ಚಾಮರಾಜನಗರ: ಹಣ್ಣುಗಳ ರಾಜ ಎಂದು ಕರೆಸಿಕೊಳ್ಳುವ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಗ್ರಾಹಕರು ತರಹೇವಾರಿ ಮಾವು ಖರೀದಿಸಿ ರುಚಿ ಸವಿಯುತ್ತಿದ್ದಾರೆ. ಬಾದಾಮಿ, ಸಿಂಧೂರ, ರಸಪೂರಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗಿದ್ದು ಬೆಲೆ ಸ್ವಲ್ಪ ದುಬಾರಿಯಾಗಿದೆ.
ಬಾದಾಮಿ ಮಾವು ಕೆ.ಜಿಗೆ ₹150 ರಿಂದ ₹160, ಸಿಂಧೂರ ₹100, ರಸಪೂರಿ ₹100 ರಿಂದ ₹120ರವರೆಗೆ ದರ ಇದೆ. ತೋತಾಪುರಿ ಮಾವಿನ ಕಾಯಿ ಕೆ.ಜಿಗೆ ₹40 ರಿಂದ ₹60ರವರೆಗೆ ಇದೆ. ಬಾದಾಮಿ ತಳಿಯ ಮಾವು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿಲ್ಲ, ಬದಲಾಗಿ ಸಿಂಧೂರ, ರಸಪೂರಿ ಹಣ್ಣುಗಳು ಹೆಚ್ಚಾಗಿ ಕಾಣುತ್ತಿವೆ.
ಗುಣಮಟ್ಟ ಹಾಗೂ ಗಾತ್ರಕ್ಕೆ ಅನುಗುಣವಾಗಿ ಬೆಲೆ ನಿಗದಿ ಮಾಡಲಾಗಿದ್ದು ಖರೀದಿಗೆ ಮಾವು ಪ್ರಿಯರು ಆಸಕ್ತಿ ತೋರುತ್ತಿದ್ದಾರೆ. ಬಿಸಿಲಿ ಝಳ ಹೆಚ್ಚಾಗಿರುವುದರಿಂದ ಜ್ಯೂಸ್ ಅಂಗಡಿಗಳಲ್ಲೂ ಮಾವಿನ ರಸಕ್ಕೆ ಬೇಡಿಕೆ ಹೆಚ್ಚಾಗಿದೆ.
ಬೀನ್ಸ್ ದುಬಾರಿ: ಕಳೆದವಾರ ಗಗನಕ್ಕೇರಿದ್ದ ಬೀನ್ಸ್ ದರ ಇನ್ನೂ ಇಳಿಕೆಯಾಗದೆ ಅಲ್ಪ ಏರಿಕೆ ಕಂಡಿದೆ. ಎರಡು ವಾರಗಳ ಹಿಂದೆ ಕೆ.ಜಿಗೆ ₹ 30 ಇದ್ದ ಬೀನ್ಸ್ ಕಳೆದವಾರ ₹60ಕ್ಕೆ ಮುಟ್ಟಿತ್ತು. ಈ ವಾರ ₹ 80ಕ್ಕೆ ತಲುಪಿ ಗ್ರಾಹಕರ ಜೇಬಿಗೆ ಭಾರವಾಗಿದೆ. ಮಾರುಕಟ್ಟೆಗೆ ಬೇಡಿಕೆಯಷ್ಟು ಬೀನ್ಸ್ ಪೂರೈಕೆಯಾಗದಿರುವುದು ದರ ಏರಿಕೆಗೆ ಕಾರಣ ಎನ್ನುತ್ತಾರೆ ತರಕಾರಿ ವ್ಯಾಪಾರಿ ಮಧು.
ಟೊಮೆಟೊ ಅಲ್ಪ ಇಳಿಕೆ: ಕಳೆದವಾರ ₹ 30 ರಿಂದ ₹ 40ಕ್ಕೆ ಏರಿಕೆಯಾಗಿದ್ದ ಟೊಮೆಟೊ ಈ ವಾರ ಅಲ್ಪ ಕುಸಿತ ಕಂಡಿದ್ದು ₹ 20 ರಿಂದ ₹ 30ಕ್ಕೆ ಮಾರಾಟವಾಗುತ್ತಿದೆ. ಟೊಮೆಟೊ ಆವಕ ಹೆಚ್ಚಾಗುತ್ತಿರುವುದು ದರ ಇಳಿಕೆಗೆ ಕಾರಣ ಎನ್ನುತ್ತಾರೆ ವ್ಯಾಪಾರಿಗಳು.
ನುಗ್ಗೇಕಾಯಿ ದರ ಕುಸಿತ: ಸಾಂಬಾರ್, ಹುಳಿಗೆ ಹೆಚ್ಚು ರುಚಿ ನೀಡುವ, ಹೇರಳ ಪೌಷ್ಟಿಕಾಂಶ ಹೊಂದಿರುವ ನುಗ್ಗೇಕಾಯಿ ದರ ಕುಸಿತವಾಗಿದೆ. ಸಾಮಾನ್ಯವಾಗಿ ಶತಕದ ಆಸುಪಾಸಿನಲ್ಲಿರುತ್ತಿದ್ದ ನುಗ್ಗೆ ದರ ಪ್ರಸ್ತುತ ಕೆ.ಜಿಗೆ 30ಕ್ಕೆ ಇಳಿಕೆಯಾಗಿದೆ. ದರ ಕುಸಿದಿರುವುದರಿಂದ ಗ್ರಾಹಕರು ನುಗ್ಗೆ ಖರೀದಿಗೆ ಹೆಚ್ಚು ಉತ್ಸಾಹ ತೋರುತ್ತಿದ್ದಾರೆ.
ಕ್ಯಾರೆಟ್ ₹30ರಿಂದ ₹40, ತೊಂಡೆಕಾಯಿ ₹50, ಮೂಲಂಗಿ ₹20 ರಿಂದ ₹30, ಬೆಂಡೆಕಾಯಿ ₹50 ರಿಂದ ₹60, ಚವಳಿಕಾಯಿ ₹60, ಪಡವಲಕಾಯಿ ₹25, ಹಿರೇಕಾಯಿ ₹30 ರಿಂದ ₹40, ಎಲೆಕೋಸು 15 ರಿಂದ ₹20, ಕುಂಬಳಕಾಯಿ ₹20, ಬೀಟ್‌ರೂಟ್ ₹20 ರಿಂದ ₹30, ಆಲೂಗಡ್ಡೆ₹30 ರಿಂದ ₹40, ಕ್ಯಾಪ್ಸಿಕಂ ₹70, ಗೆಡ್ಡೆಕೋಸು ₹60, ಸೀಮೆ ಬದನೆಕಾಯಿ ₹30, ಈರುಳ್ಳಿ ₹25 ರಿಂದ ₹30, ಮದ್ರಾಸ್ ಸೌತೆ ₹20, ಸೌತೆಕಾಯಿ ₹30 ರಿಂದ ₹40, ಬೆಳ್ಳುಳ್ಳಿ ₹50 ದರ ಇದೆ.
ಹಣ್ಣುಗಳ ದರ: ಏಲಕ್ಕಿ ಬಾಳೆ ₹70 ರಿಂದ ₹80, ಪೈನಾಪಲ್ ₹70, ಪಪ್ಪಾಯ₹ 20 ರಿಂದ ₹30, ದ್ರಾಕ್ಷಿ ₹70 ರಿಂದ ₹80, ಸೇಬು ₹200 ರಿಂದ ₹240, ಸಪೋಟ ₹60 ರಿಂದ ₹80 ದಾಳಿಂಬೆ ₹230 ರಿಂದ ₹240 ದರ ಇದೆ.
ಹೂವಿನ ದರ ಕುಸಿತ
ಮಾರುಕಟ್ಟೆಗೆ ಹೂವಿನ ಆವಕ ಹೆಚ್ಚಾಗಿರುವುದರಿಂದ ದರ ಕುಸಿತವಾಗಿದೆ. ಕಳೆದವಾರಕ್ಕೆ ಹೋಲಿಕೆ ಮಾಡಿದರೆ ಎಲ್ಲ ಹೂವುಗಳ ದರ ಶೇ 20 ರಿಂದ 30ರಷ್ಟು ಇಳಿಕೆಯಾಗಿದೆ ಎನ್ನುತ್ತಾರೆ ಚೆನ್ನಾಪುರದ ಮೋಳೆ ರಸ್ತೆಯ ಹೂವಿನ ವ್ಯಾಪಾರಿ ರವಿ. ಮದುವೆ ಗೃಹ ಪ್ರವೇಶ ಸಹಿತ ಶುಭ ಸಮಾರಂಭಗಳು ನಡೆಯುತ್ತಿದ್ದರೂ ಹೂವಿನ ದರ ಇಳಿಕೆಯಾಗಿರುವುದು ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ಅವರು. ಪ್ರಸ್ತುತ ಮಲ್ಲಿಗೆ ₹ 240 ಸಣ್ಣ ಮಲ್ಲಿಗೆ ₹100 ಸುಗಂಧರಾಜ ₹40 ಚೆಂಡು ಹೂ ₹20 ಸೇವಂತಿಗೆ ₹80ರಿಂದ ₹100 ಗುಲಾಬಿ ₹100ರಿಂದ ₹120 ಕನಕಾಂಬರ ₹600 ದರ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.