
ಯಳಂದೂರು: ಮಂಬರುವ ಬೇಸಗೆ ಅವಧಿಯಲ್ಲಿ ಸಂಭಾವ್ಯ ಅಗ್ನಿ ಅವಘಡ ತಡೆಯುವ ನಿಟ್ಟಿನಲ್ಲಿ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಯಳಂದೂರು ವನ್ಯಜೀವಿ ವಲಯದೊಳಗೆ ಬೆಂಕಿ ರೇಖೆ ಎಳೆಯುವ ಕಾರ್ಯಕ್ಕೆ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದ್ದು, ಪೂರ್ವಭಾವಿಯಾಗಿ ದಹನಶೀಲ ವಸ್ತುಗಳ ತೆರವು ಕಾರ್ಯ ನಡೆಯುತ್ತಿದೆ.
ಕಾಡು ಹಾದಿಯಲ್ಲಿ ಇಲಾಖೆಯ ವಾಹನಗಳು ಸಾಗುವ ದಾರಿಯಲ್ಲಿ ಬೆಂಕಿ ರೇಖೆ ರಚಿಸಿ ಸಂಭವಿಸಬಹುದಾದ ಸಂಭಾವ್ಯ ಅಗ್ನಿ ಆಕಸ್ಮಿಕ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ.
ಪ್ರತಿವರ್ಷ ಸಂಕ್ರಾಂತಿ ನಂತರ ವಾತಾವರಣದಲ್ಲಿ ಬಿಸಿಲು ಹೆಚ್ಚಾಗಿ ಪರಿಸರದಲ್ಲಿ ತೇವಾಂಶ ಕುಸಿಯುತ್ತಾ ಬರುತ್ತದೆ. ಕ್ರಮೇಣ ಉಷ್ಣಾಂಶ ಹೆಚ್ಚಾದಂತೆ ಕಾಡಿನೊಳಗಿರುವ ಹುಲ್ಲಿನ ಪೊದೆ, ಕಳೆಗಿಡಗಳು ಸಹಿತ ಉದುರಬಿದ್ದ ಎಲೆಗಳೆಲ್ಲ ಸಂಪೂರ್ಣ ಒಣಗಿ ಆಕಸ್ಮಿಕ ಅಥವಾ ದುರದ್ದೇಶ ಪೂರಿತ ಕೃತ್ಯಗಳಿಂದ ಅಗ್ನಿ ಅವಘಡಗಳು ಸಂಭವಿಸುತ್ತಿತ್ತು.
ಪರಿಣಾಮ ಅಮೂಲ್ಯವಾದ ವನ್ಯ ಸಂಪತ್ತು ಹಾಗೂ ಕಾಡು ಪ್ರಾಣಿಗಳ ಜೀವನಕ್ಕೆ ಕಂಟಕ ಎದರಾಗುತ್ತಿತ್ತು. ಇಂತಹ ಅವಘಡಗಳು ಸಂಭವಿಸಿದಾಗ ಬೆಂಕಿಯ ಜ್ವಾಲೆ ಎಲ್ಲೆಡೆ ವ್ಯಾಪಿಸುವುದನ್ನು ತಗ್ಗಿಸುವಲ್ಲಿ ಬೆಂಕಿ ರೇಖೆಗಳು ಪ್ರಮುಖ ಪಾತ್ರ ವಹಿಸುತ್ತವೆ.
ಬೆಂಕಿ ರೇಖೆ ನಿರ್ಮಿಸುವ ಕಾರ್ಯದ ಪೂರ್ವಭಾವಿಯಾಗಿ ಅರಣ್ಯದೊಳಗಿನ ಹಲವು ಮಾರ್ಗಗಳಲ್ಲಿ ಬೆಳೆದಿರುವ ಸಸ್ಯಗಳು, ಬೆಂಕಿಗೆ ಸುಲಭವಾಗಿ ತುತ್ತಾಗಬಲ್ಲ ದಹನಕಾರಿ ವಸ್ತುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆರವುಗೊಳಿಸುತ್ತಿದ್ದಾರೆ.
‘ಗಸ್ತು ಸಿಬ್ಬಂದಿ ಕಾನನದ ನಡುವೆ ಸುಲಭ ಹಾಗೂ ವೇಗವಾಗಿ ಚಲಿಸಿ ಗಮ್ಯ ಸ್ಥಳವನ್ನು ತಲುಪಲು ಇದರಿಂದ ಸಹಕಾರಿ ಆಗಲಿದೆ. ಈ ಹಿನ್ನಲೆಯಲ್ಲಿ ಪುರಾಣಿಪೋಡು ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸುವತ್ತ ಚಿತ್ತ ಹರಿಸಲಾಗಿದೆ’ ಎಂದು ಎಆರ್‌ಎಫ್‌ಒ ಮಧು ಹೇಳಿದರು.
‘ಕಾಡಿನ ನಡುವೆ ವಾಹನಗಳು ಸಂಚರಿಸುವ ಮಾರ್ಗದಲ್ಲಿ ಒಣ ಎಲೆಗಳು, ಹುಲ್ಲುನ್ನು ತೆರೆವುಗೊಳಿಸಲಾಗುತ್ತದೆ. ಪೋಡಿನ ಸುತ್ತಮುತ್ತಲಿನ ನಿವಾಸಿಗಳು ಹಾಗೂ ಭಕ್ತರಿಗೆ ಮುನ್ನೆಚ್ಚರಿಕೆ ನೀಡಿ ಅಗ್ನಿ ಆಕಸ್ಮಿಕಗಳು ನಡೆಯದಂತೆ ಜಾಗೃತಿ ಮೂಡಿಸಲಾಗುತ್ತದೆ. ಕೌಂಟರ್ ಫೈರ್ ರಚನೆ ಮಾಡಿ ಬೆಂಕಿ ವ್ಯಾಪಿಸದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಕಿ ರೇಖೆ ನಿರ್ಮಿಸುವ ಯೋಜನೆಗೆ ಸ್ಥಳೀಯರ ಸಹಕಾರ ಪಡೆಯಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.
‘ಸದ್ಯ ಹುಲಿ ಸಮೀಕ್ಷೆ ನಡೆಯುತ್ತಿದ್ದು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು. ಬೇಸಿಗೆ ಆರಂಭಕ್ಕೂ ಮುನ್ನ ಕಾಡ್ಗಿಚ್ಚು ತಡೆಯಲು ಬೆಂಕಿ ರೇಖೆ ನಿರ್ಮಿಸುವ ಕಾರ್ಯಕ್ಕೆ ವೇಗ ನೀಡಲಾಗುವುದು’ ಎನ್ನುತ್ತಾರೆ ಆರ್‌ಎಫ್‌ಒ ಸತೀಶ್ ಹೇಳಿದರು.
ಬೆಂಕಿ ರೇಖೆ ನಿರ್ಮಾಣಕ್ಕೆ ಪೂರ್ವಭಾವಿ ಕಾರ್ಯ ಆರಂಭ ಅರಣ್ಯ ಇಲಾಖೆ ಸಿಬ್ಬಂದಿ ಮಾತ್ರ ಬಳಕೆ; ಅರಣ್ಯವಾಸಿಗಳಿಗಿಲ್ಲ ಕೆಲಸ ವಾಹನ ಸಾಗುವ ಹಾದಿಯಲ್ಲಿ ದಹನಶೀಲ ವಸ್ತುಗಳ ತೆರವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.