
ಮಹದೇಶ್ವರ ಬೆಟ್ಟ: ನಾಡಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರನ ದೇವಸ್ಥಾನದಲ್ಲಿ ಶನಿವಾರ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಆರಂಭವಾಯಿತು. ಮೊದಲ ದಿನ ಮಾದಪ್ಪನಿಗೆ ವಿಶೇಷ ಪೂಜೆಗಳು ನಡೆದವು. ಲಕ್ಷಾಂತರ ಭಕ್ತರು ದೇಗುಲಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು.
ಭಕ್ತ ಸಾಗರ: ಶಿವರಾತ್ರಿ ಹಬ್ಬದಲ್ಲಿ ಮಹದೇಶ್ವರನ ದರ್ಶನದಿಂದ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ಅಚಲವಾಗಿರುವುದರಿಂದ ಮಾದಪ್ಪನ ದರ್ಶನ ಪಡೆಯಲು ಭಕ್ತಸಾಗರವೇ ಹರಿದು ಬಂದಿತ್ತು. ದೇಗುಲದ ಆವರಣದಲ್ಲಿ ಕಣ್ಣು ಹಾಯಿಸಿದಷ್ಟು ದೂರ ಭಕ್ತರು ತುಂಬಿ ತುಳುಕುತ್ತಿದ್ದರು. ಎಲ್ಲೆಡೆ ಮಹದೇಶ್ವರನ ಸ್ಮರಣೆ ಅನುರಣಿಸುತ್ತಿತ್ತು.
ಜಾತ್ರೆ ಆರಂಭಕ್ಕೂ ಮುನ್ನವೇ ನಾಡಿನ ಹಲವು ಭಾಗಗಳಿಂದ ಭಕ್ತರು ಕಾಲ್ನಡಿಗೆಯಲ್ಲಿ ಬಂದು ಕ್ಷೇತ್ರದಲ್ಲಿ ಬಿಡಾರ ಹೂಡಿದ್ದಾರೆ. ದೇಗುಲದ ಪ್ರಾಂಗಣ, ಸಾಲೂರು ಮಠದ ಸುತ್ತಮುತ್ತ, ಸಾರ್ವಜನಿಕ ಸ್ಥಳಗಳಲ್ಲಿ ಬಿಡಾರ ಹೂಡಿರುವ ಭಕ್ತರು ಮಹಾ ರಥೋತ್ಸವದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ. ರಾಜ್ಯದ ನಾನಾ ಬಾಗಗಳಲ್ಲದೆ ನೆರೆಯ ರಾಜ್ಯಗಳಾದ ತಮಿಳುನಾಡು ಹಾಗೂ ಕೇರಳದಿಂದಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ
ಬಂದಿದ್ದಾರೆ.
ಶನಿವಾರ ರಾತ್ರಿಯಿಂದ ವಿಶೇಷ ಪೂಜಾ ವಿಧಿ ವಿಧಾನಗಳು ಆರಂಭವಾದವು. ಮಹದೇಶ್ವರ ಸ್ವಾಮಿಗೆ ಬೇಡಗಂಪಣರ ಪೂಜಾ ಪದ್ಧತಿಯಂತೆ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಶಿವನ ಆಲಯದ ಪ್ರತಿರೂಪವಾಗಿರುವ ಮಾದಪ್ಪನ ಸನ್ನಿಧಿಯಲ್ಲಿ ಭಾನುವಾರ ರಾತ್ರಿ ಜಾಗರಣೆ ನಡೆಯಲಿದೆ.
ಜಾಗರಣೆಯ ದಿನ ದೇಗುಲದ ಸುತ್ತಲೂ ಜಮಾಯಿಸುವ ಭಕ್ತರು ಶಿವನ ನಾಮಸ್ಮರಣೆ ಮಾಡಲಿದ್ದಾರೆ. ಗಡಿ ಗ್ರಾಮಗಳಿಂದ ಬಂದಿರುವ ಭಕ್ತರು ದೇವಾಲಯದ ಸುತ್ತಲೂ ಕಸ ಹೊಡೆದು (ರಜಾ ಸೇವೆ) ಹರಕೆ ಸಲ್ಲಿಸುವುದು ವಾಡಿಕೆಯಾಗಿದ್ದು ಈ ವರ್ಷವೂ ಮುಂದುವರಿದಿದೆ.
ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಪ್ರತಿ ಜಾತ್ರೆಯಲ್ಲೂ ವಿಭಿನ್ನ ಆಚರಣೆ, ಹರಕೆ ಪದ್ಧತಿ ರೂಢಿಯಲ್ಲಿದೆ. ದೀಪಾವಳಿ ಜಾತ್ರೆಯಲ್ಲಿ ಮಣ್ಣಿನ ಹಣತೆ ಹಚ್ಚಿ ದೇವರಿಗೆ ಪ್ರಾರ್ಥನೆ ಮಾಡಲಾಗುತ್ತದೆ. ಹಾಗೆಯೇ ಶಿವರಾತ್ರಿ ಹಬ್ಬದಲ್ಲಿ ರಜಾ ಸೇವೆ ಹಾಗೂ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನ್ನ ಸಂತರ್ಪಣೆ ಮೂಲಕವೂ ಭಕ್ತರು ಹರಕೆ ತೀರಿಸುವುದು ರೂಢಿಯಲ್ಲಿದೆ.
ಭಕ್ತರು ನಿರಂತರವಾಗಿ ದೇವರ ದರ್ಶನ ಪಡೆಯುತ್ತಿದ್ದಾರೆ. ಪ್ರಸಾದ ರೂಪವಾಗಿ ವಿತರಿಸಲು 3 ಲಕ್ಷಕ್ಕೂ ಹೆಚ್ಚಿನ ಲಾಡುಗಳನ್ನು ತಯಾರಿಸಲಾಗಿದ್ದು ವಿತರಣೆಗೆ ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಲಾಗಿದೆ. ಕ್ಷೇತ್ರಕ್ಕೆ ಬಂದ ಭಕ್ತರೆಲ್ಲರಿಗೂ ಲಾಡು ಪ್ರಸಾದ ಸಿಗಬೇಕು ಎಂಬ ಉದ್ದೇಶದಿಂದ ಹೆಚ್ಚುವರಿ ಲಾಡು ಪ್ರಸಾದ ತಯಾರು ಮಾಡುವಂತೆ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ದೇಗುಲದ ನೌಕರರಿಗೆ ಸೂಚನೆ ನೀಡಿದ್ದು ಅದರಂತೆ ಲಾಡು ತಯಾರಿಕೆ ನಡೆಯುತ್ತಿದೆ.
ಹಬ್ಬದ ದಿನ ಲಾಡು ತಯಾರಿಕಾ ಘಟಕ, ದಾಸೋಹ ಭವನಕ್ಕೆ ಭೇಟಿನೀಡಿದ ಕಾರ್ಯದರ್ಶಿ ಭಕ್ತರಿಗೆ ಸಮರ್ಪಕವಾದ ಊಟದ ವ್ಯವಸ್ಥೆ ಹಾಗೂ ಕ್ಷೇತ್ರದ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು.
ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಬಂದಿರುವ ಭಕ್ತರಿಗೆ ವಾಪಸ್ ತೆರಳುವವರೆಗೂ ದೇವಾಲಯದ ಆವರಣದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ನಿರಂತರವಾಗಿ ದಾಸೋಹ, ದೇವರ ದರ್ಶನದ ಸರದಿ ಸಾಲಿಗೆ ನೆರಳಿನ ವ್ಯವಸ್ಥೆ
ಮಾಡಲಾಗಿದೆ.
ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಮಲೆ ಮಹದೇಶ್ವರನ ದೇವಸ್ಥಾನ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವುದು
ವಿದ್ಯುತ್ ದೀಪಾಲಂಕಾರ
ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಮಾದಪ್ಪನ ಸನ್ನಿಧಿ ವಿದ್ಯುತ್ ದೀಪಾಲಂಕಾರಗಳಿಂದ ಸಿಂಗಾರಗೊಂಡಿದೆ. ಬಣ್ಣ ಬಣ್ಣದ ಎಲ್‌ಇಡಿ ಲೈಟ್‌ಗಳಿಂ ಶಿವನ ಮಾದರಿಯನ್ನು ತಯಾರಿಸಿ ಕ್ಷೇತ್ರದ ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗಿದ್ದು ಕಣ್ಮನ ಸೆಳೆಯುತ್ತಿವೆ. ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಉದ್ದಕ್ಕೂ ವಿದ್ಯುತ್ ದೀಪಗಳ ತೋರಣ ಹಾಕಲಾಗಿದೆ. ಫೆ.14ರಿಂದ 18ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.