ADVERTISEMENT

ಮೈಸೂರು ದಸರಾ: ‘ಜ್ಞಾನ,ವಿಜ್ಞಾನಿಗಳ ನಾಡು’ ಚಿಕ್ಕಬಳ್ಳಾಪುರ ಜಿಲ್ಲೆಯ ಸ್ತಬ್ಧಚಿತ್ರ

ಅ.2ರ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಚಿಕ್ಕಬಳ್ಳಾಪುರ ಪ್ರತಿನಿಧಿಸುವ ಟ್ಯಾಬ್ಲೊ

ಡಿ.ಎಂ.ಕುರ್ಕೆ ಪ್ರಶಾಂತ
Published 23 ಸೆಪ್ಟೆಂಬರ್ 2025, 4:22 IST
Last Updated 23 ಸೆಪ್ಟೆಂಬರ್ 2025, 4:22 IST
ಚಿಕ್ಕಬಳ್ಳಾಪುರ ಜ್ಞಾನಿ, ವಿಜ್ಞಾನಿಗಳ ನಾಡು ಸ್ತಬ್ಧಚಿತ್ರದ ಚಿತ್ರ
ಚಿಕ್ಕಬಳ್ಳಾಪುರ ಜ್ಞಾನಿ, ವಿಜ್ಞಾನಿಗಳ ನಾಡು ಸ್ತಬ್ಧಚಿತ್ರದ ಚಿತ್ರ   

ಚಿಕ್ಕಬಳ್ಳಾಪುರ: ಪ್ರತಿ ವರ್ಷದ ನಾಡ ಹಬ್ಬ ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆ ಸ್ತಬ್ಧಚಿತ್ರಗಳ ಮೆರವಣಿಗೆ. ವಿಜಯ ದಶಮಿಯ ದಿನ ಜಂಜೂ ಸವಾರಿಯ ಜೊತೆಗೆ ಸ್ತಬ್ಧಚಿತ್ರಗಳ ಮೆರವಣಿಗೆ ಸಹ ಸಾಗಲಿದೆ. ಈ ಬಾರಿ ಅ.2ರ ಜಂಬೂ ಸವಾರಿ ಮೆರವಣಿಗೆಯಲ್ಲಿ ಪ್ರತಿ ಜಿಲ್ಲೆಯ ಸ್ತಬ್ಧಚಿತ್ರಗಳೂ ಭಾಗವಹಿಸಲಿವೆ. 

ಜಿಲ್ಲಾ ಪಂಚಾಯಿತಿಗಳು ಆಯಾ ಜಿಲ್ಲೆಗೆ ಸಂಬಂಧಿಸಿದಂತೆ ಪ್ರಮುಖ ಬೆಟ್ಟ, ದೇಗುಲ, ವಿಚಾರಗಳು, ಮಹನೀಯರು, ದಾರ್ಶನಿಕರು, ಸ್ಥಳಗಳನ್ನು ಆಧರಿಸಿ ಸ್ತಬ್ಧಚಿತ್ರಗಳನ್ನು ರೂಪಿಸುತ್ತವೆ.

ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ವಿಭಿನ್ನವಾಗಿ ‘ಜ್ಞಾನ, ವಿಜ್ಞಾನಿಗಳ ನಾಡು’ ಸ್ತಬ್ಧಚಿತ್ರ ರೂಪಿಸಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಇದರ ಜವಾಬ್ದಾರಿಯನ್ನು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ನೀಡಲಾಗಿದೆ.

ADVERTISEMENT

ಜಿಲ್ಲೆಯು ಭಾರತ ರತ್ನ ಸರ್‌.ಎಂ.ವಿಶ್ವೇಶ್ವರಯ್ಯ, ಸಿ.ಎನ್‌.ಆರ್‌.ರಾವ್, ಗಾಂಧಿವಾದಿ ಎಚ್‌.ನರಸಿಂಹಯ್ಯ ಸೇರಿದಂತೆ ಪ್ರಖ್ಯಾತರನ್ನು ನಾಡಿಗೆ ನೀಡಿದೆ. ಚಿಕ್ಕಬಳ್ಳಾಪುರ ಎನ್ನುತ್ತಿದ್ದಂತೆ ಸರ್‌.ಎಂ.ವಿಶ್ವೇಶ್ವರಯ್ಯ ಅವರ ಹೆಸರು ನಾಡಿಗೆ ಕಾಣುತ್ತದೆ. ಭಾರತ ರತ್ನ ಸರ್‌.ಎಂ.ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ನಾಡು, ನುಡಿ, ಕೈಗಾರಿಕೆ ಸೇರಿದಂತೆ ಅಭಿವೃದ್ಧಿ ವಿಚಾರವಾಗಿ ಮಹತ್ವ ಪೂರ್ಣವಾದ ಕೊಡುಗೆಗಳನ್ನು ನೀಡಿದ್ದಾರೆ. 

ರಸಾಯನ ತಜ್ಞ ಹಾಗೂ ಭಾರತ ರತ್ನ ಸಿ.ಎನ್.ಆರ್.ರಾವ್ ಸಹ ಜಿಲ್ಲೆಯವರಾಗಿದ್ದಾರೆ. ಹೀಗೆ ಒಂದೇ ಜಿಲ್ಲೆಯ ಇಬ್ಬರು ಮಹನೀಯರು ಭಾರತ ರತ್ನ ಗೌರವಕ್ಕೆ ಪಾತ್ರವಾಗಿದ್ದಾರೆ. ಇದು ಚಿಕ್ಕಬಳ್ಳಾಪುರ ಜಿಲ್ಲೆಯ ಹೆಮ್ಮೆಯೂ ಹೌದು. 

ಗೌರಿಬಿದನೂರು ತಾಲ್ಲೂಕಿನ ಹೊಸೂರಿನ ಎಚ್‌.ನರಸಿಂಹಯ್ಯ ಶಿಕ್ಷಣತಜ್ಞ, ಗಾಂಧಿವಾದಿ ಮತ್ತು ವೈಚಾರಿಕತೆಯ ಪ್ರತಿಪಾದಕರಾಗಿ ನಾಡಿನಲ್ಲಿಯೇ ಪ್ರಸಿದ್ಧಿ ಪಡೆದವರು. ಕೈವಾರ ಯೋಗಿ ನಾರೇಯಣ ಯತೀಂದ್ರರು, ವೀರ ಬ್ರಹ್ಮಯ್ಯ ಸ್ವಾಮಿ ಅವರು ಕಾಲಜ್ಞಾನದ ಮೂಲಕ ನಾಡಿನ ಜನಮಾನಸಕ್ಕೆ ಪರಿಚಿತರು. 

ಹೀಗೆ ಜ್ಞಾನ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ಚಿಕ್ಕಬಳ್ಳಾಪುರ ಜಿಲ್ಲೆ ನೀಡಿದೆ. ಈ ಹಿನ್ನೆಲೆಯಲ್ಲಿ ‘ಜ್ಞಾನ ವಿಜ್ಞಾನಗಳ ನಾಡು’ ಸ್ತಬ್ಧಚಿತ್ರವು ಈ ಬಾರಿ ಮೈದಳೆಯುತ್ತಿದೆ. ಗೌರಿಬಿದನೂರಿನ ಎಚ್‌.ಎನ್.ವಿಜ್ಞಾನ ಕೇಂದ್ರ ಸಹ ನಾಡಿನಲ್ಲಿ ಪ್ರಸಿದ್ಧವಾಗಿದೆ.

ಜಿಲ್ಲೆಯಲ್ಲಿನ ಜ್ಞಾನಿಗಳು ಮತ್ತು ವಿಜ್ಞಾನಿಗಳ ಕೊಡುಗೆಗಳು, ಅವರ ಬದುಕನ್ನು ಬಿಂಬಿಸುವ ರೀತಿಯಲ್ಲಿ ಸ್ತಬ್ಧಚಿತ್ರಗಳು ರೂಪುಗೊಳ್ಳಲಿವೆ ಎನ್ನುತ್ತವೆ ಜಿಲ್ಲಾ ಪಂಚಾಯಿತಿ ಮೂಲಗಳು. 

ಈಗಾಗಲೇ ಸ್ತಬ್ಧಚಿತ್ರದ ಕೆಲಸಗಳು ಭರದಿಂದ ನಡೆಯುತ್ತಿವೆ. ನಾಡಿಗೆ ಜಿಲ್ಲೆಯ ಮಹನೀಯರ ಕೊಡುಗೆಗಳನ್ನು ಮತ್ತೊಮ್ಮೆ ಮನಗಾಣಿಸಲು ಸಜ್ಜಾಗುತ್ತಿವೆ.

ಈ ಹಿಂದಿನ ಸ್ತಬ್ಧಚಿತ್ರಗಳು: ಈ ಹಿಂದಿನ ವರ್ಷ ‘ನಂದಿಬೆಟ್ಟಕ್ಕೆ ರೋಪ್ ವೇ’ ಸ್ತಬ್ಧಚಿತ್ರವನ್ನು ರೂಪಿಸಲಾಗಿತ್ತು. ಬೆಟ್ಟ, ಸುರಂಗಗಳ ಸಾಲು, ಪ್ರಾಣಿ ಪಕ್ಷಿಗಳನ್ನು ಇದರಲ್ಲಿ ಸ್ಥಾನ ಪಡೆದಿದ್ದವು. ಈ ಪ್ರದರ್ಶನವು ಡಿಜಿಟಲ್‌ ರೂಪದಲ್ಲಿತ್ತು. 

ಚಿಂತಾಮಣಿಯ ಧಾರ್ಮಿಕ ಕ್ಷೇತ್ರ ಹಾಗೂ ಪ್ರಸಿದ್ಧ ಪ್ರವಾಸಿ ತಾಣಗಳಾದ ಕೈವಾರ, ಕೈಲಾಸಗಿರಿ ಹಾಗೂ ಮುರಗಮಲ್ಲ ದರ್ಗಾ ಸಂಗಮಗೊಂಡಿರುವ ಆಕರ್ಷಕವಾದ ಸ್ತಬ್ಧಚಿತ್ರ, ದಕ್ಷಿಣ ಭಾರತ ಜಲಿಯಾನ್ ವಾಲಾಬಾಗ್ ಎಂದೇ ಖ್ಯಾತಿ ಪಡೆದಿರುವ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದ ಹುತಾತ್ಮರ ವೀರಸೌಧ, ವಿದುರಾಶ್ವತ್ಥ ದೇಗುಲದ ಸ್ತಬ್ಧಚಿತ್ರ, ಗ್ರೀನ್ ನಂದಿ, ಕ್ಲೀನ್ ನಂದಿ ಎಂಬ ಸ್ತಬ್ದಚಿತ್ರ, ಚಿಕ್ಕಬಳ್ಳಾಪುರದ ರಂಗಸ್ಥಳ, ಬಾಗೇಪಲ್ಲಿ ಗುಮ್ಮನಾಯಕನಪಾಳ್ಯ, ರೇಷ್ಮೆ ಉದ್ಯಮ, ಕೈವಾರದ ಬಕಾಸುರ ವಧೆ, ಜಿಲ್ಲೆಯ ಭಾರತ ರತ್ನಗಳಾದ ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಸಿ.ಎನ್.ಆರ್.ರಾವ್ ಅವರ ಕುರಿತು ಸ್ತಬ್ಧಚಿತ್ರಗಳು ಈ ಹಿಂದಿನ ವರ್ಷಗಳಲ್ಲಿ ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದವು.  

‘ನಾಡಿಗೆ ಜಿಲ್ಲೆಯ ಮಹತ್ವ ಮನಗಾಣಿಸುವ ಟ್ಯಾಬ್ಲೊ’

ಪ್ರತಿ ವರ್ಷ ಒಂದೊಂದು ಸ್ಥಳ ನಿರ್ದಿಷ್ಟ ವಿಚಾರಗಳನ್ನು ಇಟ್ಟುಕೊಂಡು ಸ್ತಬ್ಧಚಿತ್ರಗನ್ನು ರೂಪಿಸಲಾಗಿದೆ. ಆದರೆ ಈ ಬಾರಿ ಜಿಲ್ಲೆಯ ಐತಿಹಾಸಿಕ ವ್ಯಕ್ತಿಗಳು ಮತ್ತು ದಾರ್ಶನಿಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸ್ತಬ್ಧಚಿತ್ರವನ್ನು ರೂಪಿಸಲಾಗಿದೆ. ನಾಡಿಗೆ ಜಿಲ್ಲೆಯ ಮಹತ್ವವನ್ನು ಸಾರುವ ರೀತಿಯಲ್ಲಿ ಸ್ತಬ್ಧಚಿತ್ರ ಇರಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ‘ಪ್ರಜಾವಾಣಿ’ಗೆ ತಿಳಿಸಿದರು. ‌‌ಕಾಲಜ್ಞಾನಿಗಳಾದ ಕೈವಾರ ತಾತಯ್ಯ ವೀರ ಬ್ರಹ್ಮಯ್ಯ ಭಾರತ ರತ್ನ ಸರ್‌.ಎಂ.ವಿಶ್ವೇಶ್ವರಯ್ಯ ಸಿ.ಎನ್‌.ಆರ್‌.ರಾವ್ ಗಾಂಧಿವಾದಿ ಮತ್ತು ಶಿಕ್ಷಣ ತಜ್ಞ ಎಚ್‌.ನರಸಿಂಹಯ್ಯ ಈ ನೆಲದವರು. ಜ್ಞಾನ ವಿಜ್ಞಾನ ಕ್ಷೇತ್ರಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯು ಮಹತ್ವದ ಕೊಡುಗೆ ನೀಡಿದೆ. ಜ್ಞಾನ ವಿಜ್ಞಾನದ ವಿಚಾರವಾಗಿ ಈ ಜಿಲ್ಲೆಯ ಮಹನೀಯರು ರಾಜ್ಯದಲ್ಲಿ ಪ್ರಸಿದ್ಧವಾಗಿದ್ದಾರೆ. ಈ ಎಲ್ಲ ದೃಷ್ಟಿಕೋನದಿಂದ ಜ್ಞಾನ ವಿಜ್ಞಾನಗಳ ನಾಡು ಸ್ತಬ್ಧಚಿತ್ರವನ್ನು ರೂಪಿಸಲಾಗುತ್ತಿದೆ ಎಂದು ಹೇಳಿದರು. ಈ ಹಿಂದಿನ ವರ್ಷಗಳಲ್ಲಿ ನಿರ್ದಿಷ್ಟವಾಗಿ ಒಂದು ಜಾಗವನ್ನು ಪರಿಗಣಿಸಿ ಸ್ತಬ್ಧಚಿತ್ರಗಳನ್ನು ರೂಪಿಸಲಾಗಿತ್ತು. ಆದರೆ ಈ ಬಾರಿ ಸಮಗ್ರವಾಗಿ ಜಿಲ್ಲೆಯ ವಿಚಾರವನ್ನೇ ಪ್ರತಿನಿಧಿಸುವಂತೆ ಸ್ತಬ್ಧಚಿತ್ರವಿರಲಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.