ADVERTISEMENT

ಶಿವರಾತ್ರಿ: ಚಾಮರಾಜೇಶ್ವರನಿಗೆ ವಿಶೇಷ ಪೂಜೆ

ರಾತ್ರಿ ಜಾಗರಣೆ, ದೇವರ ದರ್ಶನಕ್ಕೆ ನಿರಂತರ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 1:41 IST
Last Updated 15 ಫೆಬ್ರುವರಿ 2026, 1:41 IST
ಚಾಮರಾಜನಗರದಲ್ಲಿರುವ ಪ್ರಸಿದ್ಧ ಚಾಮರಾಜೇಶ್ವರನ ದೇವಸ್ಥಾನದಲ್ಲಿ ದೇವರಿಗೆ ಬಗೆಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಿರುವುದು
ಚಾಮರಾಜನಗರದಲ್ಲಿರುವ ಪ್ರಸಿದ್ಧ ಚಾಮರಾಜೇಶ್ವರನ ದೇವಸ್ಥಾನದಲ್ಲಿ ದೇವರಿಗೆ ಬಗೆಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಿರುವುದು   

ಚಾಮರಾಜನಗರ: ಶಿವರಾತ್ರಿ ಹಬ್ಬದ ಅಂಗವಾಗಿ ಜಿಲ್ಲೆಯ ಶಿವನ ದೇಗುಲಗಳು ಸಿಂಗಾರಗೊಂಡಿವೆ. ಹಬ್ಬದ ದಿನ ಭಕ್ತರು ಹಗಲು ಹಾಗೂ ರಾತ್ರಿ ನಿರಂತರವಾಗಿ ದೇವರ ದರ್ಶನ ಪಡೆಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಭಾನುವಾರ ಬೆಳಗಿನ ಜಾವ ವಿಶೇಷ ಪೂಜಾ ವಿಧಿವಿಧಾನಗಳು ನಡೆಯಲಿವೆ.

ಚಾಮರಾಜನಗರದಲ್ಲಿರುವ ಪುರಾತನ ದೇಗುಲವಾದ ಚಾಮರಾಜೇಶ್ವರನ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆಗಳು ನಡೆಯಲಿವೆ. ದೇವಸ್ಥಾನದ ಆಗಮಿಕರು ಹಾಗೂ ಪ್ರಧಾನ ಅರ್ಚಕರಾದ ದರ್ಶನ ಅವರ ನೇತೃತ್ವದಲ್ಲಿ ಶಿವರಾತ್ರಿ ಪೂಜಾ ಕೈಂಕರ್ಯಗಳು ನೆರವೇರಲಿದೆ.

ಭಾನುವಾರ ಬೆಳಗಿನ ಜಾವ ಗಣಪತಿ ಪೂಜೆ ಹಾಗೂ ಸ್ತುತಿಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ದೇವರಿಗೆ ಪ್ರಾತಃಕಾಲದಲ್ಲಿ ಪಂಚಾಮೃತ ಅಭಿಷೇಕ, ಏಕವಾರು ರುದ್ರಾಭಿಷೇಕ, ರುದ್ರ ಪರಾಯಾಣಗಳು ನಡೆಯಲಿದೆ. ಬಗೆಬಗೆಯ ಹೂಗಳಿಂದ ಅಲಂಕಾರ ನಡೆಯಲಿದೆ. ಮಹಾ ಮಂಗಳಾರತಿ ನಡೆದ ಬಳಿಕ ಭಕ್ತರಿಗೆ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು.

ADVERTISEMENT

ಶಿವರಾತ್ರಿಯ ದಿನ ನಾಲ್ಕು ಕಾಲಗಳಲ್ಲಿ ಚಾಮರಾಜೇಶ್ವರನಿಗೆ ಪೂಜೆಗಳು ನಡೆಯುವುದು ವಿಶೇಷ. ಪ್ರದೋಷಕಾಲದಲ್ಲಿ ಆರಂಭವಾಗುವ ಕಾಲ ಪೂಜೆ ಮರುದಿನ ಬೆಳಗಿನ ಜಾವ ಕೊನೆಯಾಗಲಿದೆ. ಭಾನುವಾರ ಸಂಜೆ 5 ಗಂಟೆಗೆ ಮೊದಲ ಕಾಲ ಪೂಜೆ ನಡೆದರೆ ರಾತ್ರಿ 9 ಗಂಟೆಯ ಸುಮಾರಿಗೆ ಎರಡನೇ ಪೂಜೆ, ಸೋಮವಾರ ಮಧ್ಯಾಹ್ನ 12 ಗಂಟೆಗೆ ಮೂರನೇ ಹಾಗೂ ಮಧ್ಯಾಹ್ನ 3 ಗಂಟೆ ಕೊನೆಯ ಪೂಜೆ ನೆರವೇರಲಿದೆ.

ಮಕ್ಕಳ ಚಾಮರಾಜೇಶ್ವರ ಎಂದೇ ಪ್ರಸಿದ್ಧಿ ಪಡೆದಿರುವ ದೇವರ ದರ್ಶನಕ್ಕೆ ಶಿವರಾತ್ರಿಯ ದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ, ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಭಕ್ತರು ಬರುವುದು ವಾಡಿಕೆ. ದೇಗುಲಕ್ಕೆ ಶತಮಾನಗಳ ಇತಿಹಾಸ ಇರುವುದು ಹಾಗೂ ಕೆಂಪು, ಕಪ್ಪು, ಬಿಳಿ ಮಿಶ್ರಿತ ಬಣ್ಣದ ಶಿವಲಿಂಗ ಪ್ರತಿಷ್ಠಾಪನೆಯಾಗಿವುದು ಕ್ಷೇತ್ರದ ವಿಶೇಷ ಎನ್ನುತ್ತಾರೆ ಆಗಮಿಕರಾದ ದರ್ಶನ.

ಎರಡು ಶತಮಾನಗಳ ಹಿಂದೆ ಅಂದಿನ ಮೈಸೂರು ಮಹಾರಾಜರು ಶೈವಾಗಮೋಕ್ತವಾಗಿ ಚಾಮರಾಜೇಶ್ವರನ ಲಿಂಗವನ್ನು ಕೆತ್ತಿಸಿ ಚಾಮರಾಜೇಶ್ವರನ ದೇಗುಲ ನಿರ್ಮಾಣ ಮಾಡುವ ಸಂಕಲ್ಪ ಮಾಡಿಕೊಂಡು ಶೃಂಗೇರಿ ಪೀಠಕ್ಕೆ ತೆರಳಿ ನೃಸಿಂಹ ಭಾರತಿ ಶ್ರೀಗಳ ಅನುಗ್ರಹ ಕೋರಿದಾಗ ಶ್ರೀಗಳು ಆಶೀರ್ವಾದದ ಜೊತೆಗೆ ಶಿವಲಿಂಗವನ್ನೂ ನೀಡಿದರು.

ಶಂಕರಾಚಾರ್ಯರು ಕಾಶಿಯಿಂದ ತಂದಿದ್ದ ಶಿವಲಿಂಗವನ್ನು ಮಹಾರಾಜರಿಗೆ ಹಸ್ತಾಂತರಿಸಿದ ಶೃಂಗೇರಿ ಶ್ರೀಗಳು ಚಾಮರಾಜನಗರದಲ್ಲಿ ಪ್ರತಿಷ್ಠಾಪನೆ ಮಾಡಿಸಿದರು. ಹಿಂದೆ ಮಹಾರಾಜರು ನಿರ್ಮಿಸಿದ್ದ ಪರ್ಯಾಯ ಶಿವಲಿಂಗವನ್ನು ದೇಗುಲದ ಹಿಂಬದಿಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ದೈವತ್ವ ಹಾಗೂ ರಾಜತ್ವದ ಸಂಕೇತವಾಗಿ ಕ್ಷೇತ್ರ ವಿಶಿಷ್ಟವಾಗಿದೆ ಎಂದು ಆಗಮಿಕರಾದ ದರ್ಶನ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.