ADVERTISEMENT

ಚಿಮುಲ್ ಚುನಾವಣೆ: ಚುರುಕಾದ ರಾಜಕೀಯ ಬೆಳವಣಿಗೆ

ಹಲವು ಆಕಾಂಕ್ಷಿಗಳ ಹೆಸರು ಮುನ್ನೆಲೆಗೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 6:06 IST
Last Updated 8 ಜನವರಿ 2026, 6:06 IST
ಬಂಕ್ ಮುನಿಯಪ್ಪ
ಬಂಕ್ ಮುನಿಯಪ್ಪ   

ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಗೆ ಫೆ. 1ರಂದು ಚುನಾವಣೆ ನಡೆಯಲಿದೆ. ಇಬ್ಬರು ನಿರ್ದೇಶಕರನ್ನು ಆಯ್ಕೆ ಮಾಡಿ ಕಳುಹಿಸುವ ಅವಕಾಶವು ಮೊದಲ ಬಾರಿಗೆ ಶಿಡ್ಲಘಟ್ಟ ಕ್ಷೇತ್ರಕ್ಕೆ ದೊರೆತಿದೆ.

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದಿಂದ ಬೇರ್ಪಟ್ಟು ಚಿಮುಲ್ ಅಸ್ತಿತ್ವಕ್ಕೆ ಬಂದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಜಂಗಮಕೋಟೆ ಕ್ಷೇತ್ರ ಮತ್ತು ಶಿಡ್ಲಘಟ್ಟ ಕ್ಷೇತ್ರದಿಂದ ತಲಾ ಒಬ್ಬರಂತೆ ಇಬ್ಬರು ನಿರ್ದೇಶಕರನ್ನು ಆಯ್ಕೆ ಮಾಡಿ ಕಳುಹಿಸಬೇಕಿದ್ದು ಈಗಾಗಲೆ ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭವಾಗಿದೆ.

ಈ ಹಿಂದೆ ಶಿಡ್ಲಘಟ್ಟ ಕ್ಷೇತ್ರ ವ್ಯಾಪ್ತಿಯ ಮಹಿಳಾ ಡೇರಿಗಳನ್ನು ಹೊರತುಪಡಿಸಿ ಮಿಕ್ಕಂತೆ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳು ಕೂಡ ಶಿಡ್ಲಘಟ್ಟ ಒಂದೇ ಕ್ಷೇತ್ರಕ್ಕೆ ಸೇರಿದ್ದವು. ಆದರೆ ಕ್ಷೇತ್ರದ ಪುನರ್ ವಿಂಗಡಣೆಯಿಂದಾಗಿ ಶಿಡ್ಲಘಟ್ಟದ ಹಲವು ಹಾಲು ಉತ್ಪಾದಕರ ಸಹಕಾರ ಸಂಘಗಳು ಬೇರೆ ತಾಲ್ಲೂಕುಗಳಿಗೆ ಸೇರ್ಪಡೆಗೊಂಡಿವೆ. ಇದರಿಂದಾಗಿ ಚಿಮುಲ್ ನಿರ್ದೇಶಕರಾಗುವ ಕನಸು ಕಂಡಿದ್ದ ಹಲವು ಆಕಾಂಕ್ಷಿಗಳ ಆಸೆಗೆ ತಣ್ಣೀರು ಹಾಕಿದಂತಾಗಿದೆ.

ADVERTISEMENT

ಉಳಿದಂತೆ ಸ್ಪರ್ಧಿಸುವ ಆಕಾಂಕ್ಷಿ ಅಭ್ಯರ್ಥಿಗಳು ತೆರೆ ಮರೆಯಲ್ಲಿ ಡೇರಿಗಳ ಡೆಲಿಗೇಟ್ಸ್‌ಗಳನ್ನು, ಪ್ರಮುಖರನ್ನು ಭೇಟಿ ಮಾಡಿ ಸೌಹಾರ್ದ ಮಾತುಕತೆ ನಡೆಸಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದಾರೆ.

ಸೇರ್ಪಡೆ: ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ, ಸಾದಲಿ ಹಾಗೂ ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 20 ಹಾಲು ಉತ್ಪಾದಕರ ಸಹಕಾರ ಸಂಘಗಳು ಗುಡಿಬಂಡೆ ಕ್ಷೇತ್ರಕ್ಕೆ ಸೇರ್ಪಡೆಯಾಗಿವೆ.

ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ಹಾಗೂ ಈ.ತಿಮ್ಮಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ 13 ಹಾಲು ಉತ್ಪಾದಕರ ಸಹಕಾರ ಸಂಘಗಳು ಬಾಗೇಪಲ್ಲಿ ಕ್ಷೇತ್ರಕ್ಕೆ ಸೇರ್ಪಡೆಯಾಗಿದ್ದು ಈ ವ್ಯಾಪ್ತಿಯ ಆಕಾಂಕ್ಷಿಗಳ ಸ್ಪರ್ಧಿಸುವ ಆಸೆ ನಿರಾಸೆಯಾಗಿದೆ.

ಕಾಂಗ್ರೆಸ್‍ನಲ್ಲಿ ಕಾಣದ ಪೈಪೋಟಿ: ಕೋಚಿಮುಲ್‍ನ ಕಳೆದ ಅವಧಿಯ ನಿರ್ದೇಶಕರಾಗಿದ್ದ ಆರ್.ಶ್ರೀನಿವಾಸ್‍ ಅವರು ಈ ಬಾರಿಯೂ ಜಂಗಮಕೋಟೆ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಜತೆಗೆ ಕೋಚಿಮುಲ್‌ನ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಆರ್.ಶ್ರೀನಿವಾಸ್‍ ಅವರು ಸ್ಪರ್ಧಿಸದಿದ್ದರೆ ಕೆ.ಗುಡಿಯಪ್ಪ ಅವರನ್ನು ಕಣಕ್ಕಿಳಿಸುವ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ.

ಶಿಡ್ಲಘಟ್ಟ ಕ್ಷೇತ್ರಕ್ಕೆ ಚಿಕ್ಕತೇಕಹಳ್ಳಿ ಪ್ರದೀಪ್ ಕುಮಾರ್ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಬೆಳ್ಳೂಟಿಯ ಚೊಕ್ಕೆಗೌಡರ ಹೆಸರು ಸಹ ಚಾಲ್ತಿಯಲ್ಲಿದೆ.

ಜೆಡಿಎಸ್ ವಿಚಾರಕ್ಕೆ ಬಂದರೆ ಶಿಡ್ಲಘಟ್ಟ ಕ್ಷೇತ್ರದಿಂದ ಹಿರಿಯ ಸಹಕಾರಿ ಹಾಗೂ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಜಂಗಮಕೋಟೆ ಕ್ಷೇತ್ರದಿಂದ ಹಾಪ್‌ಕಾಮ್ಸ್ ಮಾಜಿ ಅಧ್ಯಕ್ಷ ಹುಜಗೂರು ರಾಮಯ್ಯ ಹೆಸರು ಮುಂಚೂಣಿಯಲ್ಲಿದೆ.

ಜತೆಗೆ ಪೂಲಕುಂಟಹಳ್ಳಿ ರಘುನಾಥರೆಡ್ಡಿ ಕೂಡ ಕಳೆದ ಬಾರಿಯೆ ಸ್ಪರ್ಧಿಸಲು ಪ‍್ರಯತ್ನಿಸಿದ್ದು ಪಕ್ಷದ ತೀರ್ಮಾನದಂತೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಈ ಬಾರಿ ಅವರು ಶಿಡ್ಲಘಟ್ಟ ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸ್ಪರ್ಧೆಗೆ ಶಾಸಕರು ಅವಕಾಶ ಮಾಡಿಕೊಡಲಿದ್ದಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ. ನಾಗಮಂಗಲ ಶ್ರೀನಿವಾಸಗೌಡರು ಕೂಡ ಆಕಾಂಕ್ಷಿಗಳಾಗಿದ್ದಾರೆ.

ಜೆಡಿಎಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ, ಉತ್ಸಾಹ ಹೆಚ್ಚಿದ್ದರು ಕೂಡ ಶಿಡ್ಲಘಟ್ಟ ಮತ್ತು ಜಂಗಮಕೋಟೆ ಕ್ಷೇತ್ರಗಳಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಅವರು ಸೂಚಿಸಿದವರಷ್ಟೆ ಅಂತಿಮ ಅಭ್ಯರ್ಥಿಗಳಾಗಲಿದ್ದಾರೆ. ಅವರಷ್ಟೆ ಸ್ಪರ್ಧೆಗೆ ಸಿದ್ಧವಾಗಬೇಕಾದ ಸ್ಥಿತಿ ಜೆಡಿಎಸ್‌ನಲ್ಲಿದೆ.

ನಡೆಯದ ಸಭೆ 

ಚಿಮುಲ್ ಚುನಾವಣೆಗೆ ಇನ್ನೊಂದು ತಿಂಗಳಷ್ಟೆ ಸಮಯವಿದ್ದು ಅಭ್ಯರ್ಥಿಗಳಾಗುವ ಆಕಾಂಕ್ಷಿಗಳು ತೆರೆಮರೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಸಿದ್ಧತೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆಯಾದರೂ ಎಲ್ಲೂ ಕೂಡ ಬಹಿರಂಗವಾಗಿ ಪ್ರಚಾರಕ್ಕೆ ಇಳಿದಿಲ್ಲ. ಅಧಿಕೃತವಾಗಿ ಹೇಳಿಕೊಂಡಿದ್ದೂ ಕಂಡು ಬರುತ್ತಿಲ್ಲ. ಜೆಡಿಎಸ್‌ನಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಹೇಳಿದ ಅಭ್ಯರ್ಥಿಗಳೆ ಅಂತಿಮಗೊಳ್ಳುವ ಕಾರಣ ಅಲ್ಲಿ ಸಭೆ ನಡೆಸುವ ಅಗತ್ಯವಿಲ್ಲ. ನಾಮಪತ್ರ ಸಲ್ಲಿಕೆ ಹತ್ತಿರ ಬಂದಾಗ ಸಭೆ ನಡೆಸಿ ಅಂತಿಮ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆಗಳಿವೆ. ಆದರೆ ಕಾಂಗ್ರೆಸ್‍ನಲ್ಲಿ ಗುಂಪುಗಾರಿಕೆಯಿಂದ ಇನ್ನು ಕೂಡ ತಾಲ್ಲೂಕು ಮಟ್ಟದಲ್ಲಿ ಕಾಂಗ್ರೆಸ್ಸಿಗರ ಸಭೆ ನಡೆದಿಲ್ಲ. ರಾಜೀವ್‍ ಗೌಡ ಮತ್ತು ಪುಟ್ಟು ಆಂಜಿನಪ್ಪ ಅವರ ಬೆಂಬಲ ಯಾರಿಗೆ ಇದೆಯೋ ಎನ್ನುವ ಕಾತುರ ಒಂದು ಕಡೆಯಾದರೆ ಮಾಜಿ ಸಚಿವ ವಿ.ಮುನಿಯಪ್ಪ ಅವರ ಪುತ್ರ ಶಶಿಧರ್ ಮುನಿಯಪ್ಪ ಅವರು ವಿದೇಶ ಪ್ರವಾಸದಲ್ಲಿದ್ದು ಅವರು ವಾಪಸ್ಸಾದ ನಂತರ ಸಭೆ ನಡೆಸಿ ನಿರ್ಧರಿಸಲು ಒಂದು ಬಣ ಕಾದಿದೆ. ಜತೆಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಡಾ.ಎಂ.ಸಿ.ಸುಧಾಕರ್ ಅವರು ಕೂಡ ಚಿಮುಲ್ ಅಭ್ಯರ್ಥಿಗಳ ಅಂತಿಮ ಆಯ್ಕೆಗಾಗಿ ಸಭೆ ನಡೆಸದ ಕಾರಣ ಅಭ್ಯರ್ಥಿಗಳ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಸಭೆ ನಡೆದ ಮೇಲಷ್ಟೆ ಸ್ಪಷ್ಟ ಚಿತ್ರಣ ಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.