ಮಹದೇಶ್ವರ ಬೆಟ್ಟ: ರಾಜ್ಯದ ಗಡಿಭಾಗದಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳವಾಗಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ ಕಳೆಗಟ್ಟಿದೆ. ರಾಜ್ಯ, ಹೊರ ರಾಜ್ಯ ಹಾಗೂ ವಿದೇಶಗಳಿಂದಲೂ ಭಕ್ತರು ಕ್ಷೇತ್ರಕ್ಕೆ ಹರಿದುಬರುತ್ತಿದ್ದು ಮಾದಪ್ಪನ ದರ್ಶನ ಪಡೆಯುತ್ತಿದ್ದಾರೆ. ಕ್ಷೇತ್ರದಲ್ಲಿ ನಡೆಯುವ ವರ್ಷದ ಮೊದಲ ಅದ್ಧೂರಿ ಶಿವರಾತ್ರಿ ಜಾತ್ರೆಯನ್ನು ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ.
ಬುಧವಾರ ಆರಂಭವಾಗಿರುವ ಶಿವರಾತ್ರಿ ಜಾತ್ರೆ ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದ್ದು ಮಾದಪ್ಪನ ಸ್ಮರಣೆ ಅನುರಣಿಸುತ್ತಿದೆ. ಜಾತ್ರೆಯ ಮೊದಲ ದಿನವಾದ ಬುಧವಾರ ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯದಲ್ಲಿ ಮಠಕ್ಕೆ ಉತ್ಸವಮೂರ್ತಿಯನ್ನು ಕೊಂಡೊಯ್ಯುವ ಮೂಲಕ ಜಾತ್ರೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು.
ಜಾತ್ರೆ ಅಂಗವಾಗಿ ಮಾದಪ್ಪನಿಗೆ ಹಲವು ಬಗೆಯ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ. ದೇವಾಲಯದ ಪ್ರಾಂಗಣವೂ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದೆ. ಬೆಳಿಗ್ಗೆ ಮಲೆ ಮಹದೇಶ್ವರಸ್ವಾಮಿ ವಿಶೇಷ ಪೂಜೆ ನಡೆಯಿತು. ಮಾದೇಶ್ವರನಿಗೆ ಪ್ರಿಯವಾದ ಅಭಿಷೇಕ, ಬಿಲ್ವಾರ್ಚನೆ, ನೈವೇದ್ಯ ಸಲ್ಲಿಕೆಯಾಯಿತು. ಬೇಡಗಂಪಣ ಅರ್ಚಕರು ಮಹಾ ಮಂಗಳಾರತಿ ಬೆಳಗಿದರು. ಭಕ್ತರು ಸರತಿ ಸಾಲಿನಲ್ಲಿ ತೆರಳಿ ಸ್ವಾಮಿಯ ದರ್ಶನ ಪಡೆದರು.
ಎಣ್ಣೆ ಮಜ್ಜನ ಸೇವೆ: ಮಹದೇಶ್ವರ ಸ್ವಾಮಿಗೆ ಎಣ್ಣೆಮಜ್ಜನ ಸೇವೆ ನೆರವೇರಿಸಲಾಯಿತು. ಬೇಡಗಂಪಣ ಸಮುದಾಯದ ವಿಧಿವಿಧಾನಗಳಂತೆ ಎಣ್ಣೆ ಮಜ್ಜನ ಮಾಡಿದ ಅರ್ಚಕರು ಮಹಾಮಂಗಳಾರತಿ, ಬಿಲ್ವಾರ್ಚನೆ, ಮಹಾರುಧ್ರಾಭಿಷೇಕ ನೆರವೇರಿಸಿದರು.
ಭಕ್ತರಿಗೆ ಧರ್ಮ ದರ್ಶನ ಸಾಲಿನ ಜೊತೆಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಮಾದೇಶ್ವರ ಸ್ವಾಮಿಗೆ ಉರುಳು ಸೇವೆ, ಪಂಜಿನ ಸೇವೆ, ಧೂಪದ ಸೇವೆ, ರುದ್ರಾಕ್ಷಿ ಮಂಟಪ ಸೇವೆ, ಬಸವ ವಾಹನ, ಹುಲಿವಾಹನ, ಬೆಳ್ಳಿ ರಥೋತ್ಸವ, ಚಿನ್ನದ ರಥೋತ್ಸವ ಸೇವೆಗಳನ್ನು ಸಲ್ಲಿಸಿದರು. ಬಳಿಕ ರಾತ್ರಿ ನಡೆದ ಜಾಗರಣೆ ಉತ್ಸವದಲ್ಲಿ ಪಾಲ್ಗೊಂಡು ಮಾದೇಶ್ವರನ ಸ್ಮರಣೆ ಮಾಡಿದರು.
ಹರಕೆ ಸಲ್ಲಿಕೆ: ಹರಕೆ ಹೊತ್ತ ಭಕ್ತರು ಅಂತರಗಂಗೆಯಲ್ಲಿ ಮಿಂದು ದೇವಾಲಯದ ಸುತ್ತ ಪ್ರದಕ್ಷಿಣೆ, ಉರುಳು ಸೇವೆ ಹಾಕಿದರು. ಪಂಜಿನ ಸೇವೆ ಸಲ್ಲಿಸಿ ದೇವಾಲಯದ ಮುಂಭಾಗ ಹಿಡುಗಾಯಿ ಹೊಡೆದು ಹರಕೆ ಸಮರ್ಪಿಸಿದರು. ಹೊರ ಆವರಣದಲ್ಲಿ ಬೆಳ್ಳಿತೇರು ಉತ್ಸವ, ಬಸವ ವಾಹನ, ಹುಲಿ ವಾಹನ, ರುದ್ರಾಕ್ಷಿ ಮಂಟಪ ಹಾಗೂ ಇತರ ಉತ್ಸವಾದಿ ಸೇವೆಗಳು ನಡೆದವು.
ಚಿನ್ನದ ರಥೋತ್ಸವ: ರಾತ್ರಿ 7ಗಂಟೆಯ ಹೊತ್ತಿಗೆ ಚಿನ್ನದ ರಥವನ್ನು ಹೊರತರಲಾಯಿತು. ಈ ಸಂದರ್ಭ ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ಉಘೇ ಮಾದಪ್ಪ, ಉಘೇ ಉಘೇ ಜೈಕಾರ ಮೊಳಗಿಸಿ ಚಿನ್ನದ ರಥವನ್ನು ಕಣ್ತುಂಬಿಕೊಂಡರು. ದೇವಸ್ಥಾನ ಸುತ್ತ ಮೆರವಣಿಗೆಯಲ್ಲಿ ಚಿನ್ನದ ರಥ ಸಾಗಿತು. ಭಕ್ತರು ಕಿಕ್ಕಿರಿದು ತುಂಬಿದ್ದರು.
ಬಿಡಾರ: ಚಾಮರಾಜನಗರ, ಬೆಂಗಳೂರು, ನಂಜನಗೂಡು, ಕನಕಪುರ, ಮಂಡ್ಯ, ಮಳವಳ್ಳಿ, ರಾಮನಗರ, ಬಿಡದಿ, ಚನ್ನಪಟ್ಟಣ, ಕೆಎಂ ದೊಡ್ಡಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಜಾತ್ರೆಗೆ ಬಂದಿದ್ದಾರೆ. ಕನಕಪುರ ಭಾಗದಿಂದ ಕಾವೇರಿ ನದಿದಾಟಿ ಶಾಗ್ಯ ಮೂಲಕ ಅರಣ್ಯ ನಡುವೆ ಕಾಲ್ನಡಿಗೆ ಮೂಲಕ ಅಪಾರ ಸಂಖ್ಯೆಯ ಭಕ್ತರು ಬೆಟ್ಟವನ್ನು ತಲುಪಿದ್ದಾರೆ. ದೇವಾಲಯ ಪ್ರಾಂಗಣ, ಸಾಲೂರು ಮಠ, ಕಲ್ಯಾಣ ಮಂಟಪ, ಬಸ್ ನಿಲ್ದಾಣ ಹಾಗೂ ಇನ್ನಿತರ ಸ್ಥಳಗಳಲ್ಲಿ ಭಕ್ತರು ಬಿಡಾರ ಹೂಡಿದ್ದಾರೆ.
ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು.ಎ.ಈ ಸ್ಥಳದಲ್ಲಿ ಬೀಡುಬಿಟ್ಟಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ದಾಸೋಹದ ವ್ಯವಸ್ಥೆ, ಕುಡಿಯುವನೀರು, ಪ್ರತ್ಯೇಕ ಲಾಡು ಕೌಂಟರ್, ಹೆಚ್ಚುವರಿ ಶೌಚಾಲಯ, ಸ್ನಾನಗೃಹಗಳನ್ನು ತೆರೆಯಲಾಗಿದೆ.
ವಿದ್ಯುತ್ ದೀಪಾಲಂಕಾರ: ದೇವಾಲಯದ ಸುತ್ತಮುತ್ತ ಕಣ್ಮನ ಸೆಳೆಯುವ ವರ್ಣರಂಜಿತ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಜೊತೆಗೂಡಿ ತಾಳುಬೆಟ್ಟ ಬಳಿ ಚೆಕ್ ಪೋಸ್ಟ್ ತೆರೆಯಲಾಗಿದ್ದು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲಾಗಿದೆ. ಪ್ಲಾಸ್ಟಿಕ್ ನೀರಿನ ಬಾಟಲಿಗಳ ಬಳಕೆ ಮಾಡದಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ಲಾಡು ಪ್ರಸಾದ
ಕ್ಷೇತ್ರಕ್ಕೆ ಬರುವ ಭಕ್ತರಿಗೆ ಪ್ರಸಾದವಾಗಿ ವಿತರಿಸಲು ಲಕ್ಷಾಂತರ ಸಂಖ್ಯೆಯ ಲಾಡುಗಳನ್ನು ತಯಾರಿಸಲಾಗಿದೆ. ಭಕ್ತರ ದಟ್ಟಣೆ ಹಾಗೂ ಬೇಡಿಕೆ ಅನುಗುಣವಾಗಿ ದಿನಂಪ್ರತಿ ಲಾಡುಗಳನ್ನು ಸಿದ್ದಪಡಿಸಲಾಗುತ್ತಿದೆ. ತುಪ್ಪ ಸಹಿತ ಇತರೆ ಪದಾರ್ಥಗಳನ್ನು ಬಳಸಿ ತಯಾರಿಸುವ ಲಾಡುಗೆ ಬೇಡಿಕೆ ಹೆಚ್ಚಾಗಿದೆ.
ಮಹಾರಥ ಸಜ್ಜು
ಮಹದೇಶ್ವರ ಬೆಟ್ಟದ ಬೇಡಗಂಪಣ ಅರ್ಚಕರು ಮಹಾರಥ ನಿರ್ಮಾಣ ಮಾಡಿದ್ದು ಮಾರ್ಚ್ 1ರಂದು ಮಹಾರಥೋತ್ಸವ ನಡೆಯಲಿದೆ. ಬಿದಿರು ಹಾಗೂ ಉರಿಯ ಹಗ್ಗಗಳಿಂದ ರಥವನ್ನು ತಯಾರಿಸಲಾಗಿದ್ದು 27 ಮೊಳ ಎತ್ತರ ಇರಲಿದೆ. ಪೆಟ್ಟಿಗೆ ಗುಬುರು ಬಾಗಲವಾಡಿ ದುಂಡದೂಡು ತಾಳಗಳನ್ನು ಹೊಂದಿರುವ ರಥಕ್ಕೆ ಆಕರ್ಷಕ ಬಣ್ಣಗಳ ವಸ್ತ್ರಾಲಂಕಾರ ಮಾಡಲಾಗಿದ್ದು ತೇರು ಕಂಗೊಳಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.