
ಬಾಗೇಪಲ್ಲಿ: 2025 ಬಾಗೇಪಲ್ಲಿಗೆ ‘ಭಾಗ್ಯ’ ತಂದಿದ ವರ್ಷ. ಬಾಗೇಪಲ್ಲಿಗೆ ಸಂಬಂಧಿಸಿದಂತೆ ವರನಟ ರಾಜ್ ಕುಮಾರ್ ಆಶಯ ಈಡೇರಿದ ವರ್ಷವಿದು.
1987ರ ಸೆ.9ರಂದು ಬಾಗೇಪಲ್ಲಿಯ ಬಾಲಕಿಯರ ಸರ್ಕಾರಿ ಶಾಲೆ ಆವರಣದಲ್ಲಿ ಕನ್ನಡ ಕಲಾ ಸಂಘವು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಬಂದಿದ್ದ ರಾಜ್ ಕುಮಾರ್ ‘ಈ ಬಾಗೇಪಲ್ಲಿ ಭಾಗ್ಯನಗರವಾಗಲಿ, ಎಲ್ಲ ಭಾಗ್ಯವೂ ಇಲ್ಲಿ ತುಂಬಿಕೊಳ್ಳಲಿ’ ಎಂದು ಆಶಿಸಿದ್ದರು. ಅವರ ಆ ಆಶಯ 2025ರಲ್ಲಿ ಈಡೇರಿತು.
ಬಾಗೇಪಲ್ಲಿ ಹೆಸರನ್ನು ಭಾಗ್ಯನಗರ ಎಂದು ಬದಲಿಸುವಂತೆ ಹಲವು ವರ್ಷಗಳಿಂದ ಕನ್ನಡ ಸಂಘಟನೆಗಳು ಹೋರಾಟ ನಡೆಸಿದ್ದವು. ಶಾಸಕ ಸುಬ್ಬಾರೆಡ್ಡಿ ಸಹ ಸರ್ಕಾರಕ್ಕೆ ಈ ಬಗ್ಗೆ ಮನವಿ ಸಹ ಸಲ್ಲಿಸಿದ್ದರು. ಜುಲೈನಲ್ಲಿ ನಂದಿಗಿರಿಧಾಮದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯಗೊಳ್ಳಲಾಯಿತು. ಹೀಗೆ 2025ರಲ್ಲಿ ಬಾಗೇಪಲ್ಲಿಯ ಹೆಸರು ಬದಲಾವಣೆ ಆಯಿತು.
ಬಾಗೇಪಲ್ಲಿ ತಾಲ್ಲೂಕಿನ ವಿಶೇಷವಾಗಿ ಪಾತಪಾಳ್ಯ ಮತ್ತು ಚೇಳೂರು ಭಾಗದ ಜನರ ಬಹುಕಾಲದ ಬೇಡಿಕೆಯಾದ ಗಂಟ್ಲಮಲ್ಲಮ್ಮ ಅಣೆಕಟ್ಟೆ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅಸ್ತು ಎಂದಿತು. ಗಂಟ್ಲಮಲ್ಲಮ್ಮ ಕಣಿವೆಯಲ್ಲಿ ನೀರು ವ್ಯರ್ಥವಾಗಿ ಹರಿಯುತ್ತಿದೆ. ಕಣಿವೆ ಮಧ್ಯದಲ್ಲಿ ಎರಡು ಕಡೆ ಬೆಟ್ಟಗುಡ್ಡಗಳು ಇವೆ. ಬೆಟ್ಟಗುಡ್ಡಗಳಿಂದ ಹರಿದು ನೀರು ಕಣಿವೆ ಸೇರುತ್ತಿವೆ.
ಇಲ್ಲಿ ಅಣೆಕಟ್ಟು ನಿರ್ಮಿಸಿ ಸಂಗ್ರಹವಾಗುವ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಪಾತಪಾಳ್ಯಕ್ಕೆ ನೀಡಲು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನಿರ್ಧರಿಸಿದ್ದರು. ಸುಬ್ಬಾರೆಡ್ಡಿ ಅವರ ಪ್ರಯತ್ನಕ್ಕೆ ಯಶಸ್ಸು ದೊರೆಯಿತು. ಹೀಗೆ ಈ ಎರಡು ಮಹತ್ವದ ಯೋಜನೆಗಳು ಸಚಿವ ಸಂಪುಟ ಸಭೆಯ ಮೂಲಕ ಬಾಗೇಪಲ್ಲಿಗೆ ದೊರೆತವು.
ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತದಲ್ಲಿ ಸಂಸ್ಕರಿಸಿ ಕೆರೆಗಳಿಗೆ ಹರಿಸುತ್ತಿರುವ ಎಚ್.ಎನ್.ವ್ಯಾಲಿ ನೀರಾವರಿ ಯೋಜನೆಯು ಬಾಗೇಪಲ್ಲಿಯನ್ನು ಪ್ರವೇಶಿಸಿರಲಿಲ್ಲ. ಈ ಯೋಜನೆಯ ಎರಡನೇ ಹಂತದ ಕಾಮಗಾರಿಯ ಮೂಲಕ ಬಾಗೇಪಲ್ಲಿ ತಾಲ್ಲೂಕಿನ 24 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ನವೆಂಬರ್‌ನಲ್ಲಿ ಸಚಿವ ಬೋಸರಾಜು ಚಾಲನೆ ನೀಡಿದರು.
ಹೀಗೆ ಎಚ್.ಎನ್.ವ್ಯಾಲಿ ನೀರು ಬರದ ತಾಲ್ಲೂಕು ಹಣೆಪಟ್ಟಿಯ ಬಾಗೇಪಲ್ಲಿಗೆ ಹರಿದ ವರ್ಷ 2025.
ಭೀಮಾ ಕೋರೆಂಗಾವದ ವಿಜಯೋತ್ಸವ, ಪುರಸಭೆ, ಪೊಲೀಸ್ ಜಂಟಿ ಕಾರ್ಯಾಚರಣೆಯಿಂದ ಬಾಗೇಪಲ್ಲಿಯ ಮುಖ್ಯರಸ್ತೆ ಅತಿಕ್ರಮಣ ತೆರವು, ಬಾಗೇಪಲ್ಲಿ ಪಿಎಂಶ್ರೀ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಾನವ ಹಕ್ಕುಗಳ ರಾಷ್ಟ್ರೀಯ ಆಯೋಗದ ಅಧಿಕಾರಿಗಳ ಭೇಟಿ, ಸಾಹಿತಿ ಕೆ.ಎಂ.ನಯಾಜ್ ಅಹಮದ್ ಅವರ ‘ಕಾವಿಯೊಳಗಿನ ಕೆಂಪು ಸೂರ್ಯ’ ಮತ್ತು ‘ಕ್ಷಮಿಸಿ ಕಾಮ್ರೆಡ್’ ಕೃತಿಗಳ ಲೋಕಾರ್ಪಣೆ, ಸರ್ಕಾರಿ ಆಸ್ಪತ್ರೆಗೆ ಚಿಕ್ಕಬಳ್ಳಾಪುರ ಲೋಕಾಯುಕ್ತ ಅಧಿಕಾರಿಗಳ ಭೇಟಿ ವರ್ಷದ ಆರಂಭ ಜನವರಿಯಲ್ಲಿ ನಡೆದ ಪ್ರಮುಖ ವಿದ್ಯಮಾನಗಳು.
ಜಿಲ್ಲಾ ಮಟ್ಟ ಸಿರಿಧಾನ್ಯ ಮೇಳ, ಫಲಪುಷ್ಪ ಪ್ರದರ್ಶನ ಪ್ರತಿ ವರ್ಷ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತದೆ. ಫೆಬ್ರುವರಿಯಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳ ಬಾಗೇಪಲ್ಲಿಯಲ್ಲಿ ನಡೆಯಿತು. ಇದೇ ತಿಂಗಳಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವೂ ಜರುಗಿತು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಬಾಗೇಪಲ್ಲಿಯ ಯು.ಜಸ್ವಂತ್ ರಾಜ್ಯಕ್ಕೆ 2ನೇ ಸ್ಥಾನ, ಕಾರ್ಯಾರಂಭವೇ ಆಗದ ಇಂದಿರಾ ಕ್ಯಾಂಟಿನ್‌ಗೆ ಚಾಲನೆ, ಕೇಂದ್ರ ಸಚಿವಾಲಯದ ಉಪಕಾರ್ಯದರ್ಶಿಗಳಿಂದ ಜೆಜೆಎಂ ರಸ್ತೆಗಳ ಪರಿಶೀಲನೆ ತಾಲ್ಲೂಕಿನಲ್ಲಿ ಜರುಗಿದ 2025ರ ಪ್ರಮುಖ ವಿದ್ಯಮಾನಗಳಾಗಿವೆ.
ಮೇಘಾಲಯದ 25 ಹೆಣ್ಣುಮಕ್ಕಳ ರಕ್ಷಣೆ, ಅಮೃತ 2.0 ಯೋಜನೆ ಕಾಮಗಾರಿಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಸಂಸದ ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಶಂಕುಸ್ಥಾಪನೆ, ಗೂಳೂರಿನಲ್ಲಿ ಕ್ರಿ.ಶ 1557 ರ ಕನ್ನಡ ಶಿಲಾ ಶಾಸನ ಪತ್ತೆ, ಶಾರ್ಟ್ ಸರ್ಕಿಟ್‌ನಿಂದ ಕಮ್ಮರಿವಾರಿಪಲ್ಲಿ 48 ಕುರಿಗಳ ಮಾರಣಹೋಮ, ಬಾಗೇಪಲ್ಲಿಯಲ್ಲಿ ಸಾಯಿ ಸ್ವಾಸ್ಥ್ಯ ವೆಲ್‍ನೆಸ್ ಸೆಂಟರ್ ಲೋಕಾರ್ಪಣೆ ಈ ವರ್ಷ ಗಡಿ ತಾಲ್ಲೂಕಿ ಬಾಗೇಪಲ್ಲಿಯಲ್ಲಿ ನಡೆದ ಪ್ರಮುಖ ವಿದ್ಯಮಾನಗಳಾಗಿವೆ.
ವರ್ಷ ಕೊನೆಯಲ್ಲಿ ದೊಡ್ಡ ಅಪಘಾತ ಎನ್ನುವಂತೆ ಅಕ್ಟೋಬರ್ 3ರಂದು ಆಚೇಪಲ್ಲಿ ಗ್ರಾಮದ ಕೆರೆಯಲ್ಲಿ ಈಜಾಡಲು ಹೋದ 3 ವಿದ್ಯಾರ್ಥಿಗಳ ನೀರಿನಲ್ಲಿ ಮುಳುಗಿದರು.
ದಲಿತರ ಮೇಲಿನ ದೌರ್ಜನ್ಯ ತಡೆ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಧೀಶರ ಮುಂದೆ ಕುಸಿದು ಬಿದ್ದು ಮಹಿಳೆ ಸಾವು ಸಹ ಸಂಭವಿಸಿತು.
ವರ್ಷಾಂತ್ಯದ ನವೆಂಬರ್ 14ರಂದು ಹಳೇ ದ್ವೇಷ, ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ಸಾಂಬರ್‌ಗೆ ವಿಷ ಬೆರೆಸಿದ್ದರಿಂದ 8 ಮಂದಿ ಅಸ್ವಸ್ಥರಾದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಂತ್ರಿಕನನ್ನು ಬಂಧಿಸಲಾಯಿತು. ಪ್ರಾಂತ ರೈತ ಸಂಘದ 14 ನೇ ವರ್ಷದ ತಾಲ್ಲೂಕು ಸಮ್ಮೇಳನ ಸಹ ನವೆಂಬರ್‌ನಲ್ಲಿ ನಡೆಯಿತು.
ವರ್ಷಾಂತ್ಯದ ಡಿಸೆಂಬರ್‌ನಲ್ಲಿ ಟಿಎಪಿಸಿಎಂಎಸ್ ನಿದೇರ್ಶಕರ ಸ್ಥಾನಗಳಿಗೆ ಚುನಾವಣೆ ನಡೆಯಿತು. ರಾಷ್ಟ್ರೀಯ ಹೆದ್ದಾರಿ ರಸ್ತೆ 44ರಲ್ಲಿ ನಡೆದ ಸರಣಿ ಅಫಘಾತದಲ್ಲಿ ವೃದ್ಧರೊಬ್ಬರು ಮೃತಪಟ್ಟರು 13 ಮಂದಿಗೆ ಗಾಯಗೊಂಡರು. ಜಿಲ್ಲಾ ಮಟ್ಟದ ಅಲ್ಪಸಂಖ್ಯಾತರ ದಿನಾಚರಣೆಯೂ ಜರುಗಿತು.
ಹೀಗೆ 2025 ಕೊನೆಗೊಳ್ಳುತ್ತಿರುವ ಈ ವೇಳೆಯಲ್ಲಿ ಹಿನ್ನೋಟದಲ್ಲಿ ನೋಡಿದರೆ ಹಲವು ಪ್ರಮುಖ ವಿದ್ಯಮಾನಗಳಿಗೆ ಬಾಗೇಪಲ್ಲಿ ತಾಲ್ಲೂಕು ಸಾಕ್ಷಿಯಾಗಿದೆ.
ಚಿತ್ರಾವತಿ ಹೆಸರು ಬದಲು ಬೇಡ ಎಂದು ಆಗ್ರಹಿಸಿ ಚಿತ್ರಾವತಿ ಅಣೆಕಟ್ಟು ಸಮಿತಿ ಹೋರಾಟದಿಂದ ಪ್ರತಿಭಟನೆ
ಆಗಸ್ಟ್‌ನಲ್ಲಿ ಚಿತ್ರಾವತಿ ಕಾವು
ಬಾಗೇಪಲ್ಲಿಯ ಜೀವನಾಡಿ ಚಿತ್ರಾವತಿ ಜಲಾಶಯಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಹೆಸರು ಇಡುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಘೋಷಿಸಿದ್ದರು. ಇದಕ್ಕೆ ಸಿಪಿಎಂ ಸೇರಿದಂತೆ ಹಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಆಗಸ್ಟ್‌ನಲ್ಲಿ ಚಿತ್ರಾವತಿ ಹೋರಾಟ ಸಮಿತಿಯು ಬಾಗೇಪಲ್ಲಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದವರೆಗೆ ಬೈಕ್ ರ‍್ಯಾಲಿ ನಡೆಸಿತ್ತು.
ನೀರಾವರಿ ಹೋರಾಟಗಾರನ ನಿಧನ
ತಾಲ್ಲೂಕಿನಲ್ಲಿ 2025ರಲ್ಲಿ ಅನೇಕ ಅಪಘಾತ ಪ್ರಕರಣಗಳು ಸಂಭವಿಸಿವೆ. ಪ್ರಮುಖ ನಾಯಕರು ಮತ್ತು ತಾಲ್ಲೂಕು ಮಟ್ಟದಲ್ಲಿ ಹೆಸರು ಪಡೆದವರು ನಿಧನರಾಗಿದ್ದಾರೆ. ಬಯಲು ಸೀಮೆಯ ಜಿಲ್ಲೆಗಳಲ್ಲಿ ನೀರಾವರಿ ಹೋರಾಟಗಾರ ಎನಿಸಿದ್ದ ಮಧು ಸೀತಪ್ಪ ಬಾಗೇಪಲ್ಲಿಯ ತಮ್ಮ ತೋಟದ ಮನೆಯಲ್ಲಿ ನಿಧನರಾದರು. ಬೈಕ್ ಅಪಘಾತದಲ್ಲಿ ಪತ್ರಕರ್ತ ಮಾಡಪಲ್ಲಿ ನರಸಿಂಹಮೂರ್ತಿಬಾಗೇಪಲ್ಲಿ ತಾಲ್ಲೂಕು ಬಿಜೆಪಿ ಘಟಕದ ಮೊದಲ ಅಧ್ಯಕ್ಷ ಬಿ.ನರಸಾರೆಡ್ಡಿ ಕಾಂಗ್ರೆಸ್ ಮುಖಂಡ ಜಿ.ವಿ.ಬಾಬುರೆಡ್ಡಿ ನಿಧನರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.