ಹುಲಿಗಳು ಮೃತಪಟ್ಟ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯಕ್ಕೆ ಶುಕ್ರವಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು
ಹನೂರು (ಚಾಮರಾಜನಗರ ಜಿಲ್ಲೆ): ‘ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯದಲ್ಲಿ ಐದು ಹುಲಿಗಳ ಅಸಹಜ ಸಾವಿಗೆ ವಿಷಪ್ರಾಶನವೇ ಕಾರಣವೆಂದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಸುದ್ದಿಗಾರರೊಂದಿಗೆ ಅವರು ಶುಕ್ರವಾರ ಮಾತನಾಡಿದರು. ‘ಸಾವಿನ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ವರದಿಯನ್ನು ಆಧರಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆಯೂ ತನಿಖೆಗೆ ಸೂಚಿಸಲಾಗಿದ್ದು, ಅವರ ವಿರುದ್ಧವೂ ಶಿಸ್ತು ಕ್ರಮವನ್ನು
ಜರುಗಿಸಲಾಗುವುದು’ ಎಂದರು.
‘ರಸ್ತೆಯಿಂದ ಅನತಿ ದೂರದಲ್ಲಿ ಹುಲಿಗಳು ಸತ್ತುಬಿದ್ದರೂ ಗಮನಿಸದಿರುವುದು ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವಲ್ಲವೇ’ ಎಂಬ ಪ್ರಶ್ನೆಗೆ ಸಿಡಿಮಿಡಿಗೊಂಡ ಅವರು, ‘ಎಲ್ಲ ಪ್ರಶ್ನೆಗಳಿಗೂ ತನಿಖಾ ವರದಿ ಬಂದ ನಂತರವಷ್ಟೇ ಉತ್ತರ ನೀಡುವೆ’ ಎಂದರು.
‘ವಿಷಪೂರಿತ ಜಾನುವಾರು ಕಳೇಬರವನ್ನು ತಿಂದು ಹುಲಿಗಳು ಸತ್ತಿವೆ. ಹುಲಿಗಳ ಹಾಗೂ ಹಸುವಿನ ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಚಾಮರಾಜನಗರ ವೃತ್ತ ಸಿಸಿಎಫ್ ಟಿ.ಹೀರಾಲಾಲ್ ಮಾಹಿತಿ ನೀಡಿದರು.
‘ತಾಯಿ ಹುಲಿಗೆ 8ರಿಂದ 9 ವರ್ಷ, ಮರಿಗಳು 9ರಿಂದ 10 ತಿಂಗಳ ಪ್ರಾಯದ್ದಾಗಿದ್ದು, ಮೂರು ದಿನಗಳ ಹಿಂದೆ ಮೃತಪಟ್ಟಿವೆ. ಗೊಬ್ಬರಕ್ಕಾಗಿ ತಮಿಳುನಾಡಿನಿಂದ ಅಕ್ರಮವಾಗಿ ಜಾನುವಾರುಗಳನ್ನು ರಾಜ್ಯಕ್ಕೆ ತರುತ್ತಿರುವ ಬಗ್ಗೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕರ್ತವ್ಯ ನಿರ್ಲಕ್ಷ್ಯ ಆರೋಪಗಳ ಬಗ್ಗೆಯೂ ತನಿಖೆ ನಡೆಯಲಿದೆ’ ಎಂದು ತಿಳಿಸಿದರು.
ಫೋರೆಟ್ ಕೀಟನಾಶಕ ಬಳಕೆ: ‘ಹಸುವಿನ ಕಳೇಬರದ ಮೇಲೆ ಫೋರೆಟ್ ಕೀಟನಾಶಕ ಹಾಕಲಾಗಿದ್ದು, ವಿಷಪೂರಿತ ಮಾಂಸ ತಿಂದು ಹುಲಿಮರಿಗಳು ಮೊದಲು ಮೃತಪಟ್ಟಿದ್ದು, ನಂತರ ತಾಯಿ ಹುಲಿ ಸತ್ತಿದೆ. ವಿಷಪ್ರಾಶನದಿಂದ ಹುಲಿಗಳು ಸತ್ತಿರುವುದು ಸ್ಪಷ್ಟವಾಗುತ್ತಿದ್ದಂತೆ ಮೀಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಪ್ಪ ಗ್ರಾಮದಲ್ಲಿ ಮೃತ ಜಾನುವಾರು ಮಾಲೀಕ ಸೇರಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಮೂಲಗಳು ಖಚಿತಪಡಿಸಿವೆ.
ವಿಶೇಷ ತನಿಖಾ ತಂಡ: ಎನ್‌ಟಿಸಿಎ ಕೂಡ ವಿಶೇಷ ತನಿಖಾ ತಂಡ ರಚಿಸಿದೆ. ಬೆಂಗಳೂರು ಪ್ರಾದೇಶಿಕ ಕಚೇರಿಯ ಎಐಜಿ ವಿ.ಹರಿಣಿ ಹಾಗೂ ದಕ್ಷಿಣ ವಿಭಾಗದ ಡಬ್ಲ್ಯುಸಿಸಿಬಿ ಆರ್‌ಡಿಡಿ ತೇನ್‌ಮೊಳಿ ತಂಡದಲ್ಲಿದ್ದು, ಎರಡು ವಾರಗಳೊಳಗೆ ವರದಿ ಸಲ್ಲಿಸುವಂತೆ ಎನ್‌ಟಿಸಿಎ ಡಿಐಜಿಎಫ್ ಜಿ.ಭಾನುಮತಿ ಆದೇಶಿಸಿದ್ದಾರೆ.
ಎನ್‌ಟಿಸಿಎ ಪ್ರಸ್ತಾವಕ್ಕೆ ವಿರೋಧ: ‘ಮಲೆ ಮಹದೇಶ್ವರ ವನ್ಯಜೀವಿ ವಿಭಾಗವನ್ನು ಹುಲಿ ಸಂರಕ್ಷಿತ ವಲಯ ಎಂದು ಘೋಷಿಸಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಸಿರು ನಿಶಾನೆ ತೋರಿದ್ದರೂ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳ ವಿರೋಧದಿಂದ ಇದುವರೆಗೂ ಅನುಷ್ಠಾನಗೊಂಡಿಲ್ಲ’ ಎಂದು ಪರಿಸರವಾದಿಗಳು ಅಭಿಪ್ರಾಯ ಪಟ್ಟಿದ್ದಾರೆ.
‘ಎನ್‌ಟಿಸಿಎ ಅನುಮೋದನೆ ನೀಡಿರುವ ಕಡತ ಅರಣ್ಯ ಭವನದ ಎಸಿಎಸ್ ಕಚೇರಿಯಲ್ಲೇ ಹಲವು ವರ್ಷಗಳಿಂದ ಉಳಿದಿದೆ. ಈ ಪ್ರಸ್ತಾವಕ್ಕೆ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೇರಿ ಕ್ಷೇತ್ರದ ಶಾಸಕರು ಬಹಿರಂಗ ವಿರೋಧ ವ್ಯಕ್ತಪಡಿಸಿ, ಶಿಫಾರಸು ಪರಿಗಣಿಸದಂತೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹೇರಿದ್ದರು. ಅಂದು ಸರ್ಕಾರ ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಲು ಕ್ರಮ ಕೈಗೊಂಡಿದ್ದರೆ ಹುಲಿಗಳ ಸಾವು ತಪ್ಪಿಸಬಹುದಿತ್ತು’ ಎಂದಿದ್ದಾರೆ.
ಐದು ತಿಂಗಳಿಂದ ವೇತನ ಇಲ್ಲ
ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ 65ಕ್ಕೂ ಹೆಚ್ಚು ಹೊರಗುತ್ತಿಗೆ ವಾಚರ್‌ಗಳಿಗೆ 5 ತಿಂಗಳಿಂದ ವೇತನ ದೊರಕಿಲ್ಲ.
‘ಹುಲಿಗಳ ಸಾವು ಸಂಭವಿಸುವ ಮುನ್ನಾ ದಿನವಾದ ಜೂನ್ 23ರಂದು ಸಿಬ್ಬಂದಿಯು ಎಂಎಂ ಹಿಲ್ಸ್ ಡಿಸಿಎಫ್ ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಿದ್ದರು. ವೇತನವಿಲ್ಲದೆ ಸಿಬ್ಬಂದಿ ಬೀಟ್‌ಗೆ ಸರಿಯಾಗಿ ಹೋಗುತ್ತಿರಲಿಲ್ಲ. ಅರಣ್ಯ
ದಂಚಿನಲ್ಲಿರುವ ರಸ್ತೆಯಿಂದ 50 ಮೀಟರ್ ದೂರದಲ್ಲಿ ಐದು ಹುಲಿಗಳು ಸತ್ತು ಬಿದ್ದರೂ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಣ್ಣಿಗೆ ಬೀಳದಿರುವುದು ಕರ್ತವ್ಯ ನಿರ್ಲಕ್ಷ್ಯದ ಪರಮಾವಧಿ’ ಎಂದು ವನ್ಯಜೀವಿ ತಜ್ಞರು ಟೀಕಿಸಿದ್ದಾರೆ.
ಎಸ್‌ಪಿ ಪ್ರಸ್ತಾವ ಕಡೆಗಣನೆ
ಗೋಪಿನಾಥಮ್ ಹಾಗೂ ಪಾಲಾರ್ ಕೂಡುವ ಪ್ರದೇಶದಲ್ಲಿ ಪ್ರತ್ಯೇಕ ಚೆಕ್‌ಪೋಸ್ಟ್ ತೆರೆಯುವಂತೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಜೂನ್ 6ರಂದು ಪತ್ರ ಬರೆದಿದ್ದರೂ ಸ್ಪಂದನೆ ದೊರೆತಿಲ್ಲ.
‘ತಮಿಳುನಾಡಿನ ಸೇಲಂ, ಕೃಷ್ಣಗಿರಿ, ಧರ್ಮಪುರಿಯಿಂದ ರಾಜ್ಯ ಸಂಪರ್ಕಿಸುವ ಈ ಜಾಗದಲ್ಲಿ ಚೆಕ್‌ಪೋಸ್ಟ್ ತೆರೆದರೆ ಅನುಮಾನಾಸ್ಪದ ವ್ಯಕ್ತಿಗಳ ತಪಾಸಣೆಗೆ ನೆರವಾಗಲಿದೆ. ತಮಿಳುನಾಡಿನ ಗೋವಿಂದಪಾಡಿ, ಶೆಟ್ಟಿಪಟ್ಟಿ, ಕರಂಗಲೂರು, ಕಾರೆಕಾಡು, ಕತ್ತರಿಮಲೆ ಗ್ರಾಮಗಳಲ್ಲಿರುವ ಕಳ್ಳಬೇಟೆಗಾರರ ಮೇಲೆ ನಿಗಾ ಇರಿಸಬಹುದು’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.
‘ಚೆಕ್‌ಪೋಸ್ಟ್ ತೆರೆದಿದ್ದರೆ ಈ ದುರ್ಘಟನೆಯನ್ನು ತಪ್ಪಿಸಬಹುದಿತ್ತು’ ಎಂದು ಅರಣ್ಯ ಇಲಾಖೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಹುಲಿಗಳು ಮೃತಪಟ್ಟ ಜಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.