
ಹನೂರು: ಕಾಡಾನೆಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ರೈತ ಸಂಘ ಪ್ರತಿಭಟನೆ ಕಾರ್ಯಕರ್ತರು ಸೋಮವಾರ ಪಟ್ಟಣದ ಅರಣ್ಯ ಇಲಾಖೆ ಮುಂಭಾಗ ಪ್ರತಿಭಟನೆ ನಡೆಸಿದರು
ಕಾವೇರಿ ವನ್ಯಧಾಮ ಹನೂರು ಉಪ ವಿಭಾಗ ಕಚೇರಿ ಮುಂಭಾಗ ಜಮಾಯಿಸಿದ ರೈತರು, ‘ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟುವಲ್ಲಿ ಅರಣ್ಯಾಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.
‘ಕಾವೇರಿ ವನ್ಯಧಾಮ ಮತ್ತು ಬಿಆರ್‌ಟಿ ವಲಯ ಅರಣ್ಯದಂಚಿನ ರೈತರ ಜಮೀನುಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿರುವುದು ಒಂದೆಡೆಯಾದರೆ, ಹುಲಿ, ಚಿರತೆಗಳು ಸಾಕುಪ್ರಾಣಿಗಳನ್ನು ತಿಂದು ರೈತರಿಗೆ ಭಯದ ವಾತಾವರಣ ನಿರ್ಮಿಸುತ್ತಿರುವುದು ರೈತರಲ್ಲಿ ಆತಂಕವನ್ನು ಉಂಟು ಮಾಡಿದೆ. ಕಾಡಾನೆ, ಹಂದಿಗಳು ರೈತರ ಜಮೀನಿಗೆ ನುಗ್ಗಿ ಫಸಲು ನಷ್ಟ ಮಾಡಿ ಕೃಷಿ ಪರಿಕರಗಳನ್ನೂ ಹಾಳು ಮಾಡುತ್ತಿವೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ನಿರ್ಲಕ್ಷ್ಯವಹಿಸಿದ್ದು, ಕೂಡಲೇ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಕೆವಿಎನ್ ದೊಡ್ಡಿ ಕೆಂಚಯ್ಯನ ದೊಡ್ಡಿ ಎಲ್ಲೇ ಮಾಳ ಹಾಗೂ ಸುತ್ತಮುತ್ತಲಿನ ಗ್ರಾಮದ ಅರಣ್ಯದಂಚಿನ ರೈತರ ಜಮೀನುಗಳಲ್ಲಿ ಕಾಡಾನೆಗಳು ದಾಳಿ ನಡೆಸಿ ಮುಸುಕಿನ ಜೋಳ ಮತ್ತು ಕೃಷಿ ಚಟುವಟಿಕೆ ಪರಿಕರಗಳನ್ನು ನಾಶಪಡಿಸುತ್ತಿವೆ. ಅರಣ್ಯ ಅಧಿಕಾರಿಗಳು ರೈತರಿಗೆ ಸ್ಪಂದಿಸುತ್ತಿಲ್ಲ, ಸೂಕ್ತ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಕಾವೇರಿ ವನ್ಯಜೀವಿ ವಿಭಾಗದ ಡಿಸಿಎಫ್ ಸುರೇಂದ್ರ ಭೇಟಿ ನೀಡಿ, ‘2025 - 26ನೇ ಸಾಲಿನಲ್ಲಿ ವನ್ಯಜೀವಿ ವ್ಯಾಪ್ತಿಯರಲ್ಲಿ ರೈಲ್ವೆ ಬ್ಯಾರಿಕೇಟ್ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅಂದಾಜು ಪಟ್ಟಿ ತಯಾರಿಸಿ ಕಳುಹಿಸಲಾಗಿದೆ. ತಾಂತ್ರಿಕ ಪರಿಶೀಲನೆಗೆ ಶಿಫಾರಸು ಮಾಡುವಂತೆ ಉಲ್ಲೇಖಿಸಲಾಗಿದೆ. ದೃಢೀಕರಿಸಿ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ರೈತರಿಗೆ ಭರವಸೆ ನೀಡಿದರು.
ರೈತರು ಜಮೀನುಗಳಲ್ಲಿ ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಕೂಡಲೇ ತಾಲೂಕಿನಲ್ಲಿ ತೆರವುಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು. ವೃದ್ಧಾಪ್ಯವೇತನ ಹಾಗೂ ಕಂದಾಯ ಇಲಾಖೆಯಲ್ಲಿ ರೈತರಿಗೆ ಸಕಾಲದಲ್ಲಿ ಅಧಿಕಾರಿ ಸಿಬ್ಬಂದಿ ವರ್ಗದವರು ಸ್ಪಂದಿಸುತ್ತಿಲ್ಲ. ಆದ್ದರಿಂದ ಸ್ಥಳಕ್ಕೆ ತಹಶೀಲ್ದಾರ್ ಆಗಮಿಸಬೇಕು’ ಎಂದು ರೈತರು ಒತ್ತಾಯಿಸಿದರು.
ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಚೈತ್ರಾ ‘ಈಗಾಗಲೇ ಸಭೆ ನಡೆಸಿ ರಸ್ತೆ ಒತ್ತುವರಿ ತೆರವುಗೊಳಿಸಲು ಸೂಚಿಸಲಾಗಿದೆ. ರೈತರಿಗೆ ತೊಂದರೆ ಆಗುತ್ತಿರುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ರೈತ ಮುಖಂಡರಾದ ಗೌಡಳ್ಳಿ ಸೋಮಣ್ಣ, ಚಿಕ್ಕರಾಜು, ಸುಂದರಪ್ಪ ರಾಜಗೋಪಾಲ ಕೃಷ್ಣಯ್ಯ, ಎಸಿಎಫ್ ಮರಿಸ್ವಾಮಿ ಹಾಗೂ ಆರ್‌ಎಫ್ ನಾಗರಾಜ್, ರೈತ ಮುಖಂಡರಾದ ಸುಂದರಪ್ಪ, ರಾಜಗೋಪಾಲ, ಕೃಷ್ಣಯ್ಯ ಉಪಸ್ಥಿತರಿದ್ದರು.
ರಸ್ತೆ ಒತ್ತುವರಿ ತೆರವುಗೊಳಿಸಿ ಕಂದಾಯ ಇಲಾಖೆಯಲ್ಲಿ ಸ್ಪಂದಿಸದ ಅಧಿಕಾರಿಗಳು ತಹಶೀಲ್ದಾರ್ ಆಗಮಿಸಬೇಕು ಎಂದು ರೈತರ ಪಟ್ಟು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.