ಸಾಂದರ್ಭಿಕ ಚಿತ್ರ
ಚಿಕ್ಕಬಳ್ಳಾಪುರ: ಜಿಲ್ಲೆಯ ಐದು ಪ್ರೌಢಶಾಲೆಗಳನ್ನು ಪಿಯು ಕಾಲೇಜುಗಳನ್ನಾಗಿ ಉನ್ನತೀಕರಿಸುವಂತೆ ಜಿಲ್ಲೆಯ ಶಿಕ್ಷಣ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ.
ಒಂದು ವೇಳೆ ಈ ಪ್ರೌಢಶಾಲೆಗಳು ಉನ್ನತೀಕರಣಗೊಂಡರೆ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಬಹಳಷ್ಟು ವಿದ್ಯಾರ್ಥಿಗಳು ಪ್ರೌಢಶಾಲೆ ತರುವಾಯ ಸೌಲಭ್ಯಗಳ ಕೊರತೆ ಕಾರಣ ವಿದ್ಯಾಭ್ಯಾಸ ಮೊಟಕುಗೊಳಿಸುವ ಸಾಧ್ಯತೆಯೂ ಇದೆ. ಹೆಣ್ಣು ಮಕ್ಕಳು ಎನ್ನುವ ಕಾರಣಕ್ಕೆ ಕೆಲವು ಪೋಷಕರು ಪ್ರೌಢಶಾಲೆ ಶಿಕ್ಷಣದ ನಂತರ ದೂರದ ಕಾಲೇಜುಗಳಿಗೆ ಕಳುಹಿಸಲು ಮನಸ್ಸು ಮಾಡುವುದಿಲ್ಲ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣ ಮೊಟಕುಗೊಳ್ಳುತ್ತದೆ. ಈ ಎಲ್ಲ ದೃಷ್ಟಿಯಿಂದ ಪ್ರೌಢಶಾಲೆಗಳ ಉನ್ನತೀಕರಣ ಮುಖ್ಯವಾಗಿದೆ.
ಬಾಗೇಪಲ್ಲಿ ತಾಲ್ಲೂಕಿನ ಮಿಟ್ಟೇಮರಿ ಸರ್ಕಾರಿ ಪ್ರೌಢಶಾಲೆ, ಗೂಳೂರು ಸರ್ಕಾರಿ ಪ್ರೌಢಶಾಲೆ, ಮಾರ್ಗಾನುಕುಂಟೆ ಸರ್ಕಾರಿ ಪ್ರೌಢಶಾಲೆ, ತಿಮ್ಮಂಪಲ್ಲಿ ಸರ್ಕಾರಿ ಪ್ರೌಢಶಾಲೆ ಮತ್ತು ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿಯ ಸರ್ಕಾರಿ ಪ್ರೌಢಶಾಲೆಯನ್ನು ಪದವಿ ಪೂರ್ವ ಕಾಲೇಜುಗಳಾಗಿ ಉನ್ನತೀಕರಿಸುವಂತೆ ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.
ಗೂಳೂರು ಹೊರತುಪಡಿಸಿ ಉಳಿದ ನಾಲ್ಕು ಪ್ರೌಢಶಾಲೆಗಳ 15 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳು ಸಹ ಇಲ್ಲ.
ಗೂಳೂರು ಬಾಗೇಪಲ್ಲಿ ತಾಲ್ಲೂಕು ಕೇಂದ್ರಕ್ಕೆ ಹತ್ತಿರವಿದೆ. ಆದ ಕಾರಣ ಗೂಳೂರು ಶಾಲೆ ವಿದ್ಯಾರ್ಥಿಗಳು ಬಾಗೇಪಲ್ಲಿಯ ನ್ಯಾಷನಲ್ ಪಿಯು ಕಾಲೇಜು, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಓದಬಹುದು. ಆದರೆ ಉಳಿದ ಕಡೆಗಳ ವಿದ್ಯಾರ್ಥಿಗಳು 15 ಕಿ.ಮೀ ದಾಟಿಯೇ ಕಾಲೇಜುಗಳ ಮೆಟ್ಟಿಲು ಹತ್ತಬೇಕಿದೆ.
ಅಲ್ಲದೆ, ಈ ಐದು ಪ್ರಸ್ತಾವಿತ ಕಾಲೇಜುಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳಿಗೆ ಕೊಠಡಿಗಳು ಇವೆಯೇ ಇಲ್ಲವೇ ಎನ್ನುವ ಮಾಹಿತಿಯನ್ನು ಸಹ ಸರ್ಕಾರಕ್ಕೆ ಕಳುಹಿಸಲಾಗಿದೆ. ಆ ಪ್ರಕಾರ ಬಾಗೇಪಲ್ಲಿ ತಾಲ್ಲೂಕಿನ ನಾಲ್ಕು ಶಾಲೆಗಳಲ್ಲಿಯೂ ಹೆಚ್ಚುವರಿ ಕೊಠಡಿಗಳು ಇಲ್ಲ. ಗುಡಿಬಂಡೆ ತಾಲ್ಲೂಕಿನ ತಿಮ್ಮಂಪಲ್ಲಿ ಶಾಲೆಯಲ್ಲಿ ಮಾತ್ರ ಒಂದು ಹೆಚ್ಚುವರಿ ಕೊಠಡಿ ಇದೆ.
ಸರ್ಕಾರಕ್ಕೆ ಪ್ರಶ್ನಿಸಿದ್ದ ಶಾಸಕ: ಬೆಳಗಾವಿ ಅಧಿವೇಶನದಲ್ಲಿ ಶಾಲಾ, ಕಾಲೇಜುಗಳ ಆರಂಭದ ವಿಚಾರವಾಗಿ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸರ್ಕಾರವನ್ನು ಪ್ರಶ್ನಿಸಿದ್ದರು.
2024–25ನೇ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಲು ರಾಜ್ಯದಲ್ಲಿ ಒಟ್ಟು 257 ಪ್ರಸ್ತಾವಗಳು ಸ್ವೀಕೃತವಾಗಿವೆ ಎಂದು ಶಾಸಕರ ಪ್ರಶ್ನೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದರು.
ಅಲ್ಲದೆ, ಬಾಗೇಪಲ್ಲಿ ತಾಲ್ಲೂಕಿನ ನಾಲ್ಕು ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳಾಗಿ ಉನ್ನತೀಕರಿಸುವ ಬಗ್ಗೆಯೂ ಶಾಸಕರು ಸಚಿವರ ಗಮನಕ್ಕೆ ತಂದಿದ್ದರು. ‘ಈ ಪ್ರಸ್ತಾವನೆ ಬಗ್ಗೆ ಕೆಲವು ಮಾಹಿತಿ, ದಾಖಲೆಗಳನ್ನು ಕೋರಲಾಗಿದೆ. ಮಾಹಿತಿ ಸ್ವೀಕೃತವಾದ ನಂತರ ನಿಯಮದ ಅನುಸಾರ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು’ ಎಂದು ಸಚಿವರು ಭರವಸೆ ನೀಡಿದ್ದಾರೆ.
ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವದಲ್ಲಿ ಯಾವ ಪ್ರೌಢಶಾಲೆಗಳಲ್ಲಿ ಎಷ್ಟು ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ಓದುತ್ತಿದ್ದಾರೆ ಎಂಬ ಮಾಹಿತಿಯನ್ನೂ ನೀಡಲಾಗಿದೆ. ಈ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ ನಂತರ ಅದೇ ಕಡೆಯಲ್ಲಿಯೇ ಪದವಿ ಪೂರ್ವ ಶಿಕ್ಷಣವನ್ನೂ ಪಡೆಯುವ ಅವಕಾಶಗಳು ಇರುತ್ತವೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಆ ಪ್ರಕಾರ ಮಿಟ್ಟೇಮರಿ ಪ್ರೌಢಶಾಲೆಯಲ್ಲಿ 80 ಗೂಳೂರು ಶಾಲೆಯಲ್ಲಿ 90 ಮಾರ್ಗಾನುಕುಂಟೆ ಶಾಲೆಯಲ್ಲಿ 66 ತಿಮ್ಮಂಪಲ್ಲಿ ಶಾಲೆಯಲ್ಲಿ 62 ಮತ್ತು ಸೋಮೇನಹಳ್ಳಿ ಶಾಲೆಯಲ್ಲಿ 55 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.