ADVERTISEMENT

ಚಿಕ್ಕಬಳ್ಳಾಪುರದಲ್ಲಿ ‘ಮನರೇಗಾ ಬಚಾವೋ’ ಸಮಾವೇಶ: ಮಣ್ಣು ಹೊತ್ತು ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 1:01 IST
Last Updated 24 ಫೆಬ್ರುವರಿ 2026, 1:01 IST
ಚಿಕ್ಕಬಳ್ಳಾಪುರದಲ್ಲಿ ನಡೆದ  ‘ಮನರೇಗಾ ಬಚಾವ್ ಸಂಗ್ರಾಮ’ ಪ್ರತಿಭಟನಾ ಸಮಾವೇಶಕ್ಕೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೇವಾಲ ಅವರು ಮಣ್ಣು ಹೊರುವ ಮೂಲಕ ಚಾಲನೆ ನೀಡಿದರು 
ಚಿಕ್ಕಬಳ್ಳಾಪುರದಲ್ಲಿ ನಡೆದ  ‘ಮನರೇಗಾ ಬಚಾವ್ ಸಂಗ್ರಾಮ’ ಪ್ರತಿಭಟನಾ ಸಮಾವೇಶಕ್ಕೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೇವಾಲ ಅವರು ಮಣ್ಣು ಹೊರುವ ಮೂಲಕ ಚಾಲನೆ ನೀಡಿದರು     

ಚಿಕ್ಕಬಳ್ಳಾಪುರ: ‘ವಿಬಿ–ಜಿ ರಾಮ್‌ ಜಿ’ ರದ್ದುಗೊಳಿಸಿ, ಮನರೇಗಾ ಮರುಸ್ಥಾಪಿಸಬೇಕು. ಮನರೇಗಾ ಮರು ಸ್ಥಾಪಿಸುವವರೆಗೆ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಕಾಂಗ್ರೆಸ್‌ ಪಕ್ಷದ ನಾಯಕರು ಶ‍ಪಥ ಮಾಡಿದರು.

ನಗರದಲ್ಲಿ ಸೋಮವಾರ ಪಕ್ಷ ಏರ್ಪಡಿಸಿದ್ದ‘ಮನರೇಗಾ ಬಚಾವ್ ಸಂಗ್ರಾಮ’ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್‌ ಮುಖಂಡರು, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮುಂತಾದವರು ಗುದ್ದಲಿಯಿಂದ ಮಣ್ಣು ಅಗೆದು ಬುಟ್ಟಿಗೆ ತುಂಬಿ ತಲೆಮೇಲೆ ಹೊತ್ತುಕೊಳ್ಳುವ ಮೂಲಕ ‘ಸಂಗ್ರಾಮ’ಕ್ಕೆ ಚಾಲನೆ ನೀಡಿದರು.

ADVERTISEMENT

‘ಮನರೇಗಾ ಹೆಸರು, ಸ್ವರೂಪ ಬದಲಿಸುವ ಮೂಲಕ ‌ಕೂಲಿ ಕಾರ್ಮಿಕರು, ಪರಿಶಿಷ್ಟ ಜಾತಿ, ಪಂಗಡ ಹಾಗೂ ದುರ್ಬಲ ವರ್ಗಗಳ ಬದುಕನ್ನು ಬಿಜೆಪಿ ನಾಶಗೊಳಿಸುತ್ತಿದೆ’ ಎಂದು ಸಚಿವರು, ಮುಖಂಡರು ಟೀಕಿಸಿದರು.

ಸಿದ್ದರಾಮಯ್ಯ ಮಾತನಾಡಿ, ’ಮನರೇಗಾದಡಿ ದೇಶದಲ್ಲಿ ಪರಿಶಿಷ್ಟ ಜಾತಿಯ ಶೇ 17 ಮತ್ತು ಪಂಗಡದ ಶೇ 11ರಷ್ಟು ಸೇರಿ ಶೇ 53ರಷ್ಟು ಮಂದಿ ಉದ್ಯೋಗ ಪಡೆಯುತ್ತಿದ್ದರು. ಈಗ ಬಿಜೆಪಿ ಸರ್ಕಾರ ಈ ಜನರ ಉದ್ಯೋಗದ ಹಕ್ಕುಗಳನ್ನು ಕಸಿದುಕೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜನರ ಉದ್ಯೋಗದ ಹಕ್ಕು ಮರುಸ್ಥಾಪಿಸಬೇಕು. ನರೇಗಾದ ಕೂಲಿಯನ್ನು ದಿನಕ್ಕೆ ₹400 ನೀಡಬೇಕು. ಈ ಬೇಡಿಕೆಗಳು ಈಡೇರದೇ ಆಂದೋಲನ ನಿಲ್ಲದು. ಹೋರಾಟದಿಂದಾಗಿಯೇ ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರ ರದ್ದುಗೊಳಿಸಿತು. ಅದೇ ರೀತಿಯ ಮನರೇಗಾ ಕುರಿತು ಹೋರಾಟ ನಡೆಯಲಿದೆ’ ಎಂದು ಹೇಳಿದರು.

ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ. ಅದೇ ರೀತಿಯಲ್ಲಿ ಬಿಜೆಪಿಯ ಅಂತಿಮ ದಿನಗಳು ಇವು ಎಂದು ಕಿಡಿಕಾರಿದರು.

ವಿಬಿ–ಜಿ ರಾಮ್‌ ಜಿ ಯೋಜನೆಯಡಿ ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನ ಭರಿಸಬೇಕು ಎಂಬುದನ್ನು ಬಿಜೆಪಿ ಆಡಳಿತದ ರಾಜ್ಯಗಳೇ ಒಪ್ಪುತ್ತಿಲ್ಲ. ಚಂದ್ರಬಾಬು ನಾಯ್ಡು ಅವರೂ ಬೇಸರ ವ್ಯಕ್ತಪಡಿಸಿದ್ದಾರೆ’ ಎಂದರು.

ದೇಶದಲ್ಲಿ ಮಹಾತ್ಮ ಗಾಂಧಿ ಅವರ ಹೆಸರನ್ನು ಅಳಿಸಲು ಸಾಧ್ಯವೇ ಇಲ್ಲ. ಯಾವ ರೀತಿಯಲ್ಲಿ ಎಸ್‌ಐಆರ್ ಮೂಲಕ ಮತದಾರರ ಹಕ್ಕು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆಯೊ ಅದೇ ರೀತಿಯಲ್ಲಿ ಬಡವರ ಉದ್ಯೋಗದ ಹಕ್ಕು ಕಿತ್ತುಕೊಳ್ಳಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದರು.

ಶ್ರಮಿಕರು ಕೂಲಿ ಕಾರ್ಮಿಕರನ್ನು ಕೇಂದ್ರ ಸರ್ಕಾರ ಶ್ರೀಮಂತರಿಗೆ ಅಡವಿಟ್ಟಿದೆ. ಈಗ ಎಚ್ಚೆತ್ತುಕೊಳ್ಳದಿದ್ದರೆ ಮಾರುತ್ತಾರೆ. ಹಳ್ಳಿಗಳು ಕೂಲಿ ಕಾರ್ಮಿಕರ ಉಳಿವಿಗೆ ಈ ಸಂಗ್ರಾಮ ಅನಿವಾರ್ಯ
ರಣದೀಪ್‌ಸಿಂಗ್ ಸುರ್ಜೇವಾಲ ರಾಜ್ಯ ಕಾಂಗ್ರೆಸ್ ಉಸ್ತುವಾರಿ
ನರೇಗಾದಿಂದ ಕೆಲಸ ಮಾಡಿಕೊಡುವರು ಎಂದು ಪಂಚಾಯಿತಿ ಸದಸ್ಯರಿಗೆ ಕಿಮ್ಮತ್ತು ಇತ್ತು. ಈಗ ಕೇಂದ್ರ ಸರ್ಕಾರ ಪಂಚಾಯಿತಿ ಸದಸ್ಯರಿಗೆ ಕಿಮ್ಮತ್ತು ದೊರೆಯದಂತೆ ಮಾಡಿದೆ
ಕೃಷ್ಣಬೈರೇಗೌಡ ಸಚಿವ
ಎಲ್ಲ ಗ್ರಾ.ಪಂ ಹೆಸರಿನ ಮುಂದೆ ‘ಮಹಾತ್ಮ ಗಾಂಧಿ’ ಹೆಸರು
ಮನರೇಗಾ ಹೆಸರು ಬದಲಾಯಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ರಾಜ್ಯ ಕಾಂಗ್ರೆಸ್‌ ಹೊಸ ತಂತ್ರ ರೂಪಿಸಿದೆ. ‘ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ಹೆಸರಿನ ಮುಂದೆ ‘ಮಹಾತ್ಮ ಗಾಂಧಿ’ ಅವರ ಹೆಸರು ಸೇರಿಸಲು ತೀರ್ಮಾನಿಸಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

‘ರಾಮ’ನ ಹೆಸರಲ್ಲಿ ರಾಜಕೀಯ

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹೆಸರನ್ನು ತೆಗೆದು, ವಿಬಿ ಜಿ-ರಾಮ್-ಜಿ ಅಂತ ಇಟ್ಟಿದ್ದೇಕೆ? ಅದನ್ನು ವಿಬಿ ಗ್ರಾಮ್‌ ಜಿ ಅಂತ ಕರೆಯಬಹುದಿತ್ತು ಎಂದು ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಆದರೆ, ಬಿಜೆಪಿ ರಾಮನ ಹೆಸರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಇದರಲ್ಲಿ ‘ಜಿ-ರಾಮ್’ ಎಂದರೆ ‘ಗೋಡ್ಸೆ ರಾಮ’ನೋ ಎಂಬುದನ್ನು ಜನತೆಗೆ ಸ್ಪಷ್ಟಪಡಿಸಲಿ. ಮಹಾತ್ಮ ಗಾಂಧಿಯನ್ನು ಇಡೀ ವಿಶ್ವವೇ ಗೌರವಿಸುತ್ತಿರುವಾಗ ಬಿಜೆಪಿ ಸರ್ಕಾರ ಮಾತ್ರ ಅವರ ಹೆಸರನ್ನೇ ಕಿತ್ತೊಗೆಯುತ್ತಿದೆ. ಇಂತಹ ಕುಕೃತ್ಯಕ್ಕಿಳಿದ ಬಿಜೆಪಿಗೆ ಇಡೀ ದೇಶದಲ್ಲೇ ಜನ ಬರುವ ದಿನಗಳಲ್ಲಿ ಪಾಠ ಕಲಿಸುತ್ತಾರೆ’ ಎಂದು ಹೇಳಿದರು.

ಎರಡನೇ ಬಾರಿ ಗಾಂಧೀಜಿ ಹತ್ಯೆ: ಎಐಸಿಸಿ ಕಾರ್ಯದರ್ಶಿ ಮಯೂರ
1948ರಲ್ಲಿ ನಾಥೂರಾಮ್ ಗೋಡ್ಸೆ ಗಾಂಧೀಜಿಯವರನ್ನು ಹತ್ಯೆ ಮಾಡಿದರೆ; ಈಗ ನರೇಂದ್ರ ಮೋದಿಯವರು ಗಾಂಧೀಜಿಯವರ ಹೆಸರಿನ ನರೇಗಾ ಯೋಜನೆ ರದ್ದುಗೊಳಿಸಿ ವಿಬಿ ಜಿ ರಾಮ್ ‌ಜಿ ಜಾರಿ ಮಾಡುವ ಮೂಲಕ ಗಾಂಧೀಜಿಯವರನ್ನು ಎರಡನೇ ಬಾರಿ ಹತ್ಯೆ ಮಾಡಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.