ADVERTISEMENT

ಚಾಲಕ ಆತ್ಮಹತ್ಯೆ: ಕೆ.ಸುಧಾಕರ್ ಎ1, ಮೂರು ಪುಟಗಳ ಡೆತ್‌ನೋಟ್

ಕಾಂಗ್ರೆಸ್–ಬಿಜೆಪಿ ನಡುವೆ ರಾಜಕೀಯ ಜಟಾಪಟಿ ಮೂರು ಪುಟಗಳ ಡೆತ್‌ನೋಟ್

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 6:06 IST
Last Updated 8 ಆಗಸ್ಟ್ 2025, 6:06 IST
<div class="paragraphs"><p>ಆತ್ಮಹತ್ಯೆ ಮಾಡಿಕೊಂಡ ಬಾಬು ಕುಟುಂಬ ಸದಸ್ಯರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ರೋದಿಸುತ್ತಿರುವುದು</p></div>

ಆತ್ಮಹತ್ಯೆ ಮಾಡಿಕೊಂಡ ಬಾಬು ಕುಟುಂಬ ಸದಸ್ಯರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ರೋದಿಸುತ್ತಿರುವುದು

   

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣವು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ತಣ್ಣಗಿದ್ದ ರಾಜಕಾರಣವನ್ನು ಈ ಪ್ರಕರಣವು ಕಾವೇರುವಂತೆ ಮಾಡಿದೆ. 

ಸಂಸದ ಡಾ.ಕೆ.ಸುಧಾಕರ್ ಅವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಸಂಸದರು ಮೊದಲ ಆರೋಪಿಯಾಗಿದ್ದಾರೆ. ಚಿಕ್ಕಕಾಡಿಗೇನಹಳ್ಳಿ ನಾಗೇಶ್ ಎರಡನೇ ಮತ್ತು ಜಿ.ಪಂ ಲೆಕ್ಕಶಾಖೆಯ ಎಸ್‌ಡಿಎ ಮಂಜುನಾಥ್ ಮೂರನೇ ಆರೋಪಿ ಆಗಿದ್ದಾರೆ.

ADVERTISEMENT

ಜಿಲ್ಲಾಡಳಿತ ಭವನದ ವಿದ್ಯಮಾನ: ಆತ್ಮಹತ್ಯೆ ಮಾಡಿಕೊಂಢ ಬಾಬು ನಗರದ 12ನೇ ವಾರ್ಡ್‌ನಲ್ಲಿ ವಾಸಿಸುತ್ತಿದ್ದರು. ಕಳೆದ ಐದು ವರ್ಷಗಳಿಂದ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿಯ ವಾಹನ ಚಾಲಕರಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಗುರುವಾರ ಬೆಳಿಗ್ಗೆ 5ರ ಸುಮಾರಿನಲ್ಲಿಯೇ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದರು. ಅವರ ಪತ್ನಿ 6 ಗಂಟೆ ಸುಮಾರಿಗೆ ಅವರಿಗೆ ಕರೆ ಮಾಡಿದರೂ ಸ್ವೀಕರಿಸಿಲ್ಲ. ತಕ್ಷಣ ಅವರ ಪತ್ನಿ ತಮ್ಮ ಭಾವ ಲೋಕೇಶ್ ಅವರಿಗೆ ಕರೆ ಮಾಡಿ ಈ ಬಗ್ಗೆ ತಿಳಿಸಿದ್ದಾರೆ. ಆಗ ಲೋಕೇಶ್, ಬಾಬುವನ್ನು ಹುಡುಕಿ ಬಂದಿದ್ದಾರೆ. ಅಷ್ಟರಲ್ಲಿ ಜಿ.ಪಂ ಕಚೇರಿಯ ಹಿಂಭಾಗದ ಹೊಂಗೆ ಮರಕ್ಕೆ ಬಾನು ನೇಣು ಹಾಕಿಕೊಂಡಿದ್ದಾರೆ.

ಈ ವಿಚಾರ ತಿಳಿಯುತ್ತಲೇ ಪೊಲೀಸರು, ಮಾಧ್ಯಮದವರು ಸೇರಿದಂತೆ ಜನರು ಜಿಲ್ಲಾಡಳಿತ ಭವನದ ಬಳಿ ದೊಡ್ಡ ಸಂಖ್ಯೆಯಲ್ಲಿಯೇ ಜಮಾಯಿಸಿದ್ದರು. ಬಾಬು ಬರೆದಿರುವ ಡೆತ್‌ನೋಟ್ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಹರಿದಾಡಿತು. 

ಡೆತ್‌ನೋಟ್‌ನಲ್ಲಿ ಸಂಸದ ಡಾ.ಕೆ.ಸುಧಾಕರ್, ಅವರ ಬೆಂಬಲಿಗ ನಾಗೇಶ್ ಮತ್ತು ಮಂಜುನಾಥ್ ಹೆಸರು ಇತ್ತು. ಈ ವಿಚಾರ ಹರಡುತ್ತಲೇ ಪ್ರಕರಣವೂ ಚರ್ಚೆಗೆ ಒಳಗಾಯಿತು.

10ರ ಸುಮಾರಿಗೆ ಕಾಂಗ್ರೆಸ್ ಕಾರ್ಯಕರ್ತರು ಶಿಡ್ಲಘಟ್ಟದಲ್ಲಿ ಪ್ರತಿಭಟನೆ ನಡೆಸಿದರು. ಸುಧಾಕರ್ ಮತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇತ್ತ ಬಿಜೆಪಿ ಮುಖಂಡರು ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಗೈದರು.

ಚಿಕ್ಕಬಳ್ಳಾಪುರ ರಾಜಕೀಯದಲ್ಲಿ ಈ ಪ್ರಕರಣವು ಗಂಭೀರ ತಿರುವು ಪಡೆಯುವ ಲಕ್ಷಣಗಳೂ ಇವೆ. 

ಪೊಲೀಸರ ವಿರುದ್ಧ ಬಿಜೆಪಿ ಆರೋಪ

ಮೃತರ ಪತ್ನಿ ದೂರು ನೀಡುವಾಗ ಪೊಲೀಸರು ಸುಧಾಕರ್ ಹೆಸರನ್ನು ಸೇರಿಸುವಂತೆ ಒತ್ತಡ ಹೇರಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಸಂಸದ ಡಾ.ಕೆ.ಸುಧಾಕರ್ ಅವರೇ ಗ್ರಾಮಾಂತರ ಠಾಣೆ ಪಿಎಸ್‌ಐ ವಿರುದ್ಧ ಈ ಆರೋಪ ಮಾಡಿದ್ದಾರೆ. 

ಪ್ರಾಧಿಕಾರದ ಮಾಜಿ ಅಧ್ಯಕ್ಷರ ಅಳಿಯ ನಾಗೇಶ್

ಪ್ರಕರಣದಲ್ಲಿ ಚಿಕ್ಕಕಾಡಿಗೇನಹಳ್ಳಿ ನಾಗೇಶ್ ಎರಡನೇ ಆರೋಪಿ. ಮೃತರ ಪತ್ನಿ ನೀಡಿರುವ ದೂರಿನಲ್ಲಿ ನಾಗೇಶ್ ಪಾತ್ರದ ಬಗ್ಗೆ ವಿಸ್ತಾರವಾಗಿ ಉಲ್ಲೇಖಿಸಿದ್ದಾರೆ. ನಾಗೇಶ್, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಕೃಷ್ಣಮೂರ್ತಿ ಅಳಿಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.