ADVERTISEMENT

ಚಿಕ್ಕಬಳ್ಳಾಪುರ |ಬಿಜೆಪಿ ಭದ್ರಕೋಟೆಯಲ್ಲಿಯೇ ರಸ್ತೆಗಳಿಲ್ಲ: ಶಾಸಕ ಪ್ರದೀಪ್ ಈಶ್ವರ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 5:56 IST
Last Updated 29 ಸೆಪ್ಟೆಂಬರ್ 2025, 5:56 IST
ಚಿಕ್ಕಬಳ್ಳಾಪುರ ನಾಲ್ಕನೇ ವಾರ್ಡ್‌ನ ಪ್ರಶಾಂತ ನಗರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಸಿಸಿ ರಸ್ತೆ ಉದ್ಘಾಟಿಸಿದರು 
ಚಿಕ್ಕಬಳ್ಳಾಪುರ ನಾಲ್ಕನೇ ವಾರ್ಡ್‌ನ ಪ್ರಶಾಂತ ನಗರದಲ್ಲಿ ಶಾಸಕ ಪ್ರದೀಪ್ ಈಶ್ವರ್ ಸಿಸಿ ರಸ್ತೆ ಉದ್ಘಾಟಿಸಿದರು    

ಚಿಕ್ಕಬಳ್ಳಾಪುರ: ನಗರದ ನಾಲ್ಕನೇ ವಾರ್ಡ್‌ನ ಪ್ರಶಾಂತ ನಗರದಲ್ಲಿ ಭಾನುವಾರ ಶಾಸಕ ಪ್ರದೀಪ್ ಈಶ್ವರ್ ಸಿಸಿ ರಸ್ತೆ ಉದ್ಘಾಟಿಸಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ವಾರ್ಡ್ ಬಿಜೆಪಿಯ ಭದ್ರಕೋಟೆ. ಆದರೆ ಇಲ್ಲಿಯೇ ರಸ್ತೆಗಳು ಇಲ್ಲ. ಈ ಹಿಂದೆ ನಾನೇ ಈ ವಾರ್ಡ್‌ನಲ್ಲಿ ರಸ್ತೆ ಮಾಡಿಸಿದ್ದೆ. ಈಗ ₹ 35 ಲಕ್ಷ ವೆಚ್ಚದಲ್ಲಿ ಮತ್ತೊಂದು ಹೊಸ ರಸ್ತೆ ಉದ್ಘಾಟಿಸಲಾಗಿದೆ. ವಾರ್ಡ್ ಅಭಿವೃದ್ಧಿಯನ್ನು ಸಮಗ್ರವಾಗಿ ಕೈಗೊಳ್ಳಲಾಗುವುದು’ ಎಂದರು.

ಬಿಜೆಪಿ ಭದ್ರಕೋಟೆಯಾಗಿರುವ ವಾರ್ಡ್‌ನಲ್ಲಿ ರಸ್ತೆ ಹಾಕಿಸಲು ಆ ಪಕ್ಷದ ಜನಪ್ರತಿನಿಧಿಗಳಿಗೆ ಸಾಧ್ಯವಾಗಿಲ್ಲ. ವಾರ್ಡ್‌ನ ಎಲ್ಲ ಮುಖಂಡರ ಶ್ರಮದಿಂದ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಪ್ರಶಾಂತ ನಗರ ಎಂದರೆ ಎಲ್ಲವೂ ಅಭಿವೃದ್ಧಿಯಾಗಿದೆ ಎಂದುಕೊಂಡಿದ್ದೆ. ಆದರೆ ಈಗ ನಾನು ಎಲ್ಲವನ್ನೂ ಮಾಡಿಸಬೇಕಾಗಿದೆ ಎಂದು ಟೀಕಿಸಿದರು.

ADVERTISEMENT

ನಂದಿ ಆಂಜನಪ್ಪ ಅವರನ್ನು ವಿಧಾನ ಪರಿಷತ್ ಸದಸ್ಯ ಅಥವಾ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿ ಎಂದು ನಾನೇ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ಮನವಿ ಮಾಡಿದ್ದೆ. ಇದು ಆಂಜನಪ್ಪ ಅವರಿಗೂ ಗೊತ್ತು. ತಾಂತ್ರಿಕ ಸಮಸ್ಯೆಯ ಕಾರಣದಿಂದ ಅನುಮೋದನೆ ಆಗಿಲ್ಲ. ಶೀಘ್ರದಲ್ಲಿಯೇ ಅನುಮೋದನೆಯಾಗಿ ಆಂಜನಪ್ಪ ಅವರು ನಿಗಮ ಮಂಡಳಿ ಅಧ್ಯಕ್ಷರಾಗುವರು. ಆದರೆ ಅವರು ಅಧ್ಯಕ್ಷರಾಗುವುದನ್ನು ಕೆಲವರು ಸಹಿಸುತ್ತಿಲ್ಲ ಎಂದು ಹೇಳಿದರು.

ಮುಂದಿನ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ, ನಗರಸಭೆ ಚುನಾವಣೆಯಲ್ಲಿ ನಾವು ಗೆಲುತ್ತೇವೆ. ಆಗ ನಮ್ಮ ಶಕ್ತಿ ಗೊತ್ತಾಗಲಿದೆ. 20 ಜನ ಮುಖಂಡರನ್ನು ಇಟ್ಟುಕೊಂಡ ರಾಜಕೀಯ ಮಾಡಲು ಹೋದರೆ ಸೋಲಾಗುತ್ತದೆ. ಆ ಕಾರಣದಿಂದಲೇ ಕಳೆದ ಭಾರಿ ಸುಧಾಕರ್ ಸೋಲು ಅನುಭವಿಸಿದ್ದಾರೆ. ಎರಡು ಲಕ್ಷ ಜನರನ್ನು ಜೊತೆಯಲ್ಲಿ ಇಟ್ಟುಕೊಂಡು ನಾನು ರಾಜಕಾರಣ ಮಾಡುತ್ತಿದ್ದೇನೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.