸುವಂತಿಲ್ಲ ಎಂದು ಅರಿವು ಮೂಡಿಸಿದರು.
ಕೆಲವು ಚಿಲ್ಲರೆ ಅಂಗಡಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಡಲೆಬೀಜ, ಬಟಾಣಿ, ಚಕ್ಕಲಿ, ನಿಪ್ಪಿಟ್ಟು ಸೇರಿದಂತೆ ಇನ್ನಿತರ ತಿಂಡಿಗಳಲ್ಲಿ ಹೆಚ್ಚಾಗಿ ಕೃತಕ ಬಣ್ಣಗಳನ್ನು ಹಾಕಿದ್ದರು ಇದನ್ನು ಪರೀಕ್ಷಿಸಿದ ಅವರು ಇದು ತಿನ್ನಲು ಯೋಗ್ಯವಿಲ್ಲ ಹೆಚ್ಚಾಗಿ ಕೃತಕ ಬಣ್ಣಗಳನ್ನು ಅಳವಡಿಸಿದ್ದಾರೆ ನೀವು ಎಲ್ಲಿಂದ ತರುತ್ತೀರಿ ಎಂದು ಅಂಗಡಿ ಮಾಲೀಕರಿಗೆ ಕೇಳಿದರು. ಆಗ ಅವರು ಓಂ ವಿಲಾಸ್ ಎಂಬ ಹೋಂ ಮೇಡ್ ಎಂಬ ಹೋಲ್ ಸೇಲ್ ಅಂಗಡಿಯಿಂದ ತಂದು ಮಾರಾಟ ಮಾಡುತ್ತೇವೆ ಎಂದು ತಿಳಿಸಿದರು. ತಕ್ಷಣ ಉಪವಿಭಾಗಾಧಿಕಾರಿಗಳ ತಂಡ ಭೇಟಿ ನೀಡಿದಾಗ ಅಂಗಡಿ ಬಂದಾಗಿತ್ತು. ತಕ್ಷಣ ಅಧಿಕಾರಿಗಳು ಓಂ ವಿಲಾಸ್ ಅಂಗಡಿ ಮಾಲೀಕರಿಗೆ ದೂರವಾಣಿಯ ಮೂಲಕ ಕರೆ ಮಾಡಿದರು ಆಗ ಅವರು ನಾವು ಅಂಗಡಿಯನ್ನು ಬಾಗಿಲು ಹಾಕಿಕೊಂಡು ಬಂದಿದ್ದೇವೆ ನಾಳೆ ಬರುತ್ತೇವೆ ಎಂದು ಸಬೂಬು ಹೇಳಿದರು. ಇದರಿಂದ ಕೋಪಿತಗೊಂಡ ಉಪ ವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ ನಿಮ್ಮ ಅಂಗಡಿಯಿಂದ ತಿನ್ನಲು ಯೋಗ್ಯವಿಲ್ಲದ ತಿಂಡಿ ತಿನಿಸುಗಳನ್ನು ಹೆಚ್ಚಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ ಹಾಗಾಗಿ ನಾವು ಇಂದು ಬಂದಿದ್ದೇವೆ ಈಗ ಬಂದು ಅಂಗಡಿ ಬಾಗಿಲನ್ನು ತೆರೆಯಿರಿ ನಾವು ಪರೀಕ್ಷೆ ಮಾಡಬೇಕು ಎಂದರು. ತಕ್ಷಣ ಅಂಗಡಿ ಮಾಲೀಕ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡರು ಇದರಿಂದ ಅಧಿಕಾರಿಗಳು ಅಂಗಡಿಯನ್ನು ಸೀಜ್ ಮಾಡಿದರು.
ನಂತರ ಅನೇಕ ಸರ್ಕಾರಿ ಹಾಸ್ಟೆಲ್ ಗಳಿಗೆ ಭೇಟಿ ನೀಡಿ ಅಲ್ಲಿನ ಆಹಾರ ಪದಾರ್ಥಗಳನ್ನು ಸಹ ಪರೀಕ್ಷೆ ಮಾಡಿದರು ಕೆಲವು ಕಡೆ ಗುಣಮಟ್ಟದ ಆಹಾರಗಳನ್ನು ನೀಡುತ್ತಿಲ್ಲ ಉತ್ತಮವಾದ ಆಹಾರಗಳನ್ನು ನೀಡಬೇಕು ಜೊತೆಗೆ ಕಲಬೆರಿಕೆಯ ಪದಾರ್ಥಗಳನ್ನು ಬಳಸಬೇಡಿ ಎಂದು ವಾರ್ಡನ್ ಗಳಿಗೆ ಎಚ್ಚರ ನೀಡಿ ಬಂದರು.
ಈ ಸಂದರ್ಭದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ. ಲೋಹಿತ್, ಆಹಾರ ಸುರಕ್ಷಿತೆ ಮತ್ತು ಗುಣಮಟ್ಟ ಪ್ರಾಧಿಕಾರದ ಶ್ರೀನಿವಾಸ್, ಗ್ರೇಡ್ 2 ತಹಶೀಲ್ದಾರ್ ರವಿ ಕುಮಾರ್, ಕಂದಾಯ ಇಲಾಖೆಯ ಅಧಿಕಾರಿಗಳಾದ ನಿರಂಜನ್, ರಾಕೇಶ್ ಮರಾಠ, ಅಶೋಕ್, ಎಎಸ್ಐ ರಂಗರಾಜು, ಹೆಡ್ ಕಾನ್ಸ್ಟೇಬಲ್ ದ್ವಾರ್ಕೀಶ್ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.