ADVERTISEMENT

ಮಹದೇಶ್ವರ ಬೆಟ್ಟ | ಬುಧವಾರದಿಂದ ಶಿವರಾತ್ರಿ ಜಾತ್ರೆ: ಸ್ಥಳೀಯರಿಗೆ ಮಾತ್ರ ಅವಕಾಶ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 14:57 IST
Last Updated 9 ಮಾರ್ಚ್ 2021, 14:57 IST
ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ
ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ   

ಹನೂರು/ಮಹದೇಶ್ವರ ಬೆಟ್ಟ: ಗಡಿ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಮಲೆ ಮಹದೇಶ್ವರಸ್ವಾಮಿಯ ಶಿವರಾತ್ರಿ ಜಾತ್ರಾ ಮಹೋತ್ಸವ ಬುಧವಾರದಿಂದ (ಮಾರ್ಚ್‌ 10) ಐದು ದಿನಗಳ ಕಾಲ (ಮಾರ್ಚ್‌ 14ರವರೆಗೆ) ನಡೆಯಲಿದೆ.

ಕೋವಿಡ್‌ ಕಾರಣಕ್ಕೆ ಮಹದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿ ಬಿಟ್ಟು, ಜಿಲ್ಲೆಯ ಇತರೆಡೆಗಳು, ಹೊರ ಜಿಲ್ಲೆಗಳ ಹಾಗೂ ಹೊರ ರಾಜ್ಯಗಳ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.ಗರಿಷ್ಠ 10 ಸಾವಿರದವರೆಗೆ ಭಕ್ತರ ಭಾಗವಹಿಸುವಿಕೆಗೆ ಮಾತ್ರ ಜಿಲ್ಲಾಡಳಿತ ಅವಕಾಶ ನೀಡಿದೆ.

ಐದು ದಿನಗಳ ಕಾಲ ಸಾಂಪ್ರದಾಯಿಕ ವಿಧಿ ವಿಧಾನಗಳಂತೆ ಜಾತ್ರೆ ನಡೆಯಲಿದೆ. ಮೊದಲ ದಿನವಾದ ಬುಧವಾರ ಎಂದಿನಂತೆ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಗುರುವಾರ (ಮಾರ್ಚ್‌ 1‌1) ಮಹಾಶಿವರಾತ್ರಿ ಎಣ್ಣೆ ಮಜ್ಜನ ವಿಶೇಷ ಸೇವೆ ಉತ್ಸವಾದಿಗಳು ಹಾಗೂ ಜಾಗರಣೆ ಉತ್ಸವ ನಡೆಯಲಿದೆ. 12 ಮತ್ತು 13ರಂದು ಅಮಾವಾಸ್ಯೆ ವಿಶೇಷ ಪೂಜೆಗಳು ಜಗುರಗಲಿವೆ. 14 ರಂದು ಬೆಳಿಗ್ಗೆ 9.45 ರಿಂದ 11.30ರಗವರೆಗೆ ಮಹಾ ರಥೋತ್ಸವ ನಡೆಯಲಿದೆ. ಅದೇ ದಿನ ರಾತ್ರಿ ಅಭಿಷೇಕ ಪೂಜೆ ಮುಗಿದ ನಂತರ, ಕೊಂಡೋತ್ಸವ ಸಂಪನ್ನಗೊಳ್ಳಲಿದೆ.

ADVERTISEMENT

ವಿಶೇಷ ಸೇವೆ ಉತ್ಸವಗಳು ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ನೇತೃತ್ವದಲ್ಲಿ ನೆರವೇರಲಿದೆ ಎಂದು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಭಕ್ತರಿಗಿಲ್ಲ ಅವಕಾಶ: ಬೆಟ್ಟದಲ್ಲಿ ನಡೆಯುವ ಮೊದಲ ಜಾತ್ರೆ ಇದು. ಈ ಜಾತ್ರೆಯಲ್ಲಿ ಭಾಗವಹಿಸುವುದಕ್ಕಾಗಿ ಐದು ದಿನಗಳ ಕಾಲ ಲಕ್ಷಾಂತರ ಭಕ್ತರು ಕಾಲ್ನಡಿಗೆ, ವಾಹನಗಳ ಮೂಲಕ ಬೆಟ್ಟಕ್ಕೆ ಬರುತ್ತಾರೆ. ಕೋವಿಡ್‌ನಿಂದಾಗಿ ಸ್ಥಳೀಯರಿಗೆ ಸೀಮಿತವಾಗಿ ಜಾತ್ರೆ ನಡೆಸಲು ಜಿಲ್ಲಾಡಳಿತ ಹಾಗೂ ಪ್ರಾಧಿಕಾರ ತೀರ್ಮಾನಿಸಿರುವುದರಿಂದ ಲಕ್ಷಾಂತರ ಭಕ್ತರಿಗೆ ನಿರಾಸೆಯಾಗಿದೆ.

ಜಾತ್ರೆಯ ಸಿದ್ಧತೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು, ‘ಹೊರಗಿನ ಭಕ್ತರಿಗೆ ಅವಕಾಶ ಇಲ್ಲ ಎನ್ನುವುದು ಬಿಟ್ಟರೆ, ಜಾತ್ರೆ ಎಂದಿನಂತೆ ನಡೆಯಲಿದೆ. ದೇವಾಲಯಕ್ಕೆ ಅಲಂಕಾರ, ಪೂಜೆ ಪುನಸ್ಕಾರ, ರಥೋತ್ಸವ ಕೊಂಡೋತ್ಸವ ಸೇರಿದಂತೆ ಕಾರ್ಯಕ್ರಮಗಳು ನಡೆಯಲಿವೆ. ದಾಸೋಹವೂ ಎಂದಿನಂತೆ ನಡೆಯಲಿದೆ. ವಿಶೇಷ ಅತಿಥಿಗಳಿಗೆ ಆಮಂತ್ರಣ ಪತ್ರ ಕಳುಹಿಸಲಾಗಿದ್ದು, ಅವರ ಪ್ರವೇಶಕ್ಕೆ ಅವಕಾಶ ಇದೆ. ತಂಗುವ ವ್ಯವಸ್ಥೆ, ವಿಶೇಷ ಬಸ್‌ ಸೌಲಭ್ಯಗಳು ಇರುವುದಿಲ್ಲ’ ಎಂದು ಹೇಳಿದರು.

ಭಕ್ತರು, ಸ್ಥಳೀಯರ ಅಸಮಾಧಾನ: ಕಳೆದ ವರ್ಷ ಲಾಕ್‌ಡೌನ್‌ ಆರಂಭವಾದಾಗಿನಿಂದ ಬೆಟ್ಟದಲ್ಲಿ ಯಾವುದೇ ಜಾತ್ರೆಗಳು ನಡೆಯದೆ ಇದ್ದುದರಿಂದ ಸ್ಥಳೀಯರು ಹಾಗೂ ವ್ಯಾಪಾರಿಗಳಿಗೆ ಸಂಪಾದನೆ ಇಲ್ಲದಂತಾಗಿದ್ದು, ನವೆಂಬರ್‌ ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಿತ್ತು.

ಜಾತ್ರೆಯ ಸಮಯದಲ್ಲಿ ಲಕ್ಷಾಂತರ ಭಕ್ತರು ಸೇರುವುದರಿಂದ ವ್ಯಾಪಾರ ಜೋರಾಗಿ ನಡೆದು, ಸ್ಥಳೀಯರಿಗೆ ಆರ್ಥಿಕವಾಗಿ ಲಾಭವಾಗುತ್ತದೆ. ಈ ಬಾರಿ ಸ್ಥಳೀಯರಿಗೆ ಮಾತ್ರ ಜಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ಇರುವುದರಿಂದ ಹೆಚ್ಚಿನ ಆದಾಯ ಬರುವುದಿಲ್ಲ ಎಂಬುದು ಅವರ ಹೇಳಿಕೆ.

‘ಸಣ್ಣ ಹಾಗೂ ಬೀದಿಬದಿಯಲ್ಲಿವ್ಯಾಪಾರವನ್ನೇ ನಂಬಿ ಜೀವನ ಸಾಗಿಸುತಿದ್ದ ನಮಗೆ ತೀವ್ರ ಪೆಟ್ಟು ಬಿದ್ದಂತಾಗಿದೆ. ಕೋವಿಡ್‌ನಿಂದ ಕಂಗೆಟ್ಟಿದ್ದ ನಾವು ಸ್ವಲ್ಪ ಮಟ್ಟಿಗಾದರೂ ಚೇತರಿಕೆ ಕಂಡಿದ್ದೆವು. ದೊಡ್ಡ ಜಾತ್ರೆಯಾದ ಶಿವರಾತ್ರಿಯನ್ನೇ ನಂಬಿದ್ದ ನಮಗೆ ದೊಡ್ಡ ಆಘಾತವಾಗಿದೆ’ ಎಂದು ಸ್ಥಳೀಯ ವ್ಯಾಪಾರಿ ಗೋಪಾಲಕೃಷ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಐದಾರು ವರ್ಷಗಳಿಂದ ನಾವು ಶಿವರಾತ್ರಿ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿ ಬಂದು ಹಬ್ಬದ ದಿನ ಜಾಗರಣೆ ಮಾಡಿ ವಿವಿಧ ರೀತಿಯ ಉತ್ಸವಗಳನ್ನು ನೆರವೇರಿಸಿ ಮಾದೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗುತಿದ್ದೆವು. ಈ ಬಾರಿ ನಿರಾಸೆಯಾಗಿದೆ’ ಎಂದು ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಬಂದಿದ್ದ ಭಕ್ತರಾದಶಿವಕುಮಾರ್ ಹಾಗೂ ಮಾಲತಿ ಅವರು ಹೇಳಿದರು.

₹ 4 ಕೋಟಿ ಆದಾಯ ಖೋತಾ
ಶಿವರಾತ್ರಿಯ ಸಂದರ್ಭದಲ್ಲಿ ದೇವಾಲಯಕ್ಕೆ ಕೊಟ್ಯಂತರ ರೂಪಾಯಿ ಆದಾಯ ಬರುತಿತ್ತು. ಸ್ಥಳೀಯರಿಗೆ ಮಾತ್ರ ಅವಕಾಶ ಇರುವುದರಿಂದ ಪ್ರಾಧಿಕಾರಕ್ಕೆ ನಷ್ಟವಾಗಲಿದೆ.

‘ಜಾತ್ರೆ ನಡೆದರೆ ₹ 3.5 ಕೋಟಿಯಿಂದ ₹ 4 ಕೋಟಿವರೆಗೆ ಆದಾಯ ಬರುತ್ತದೆ. ದೇವಸ್ಥಾನದ ಅಲಂಕಾರ ಸೇರಿದಂತೆ ಎಲ್ಲ ವ್ಯವಸ್ಥೆಯನ್ನೂ ಮಾಡಬೇಕಾಗಿರುವುದರಿಂದ ಪ್ರಾಧಿಕಾರಕ್ಕೆ ಖರ್ಚು ಎಂದಿನಂತೆ ಇದೆ. ಹೊರಗಿನ ಭಕ್ತರಿಗೆ ಅವಕಾಶ ಇಲ್ಲದಿರುವುದರಿಂದ ಪ್ರಾಧಿಕಾರಕ್ಕೆ ಆದಾಯ ಖೋತಾ ಆಗಲಿದೆ’ ಎಂದು ಜಯವಿಭವಸ್ವಾಮಿ ಅವರು ಮಾಹಿತಿ ನೀಡಿದರು.

ಬಿಗಿ ಬಂದೋಬಸ್ತ್‌, ಚೆಕ್‌ಪೋಸ್ಟ್‌ ನಿರ್ಮಾಣ
ಈ ಮಧ್ಯೆ, ಹೊರಗಿನಿಂದ ಬರುವ ಭಕ್ತರನ್ನು ತಡೆಯುವುದಕ್ಕಾಗಿ ಪೊಲೀಸರು ಕೊಳ್ಳೇಗಾಲ ಉಪವಿಭಾಗ ವ್ಯಾಪ್ತಿಯಲ್ಲಿ ಹಲವು ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದಾರೆ.

ಕೊಳ್ಳೇಗಾಲ ಸತ್ತೇಗಾಲ, ಟಗರಪುರ, ಹನೂರು, ಕೌದಳ್ಳಿ, ನಾಲ್ ರೋಡ್, ತಾಳಬೆಟ್ಟ ಮುಂತಾದ ಕಡೆಗಳಲ್ಲಿ ಬ್ಯಾರಿಕೇಡ್ ಗಳನ್ನು ನಿರ್ಮಿಸಿ ಸಿಬ್ಬಂದಿ ನಿಯೋಜಿಸಲಾಗಿದೆ.

ಭದ್ರತೆಗಾಗಿ ಡಿವೈಎಸ್‌ಪಿ ನಾಗರಾಜು ಅವರ ನೇತೃತ್ವದಲ್ಲಿ ಐವರು ಇನ್ಸ್ಪೆಕ್ಟರ್, 15 ಮಂದಿ ಸಬ್‌ ಇನ್‌ಸ್ಪೆಕ್ಟರ್‌ಗಳು, 25 ಎಎಸ್ಐ, 120 ಹೆಡ್ ಕಾನ್‌ಸ್ಟೆಬಲ್‌ಗಳನ್ನು ನಿಯೋಹಿಸಲಾಗಿದೆ.

‘ಪಾಲಾರ್ ಮೂಲಕ ಬರುವುದನ್ನು ನಿಷೇಧ ಮಾಡಲಾಗಿದೆ. ಹೊಗೆನಕಲ್ ಜಲಪಾತದಲ್ಲಿ ದೋಣಿ ಮೂಲಕವೂ ಭಕ್ತರು ಆಗಮಿಸುವ ಸಂಭವವಿರುವುದರಿಂದ ಮಾರಿಕೋಟೈ ಗ್ರಾಮದಲ್ಲೂ ನಾಲ್ಕು ದಿನಗಳ ಕಾಲ ತೆಪ್ಪ ಸಂಚಾರ ನಿಷೇಧಿಸಲಾಗಿದೆ. ಬೆಟ್ಟಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರನ್ನು ಮಾತ್ರ ತಡೆಯಲಾಗುವುದು. ಅಂತರರಾಜ್ಯ ವಾಹನಗಳಿಗೆ ನಿರ್ಬಂಧ ಇರುವುದಿಲ್ಲ’ ಎಂದು ಮಹದೇಶ್ವರ ಬೆಟ್ಟದ ಇನ್ ಸ್ಪೆಕ್ಟರ್ ರಮೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.