ADVERTISEMENT

ಜುಲೈನಲ್ಲಿ ನಂದಿಬೆಟ್ಟದಲ್ಲಿ ಸಂಪುಟ ಸಭೆ?

16 ಅಥವಾ 17 ರಂದು ನಡೆಸಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 20:02 IST
Last Updated 19 ಜೂನ್ 2025, 20:02 IST
ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿರುವ ನಂದಿಬೆಟ್ಟ
ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿರುವ ನಂದಿಬೆಟ್ಟ   

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿಗಿರಿಧಾಮದಲ್ಲಿ ಜೂ.19ರಂದು ನಿಗದಿಯಾಗಿದ್ದ ಸಚಿವ ಸಂಪುಟ ಸಭೆ ವಿಧಾನಸೌಧಕ್ಕೆ ಸ್ಥಳಾಂತರವಾಗಿತ್ತು. ಇದಕ್ಕೆ ಜಿಲ್ಲೆಯಲ್ಲಿ ನಾಗರಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. 

ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂ‍‍ಪುಟ ಸಭೆಯಲ್ಲಿ  ನಂದಿಬೆಟ್ಟದಲ್ಲಿ ಜುಲೈ 16 ಅಥವಾ 17 ರಂದು ಸಂಪುಟ ಸಭೆ ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಹಲವು ಇಲಾಖೆಯಿಂದ ಪ್ರಸ್ತಾವಗಳು ಬಾರದೇ ಇದ್ದ ಕಾರಣ, ಬೆಂಗಳೂರಿನಲ್ಲಿ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಯಿತು. ಆ ಪ್ರದೇಶಕ್ಕೆ ಪರಿಣಾಮಕಾರಿ ಕೆಲಸಗಳು ಆಗಬೇಕು ಎಂಬ ಉದ್ದೇಶದಿಂದ ಮತ್ತು ಕೆಲವು ಸಚಿವರ ಕೋರಿಕೆ ಮೇರೆಗೆ ಮುಂದೂಡಲಾಯಿತು ಎಂದೂ ಸರ್ಕಾರ ತಿಳಿಸಿದೆ. 

ಈಗ ಜುಲೈ ತಿಂಗಳಲ್ಲಿ ನಡೆಯುವ ಸಚಿವ ಸಂಪುಟದತ್ತ ಜಿಲ್ಲೆಯ ಜನರ ಚಿತ್ತ ಹರಿದಿದೆ. ಜಿಲ್ಲೆಯ ಶಾಸಕರು ಈ ಭಾಗದ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಮುಂದಿನ ತಿಂಗಳು ನಂದಿಯಲ್ಲಿ ಸಚಿವ ಸಂಪುಟ ಸಭೆ ನಡೆದರೆ ಯಾವ ವಿಚಾರಗಳು ಕಾರ್ಯಸೂಚಿ ಪಟ್ಟಿಯಲ್ಲಿ ಇರಲಿವೆ ಎನ್ನುವ ಕುತೂಹಲ ಸಹ ಶಾಶ್ವತ ನೀರಾವರಿ ಹೋರಾಟಗಾರರು, ರೈತ ಮುಖಂಡರದ್ದಾಗಿದೆ. 

ADVERTISEMENT

ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳ ಅಭಿವೃದ್ಧಿ ವಿಚಾರವಾಗಿ ನಂದಿಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಬೇಕು ಎನ್ನುವ ಒತ್ತಾಯ ಜನಪ್ರತಿನಿಧಿಗಳದ್ದೂ ಆಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.