ADVERTISEMENT

ಬ್ರಾಹ್ಮಣರಿಗೆ ಉದ್ಯೋಗ ಸಾಲ ವಿತರಣೆ| ಸಮುದಾಯ ಅಭಿವೃದ್ಧಿಗೆ ಮಂಡಳಿ: ಸಚಿವ ಸುಧಾಕರ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 6:59 IST
Last Updated 4 ಜನವರಿ 2026, 6:59 IST
<div class="paragraphs"><p>ಚಿಂತಾಮಣಿಯಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಉದ್ಘಾಟಿಸಿದರು</p></div>

ಚಿಂತಾಮಣಿಯಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಉದ್ಘಾಟಿಸಿದರು

   

ಚಿಂತಾಮಣಿ: ಸಮಾಜದಲ್ಲಿನ ಎಲ್ಲ ಸಮುದಾಯಗಳ ಬಡವರ್ಗ ದವರಿಗೆ ಆರ್ಥಿಕ ಸಹಕಾರ ನೀಡುವುದರ ಮೂಲಕ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ವಿವಿಧ ಸಮುದಾಯಗಳ ಅಭಿವೃದ್ಧಿ ಮಂಡಳಿ ರಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯಸೌಧದಲ್ಲಿ ಶನಿವಾರ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ 2025-26ನೇ ಸಾಲಿನ ವಿಪ್ರ ಸ್ವ ಉದ್ಯೋಗ ನೇರ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

ಕ್ಷೇತ್ರದ ಎಲ್ಲ ವರ್ಗಗಳನ್ನು ಸಮಾನವಾಗಿ ಅಭಿವೃದ್ಧಿಗೊಳಿಸಲು ದೂರದೃಷ್ಟಿಯ ಯೋಜನೆಗಳನ್ನು ರೂಪಿಸಲಾಗಿದೆ. 22 ಸಮುದಾಯಗಳಿಗೆ ಶೈಕ್ಷಣಿಕ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು ಒಂದೇ ಸ್ಥಳದಲ್ಲಿ ಜಾಗ ಮಂಜೂರು ಮಾಡಲಾಗಿದೆ. ಬ್ರಾಹ್ಮಣ ಸಮುದಾಯಕ್ಕೂ 20 ಗುಂಟೆ ಜಾಗ ನೀಡಲಾಗಿದೆ. ಇಡೀ ರಾಜ್ಯದಲ್ಲಿ ಒಂದೇ ಸ್ಥಳದಲ್ಲಿ ಎಲ್ಲ ಸಮುದಾಯಗಳಿಗೆ ಜಾಗ ನೀಡಿರುವುದು ಚಿಂತಾಮಣಿಯಲ್ಲಿ ಮಾತ್ರ ಎಂದು ತಿಳಿಸಿದರು.

ಮಹಾಕೈಲಾಸಗಿರಿ ಗುಹಾಂತರ ದೇವಾಲಯ ಅಭಿವೃದ್ಧಿಗೂ ಅಡ್ಡಿಪಡಿಸುತ್ತಿದ್ದಾರೆ. ದೇವಾಲಯದ ಜಗ ಡೀಮ್ಡ್ ಪಾರೆಸ್ಟ್ ಎಂದು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರು. ಪರಿಭಾವಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಅರಣ್ಯ ಇಲಾಖೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮತ್ತೆ ಭಾಗಷ: ಪರಿಭಾವಿತ ಅರಣ್ಯ ಪ್ರದೇಶ ಎಂದು ತಕರಾರು ಹಾಕುತ್ತಾರೆ. ಕಳೆದ 10-12 ವರ್ಷಗಳಿಂದ ಅಭಿವೃದ್ಧಿ ಕಡೆ ಗಮನಹರಿಸದೆ ನಮ್ಮ ಕುಟುಂಬದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಮಾಜಿ ಶಾಸಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕ್ಷೇತ್ರದಲ್ಲಿ 2,500 ಎಕರೆಯನ್ನು ಕೈಗಾರಿಕಾ ಪ್ರದೇಶಕ್ಕಾಗಿ ಗುರುತಿಸಲಾಗಿದೆ. ಅಂಬೇಡ್ಕರ್ ಭವನ ನಿರ್ಮಾಣ ಮುಕ್ತಾಯ ಹಂತದಲ್ಲಿದೆ. ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧ ಇಡೀ ರಾಜ್ಯದಲ್ಲಿ ಮಾದರಿಯಾಗಿದೆ. ಎಚ್.ಎನ್.ವ್ಯಾಲಿ ಯೋಜನೆಯಿಂದ ಶಿಡ್ಲಘಟ್ಟದ 45 ಕೆರೆಗಳು ಮತ್ತು ಚಿಂತಾಮಣಿಯ 119 ಕೆರೆಗಳಿಗೆ ನೀರು ತುಂಬಿಸುವ ₹237 ಕೋಟಿ ವೆಚ್ಚದ ಯೋಜನೆ ಶೀಘ್ರವಾಗಿ ಕಾರ್ಯಾರಂಭ ಮಾಡಲಿದೆ ಎಂದರು.

ಸಮಾಜವನ್ನು ಒಡೆಯುವ ರಾಜಕಾರಣ ಮಾಡಬಾರದು. ಪ್ರಜಾಪ್ರಭುತ್ವ, ಜಾತ್ಯತೀತ ನೆಲೆಗಟ್ಟು ಯಾವುದೇ ಒಂದು ವರ್ಗ, ಸಮುದಾಯಕ್ಕೆ ಸೀಮಿತವಾಗಬಾರದು. ದೇವರು ಯಾವುದೇ ಒಂದು ಪಕ್ಷದ ಸೊತ್ತಲ್ಲ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಏನು ಬೇಕಾದರೂ ಹಾಕಬಹುದು ಎಂದು ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಜಿ.ಪ್ರಭು ಮಾತನಾಡಿ, ಬಡತನರೇಖೆಯ ಕೆಳಗಿರುವವರಿಗೆ ಮಂಡಳಿಗಳ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿಯ ಪಥಕ್ಕೆ ತರಬೇಕು ಎನ್ನುವುದು ಸರ್ಕಾರದ ಉದ್ದೇಶ. ಮಂಡಳಿ ಮೂಲಕ ನೈಜ ಫಲಾನುಭವಿಗಳಿಗೆ ಆರ್ಥಿಕ ಚಟುವಟಿಕೆಗಳಿಗೆ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೂಡು ಜಯಸಿಂಹ, ಸಿಇಒ ನವೀನ್ ಭಟ್, ಎನ್.ಕೃಷ್ಣ, ಸಿ.ಎನ್.ನಾಗೇಶ್, ಜಗದೀಶರಾವ್, ಪಿ.ಎಂ.ಮಾಲತೇಶ್, ದೀಪಶ್ರೀ, ಎಸ್.ಆನಂದ್, ಸುದರ್ಶನಯಾದವ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.