ADVERTISEMENT

ಪೊಲೀಸ್ ರನ್ ಅಭಿಯಾನ: ಮ್ಯಾರಥಾನ್‌ನಲ್ಲಿ ಮಣಿಕಂಠ, ಪ್ರೀತಿಗೆ ಪ್ರಥಮ ಸ್ಥಾನ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 2:21 IST
Last Updated 2 ಮಾರ್ಚ್ 2026, 2:21 IST
‘ಕರ್ನಾಟಕ ಪೊಲೀಸ್ ರನ್ ಅಭಿಯಾನದಡಿ’ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ 5 ಕಿ.ಮೀ. ಮ್ಯಾರಥಾನ್‌ನಲ್ಲಿ ವಿಜೇತರಾದ ಮಣಿಕಂಠ, ಪ್ರೀತಿಗೆ ಸೈಕಲ್‌ಗಳನ್ನು ಬಹುಮಾನವಾಗಿ ನೀಡಲಾಯಿತು
‘ಕರ್ನಾಟಕ ಪೊಲೀಸ್ ರನ್ ಅಭಿಯಾನದಡಿ’ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ 5 ಕಿ.ಮೀ. ಮ್ಯಾರಥಾನ್‌ನಲ್ಲಿ ವಿಜೇತರಾದ ಮಣಿಕಂಠ, ಪ್ರೀತಿಗೆ ಸೈಕಲ್‌ಗಳನ್ನು ಬಹುಮಾನವಾಗಿ ನೀಡಲಾಯಿತು   

ಚಾಮರಾಜನಗರ: ಜನ ಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿ, ಮಾದಕ ವಸ್ತುಗಳ ಬಗ್ಗೆ ಜನ ಜಾಗೃತಿ ಹಾಗೂ ಸೈಬರ್ ಅಪರಾಧಗಳ ಕುರಿತು ಅರಿವು ಮೂಡಿಸಲು ‘ಕರ್ನಾಟಕ ಪೊಲೀಸ್ ರನ್ ಅಭಿಯಾನದಡಿ’ ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಭಾನುವಾರ ನಗರದಲ್ಲಿ 5 ಕಿ.ಮೀ. ಬೃಹತ್ ಮ್ಯಾರಾಥಾನ್ ನಡೆಯಿತು.

ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಮ್ಯಾರಥಾನ್‌ಗೆ ಚಾಲನೆ ನೀಡಿದರು. ‘ನಮ್ಮ ಪೊಲೀಸ್-ನಮ್ಮ ಹೆಮ್ಮೆ, ಎಲ್ಲರಿಗೂ ಫಿಟ್ನೆಸ್-ಮಾದಕ ಮುಕ್ತ ಕರ್ನಾಟಕ’ ಎಂಬ ಘೋಷಣೆಯೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮ್ಯಾರಾಥಾನ್‌ ಓಟದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ವಿದ್ಯಾರ್ಥಿಗಳು, ಯುವಜನತೆ ಹಾಗೂ ಸಾರ್ವಜನಿಕರು ಭಾಗವಹಿಸಿದ ಗಮನ ಸೆಳೆದರು.

ಜಿಲ್ಲಾಧಿಕಾರಿ ಶ್ರೀರೂಪಾ ಮಾತನಾಡಿ, ಶಾರೀರಿಕ ಸುಸ್ಥಿತಿ ಇಂದಿನ ಅಗತ್ಯವಾಗಿದ್ದು ದೇಹ ಮತ್ತು ಮನಸ್ಸಿನ ಸಮತೋಲನಕ್ಕಾಗಿ ಪ್ರತಿಯೊಬ್ಬರು ಸದೃಢತೆ ಕಾಯ್ದುಕೊಳ್ಳಬೇಕು. ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮ, ಸೈಬರ್ ಅಪರಾಧಗಳ ಬಗ್ಗೆ ಜಾಗೃತಿಗೆ ಮ್ಯಾರಾಥಾನ್ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ಮಾತನಾಡಿ ಪ್ರಸ್ತುತ ಎಲ್ಲೆಡೆ ಸೈಬರ್ ಅಪರಾಧಗಳು ಹೆಚ್ಚಾಗಿದ್ದು ಅಮಾಯಕರು ವಂಚಕರ ಜಾಲಕ್ಕೆ ಸಿಲುಕಿ ಜೀವಮಾನವಿಡಿ ದುಡಿದು ಕೂಡಿಟ್ಟದ್ದನ್ನು ಕಳೆದುಕೊಳ್ಳುತ್ತಿದ್ದಾರೆ. ಅಂತರ್ಜಾಲ ಬಳಕೆ ಮಾಡುವಾಗ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು. ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಿರುವ ಜಾಗೃತಿ ಕಾರ್ಯಕ್ರಮ ಅಭಿನಂದನೀಯ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮತ್ತುರಾಜು ಮಾತನಾಡಿ ಸಮಾಜದಲ್ಲಿ ಹಿಂದಿನಿಂದಲೂ ಪೊಲೀಸ್ ವ್ಯವಸ್ಥೆಯ ಬಗ್ಗೆ ಭಯದ ವಾತಾವರಣ ಇದೆ. ಈ ನಿಟ್ಟಿನಲ್ಲಿ ‌ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿಸುವ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸಲು, ದುಶ್ಚಟಮುಕ್ತ ಸ್ವಸ್ಥ ಸಮಾಜ ನಿರ್ಮಾನ ಮಾಡುವ ಉದ್ದೇಶದಿಂದ ಸಾರ್ವಜನಿಕರ ಮ್ಯಾರಥಾನ್ ಓಟ ಏರ್ಪಡಿಸಲಾಗಿದೆ.

ಇಚೆಗೆ ಯುವಜನತೆ ಮಾದಕ ವಸ್ತುಗಳ ಸೇವನೆಯತ್ತ ಹೆಚ್ಚು ಆಕರ್ಷಿತರಾಗುತ್ತಿದ್ದು ವ್ಯಸನದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ಜೊತೆಗೆ ಸೈಬರ್ ಅಪರಾಧಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಯೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಿದ್ದು ಈ ನಿಟ್ಟಿನಲ್ಲಿ ಮ್ಯಾರಾಥಾನ್ ಓಟ ಆಯೋಜಿಸಲಾಗಿದೆ ಎಂದರು.

ಜಿಲ್ಲಾ ಪೊಲೀಸ್ ಕವಾಯತು ಮೈದಾನದಿಂದ ಆರಂಭವಾದ ಮ್ಯಾರಥಾನ್ ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ  ಭುವನೇಶ್ವರಿ ವೃತ್ತ, ಸಂತೇಮರಹಳ್ಳಿ ವೃತ್ತ, ಪಾಲಿಟೆಕ್ನಿಕ್ ಕಾಲೇಜು ತಲುಪಿ ಅಲ್ಲಿಂದ ಮರಳಿ ಸಂತೇಮರಹಳ್ಳಿ ವೃತ್ತ, ಭುವನೇಶ್ವರಿ ವೃತ್ತ, ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸಮಾಪನಗೊಂಡಿತು.

ಮ್ಯಾರಥಾನ್ ಓಟದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರೆ ಹಿರಿಯ ಅಧಿಕಾರಿಗಳು ಭಾಗವಹಿಸಿ ಸಾರ್ವಜನಿಕರಲ್ಲಿ ಹುರುಪು ತುಂಬಿದರು.

ಮ್ಯಾರಥಾನ್‌ನಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ ಸೈಕಲ್ ನೀಡಲಾಯಿತು. ದ್ವಿತೀಯ ಬಹುಮಾನವಾಗಿ 5,000 ನಗದು, ತೃತೀಯ 3,000 ನೀಡಲಾಯಿತು. ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಬಹುಮಾನ ಇತ್ತು. ಮೊದಲು ಗುರಿ ತಲುಪಿದ 10 ಓಟಗಾರರಿಗೆ ಪದಕ, ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು.

ಹೆಚ್ಚುವರಿ ಜಿಲ್ಲಾ ಅಧೀಕ್ಷಕರಾದ ಎಂ.ಎನ್. ಶಶಿಧರ್, ಡಿವೈಎಸ್‌ಪಿ ಸ್ನೇಹರಾಜ್, ಜಿಲ್ಲಾ ಮೀಸಲು ಪೊಲೀಸ್ ವಿಭಾಗದ ಡಿವೈಎಸ್‌ಪಿ ಸೋಮಣ್ಣ, ಪಡೆಯ ಚಾಮೂಲ್ ವ್ಯವಸ್ಥಾಪಕ ನಿರ್ದೇಶಕರಾದ ರಾಜ್‌ಕುಮಾರ್, ಬ್ಯಾಂಕ್ ಆಫ್ ಬರೋಡಾದ ಶ್ರೀಧರ್, ಇತರರು ಕಾರ್ಯಕ್ರಮದಲ್ಲಿ ಇದ್ದರು.

ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳು

ವಿಜೇತರ ವಿವರ:

ಪುರುಷರ ವಿಭಾಗದಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಹೊರೆಯಾಲ ಗ್ರಾಮದ ಮಣಿಕಂಠ 17 ನಿಮಿಷ 12 ಸೆಕೆಂಡುಗಳಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಪಡೆದರು. ಭೀಮಪ್ಪ (17.33 ನಿ) ದ್ವಿತೀಯ ವೆಂಕಟಯ್ಯನ ಛತ್ರದ ಯೋಗೇಶ್ (18.45 ನಿ) ತೃತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಕೊಳ್ಳೇಗಾಲ ತಾಲ್ಲೂಕಿನ ತೆಳ್ಳನೂರಿನ ಡಿ.ಆರ್.ಪ್ರೀತಿ ಪ್ರಥಮ ನದಿಯಾ ದ್ವಿತೀಯ ಚಂದ್ರಮ್ಮ ತೃತೀಯ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.