ADVERTISEMENT

ದಾಖಲೆ ನಿರ್ಮಿಸಿದ ರಕ್ತದಾನ ಶಿಬಿರ; 12 ಗಂಟೆಯಲ್ಲಿ 3,246 ಯೂನಿಟ್ ರಕ್ತ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 6:39 IST
Last Updated 23 ಫೆಬ್ರುವರಿ 2025, 6:39 IST
ಚಿಂತಾಮಣಿಯಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದ ಸಮಾರೋಪದಲ್ಲಿ ಇಂಡಿಯನ್‌ ಬುಕ್‌ ಆಪ್‌ ರೆಕಾರ್ಡ್‌ ಸಂಸ್ಥೆಯಿಂದ ಪ್ರಮಾಣ ಪತ್ರ ಸ್ವೀಕರಿಸಿದ ಮಾಜಿ ಸಚಿವ ಚೌಡರೆಡ್ಡಿ
ಚಿಂತಾಮಣಿಯಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದ ಸಮಾರೋಪದಲ್ಲಿ ಇಂಡಿಯನ್‌ ಬುಕ್‌ ಆಪ್‌ ರೆಕಾರ್ಡ್‌ ಸಂಸ್ಥೆಯಿಂದ ಪ್ರಮಾಣ ಪತ್ರ ಸ್ವೀಕರಿಸಿದ ಮಾಜಿ ಸಚಿವ ಚೌಡರೆಡ್ಡಿ   

ಚಿಂತಾಮಣಿ: ‌ಮಾಜಿ ಗೃಹ ಸಚಿವ ಎ.ಚೌಡರೆಡ್ಡಿ ಜನ್ಮ ದಿನಾಚರಣೆಯ ಅಂಗವಾಗಿ ನಡೆದ ಬೃಹತ್ ರಕ್ತದಾನ ಶಿಬಿರದ 12 ಗಂಟೆ ಅವಧಿಯಲ್ಲಿ 3,246 ಯೂನಿಟ್ ರಕ್ತ ಸಂಗ್ರಹ ಆಗುವ ಮೂಲಕ ದೇಶದಲ್ಲೇ ಹೆಚ್ಚು ರಕ್ತ ಸಂಗ್ರಹವಾದ ಶಿಬಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇಂಡಿಯನ್ ಬುಕ್ ಆಪ್ ರೆಕಾರ್ಡ್‌ಗೆ ಸೇರ್ಪಡೆಯಾಗಿದೆ.

ನಗರದ ಕಿಶೋರ ವಿದ್ಯಾಭವನದ ಆವರಣದಲ್ಲಿ ಮಾಜಿ ಗೃಹ ಸಚಿವ ಎ.ಚೌಡರೆಡ್ಡಿ ಜನ್ಮ ದಿನದ ಅಂಗವಾಗಿ ನಡೆದ ಶಿಬಿರದಲ್ಲಿ ನಾಲ್ಕು ಸಾವಿರ ಜನ ರಕ್ತದಾನ ಮಾಡಿದರು. ರೆಡ್ ಕ್ರಾಸ್ ಸಂಸ್ಥೆ, ಲಯನ್ಸ್ ಮತ್ತಿತರ 10 ಸಂಸ್ಥೆಗಳ ಸಿಬ್ಬಂದಿ ರಕ್ತ ಸಂಗ್ರಹಿಸುವ ಕೆಲಸ ನಿರ್ವಹಿಸಿದರು.

ಶುಕ್ರವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ಚೌಡರೆಡ್ಡಿ ಅವರ ಸೇವೆ ಹಾಗೂ ಹಿರಿತನ ಮತ್ತು ಅವರ ಗುಣಕ್ಕೆ ಗೌರವ ನೀಡಲು ನಡೆದ ರಕ್ತದಾನ ಶಿಬಿರ ದೇಶದಲ್ಲೇ ಹೆಚ್ಚು ರಕ್ತ ಸಂಗ್ರಹವಾದ ದಾಖಲೆ ಸೃಷ್ಠಿ ಆಗಿರುವುದು ಹೆಮ್ಮೆಯ ವಿಷಯ ಎಂದರು.

ADVERTISEMENT

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಜಿಲ್ಲೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಸಮಾರಂಭದಲ್ಲಿ ಭಾಗವಹಿಸಿದ್ದಾಗ ಜಿಲ್ಲೆಯಲ್ಲಿ ಪ್ರತಿ ತಿಂಗಳು ಒಂದು ಸಾವಿರ ಯೂನಿಟ್ ರಕ್ತದ ಬೇಡಿಕೆ ಇದೆ. ಆದರೆ ಕೇವಲ 700 ಯೂನಿಟ್ ಸಂಗ್ರಹವಾಗುತ್ತಿದೆ ಎಂಬ ಮಹಿತಿ ದೊರೆಯಿತು. ಅಂದು ಬೃಹತ್ ರಕ್ತದಾನ ಶಿಬಿರದ ಚಿಂತನೆ ಚಿಗುರೊಡೆಯಿತು. ಸಹೋದರ ಡಾ.ಬಾಲಾಜಿ ಜತೆ ಹಂಚಿಕೊಂಡಾಗ ತಂದೆ ಚೌಡರೆಡ್ಡಿಯ 88ನೇ ಜನ್ಮ ದಿನದಂದು ಆಯೋಜಿಸಲು ತೀರ್ಮಾನಿಸಲಾಯಿತು ಎಂದು ತಿಳಿಸಿದರು.

ಕ್ಷೇತ್ರಾದ್ಯಂತ ಸುಮಾರು ಏಳು ಸಾವಿರ ಜನರು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ನೋಂದಣಿ ಮಾಡಿಕೊಂಡಿದ್ದರು. ನೋಂದಣಿ ಮಾಡದವರು ಆಗಮಿಸಿ ರಕ್ತದಾನ ಮಾಡಿದ್ದಾರೆ. ನೋಂದಣಿಯಾವರಲ್ಲಿ ಶೇ 35-40 ವಿವಿಧ ಕಾರಣಗಳಿಂದ ಅನರ್ಹತೆಯಿಂದ ರಕ್ತದಾನ ಮಾಡಲು ಸಾಧ್ಯವಾಗಿಲ್ಲ ಎಂದರು.

ಮಾಜಿ ಗೃಹ ಸಚಿವ ಎ.ಚೌಡರೆಡ್ಡಿ,  ಶಾಂತಮ್ಮ ಚೌಡರೆಡ್ಡಿ, ಡಾ.ಬಾಲಾಜಿ, ಇಂಡಿಯನ್ ಬುಕ್ ಆಪ್ ರೆಕಾರ್ಡ್ ಅಧಿಕಾರಿ ಹರೀಶ್, ಚಿಕ್ಕಬಳ್ಳಾಪುರದ ರೆಡ್‌ಕ್ರಾಸ್‌ ಸಂಸ್ಥೆ ಮುಖ್ಯಸ್ಥರಾದ ಜಯರಾಂ, ಕೋಡಿರಂಗಪ್ಪ, ತಾಲ್ಲೂಕು ಕಾರ್ಯದರ್ಶಿ ನಾರಾಯಣರೆಡ್ಡಿ ಭಾಗವಹಿಸಿದ್ದರು.

ಮಾಜಿ ಗೃಹ ಸಚಿವ ಎ.ಚೌಡರೆಡ್ಡಿ ಜನ್ಮ ದಿನದ ಅಂಗವಾಗಿ ನಡೆದ ರಕ್ತದಾನ ಶಿಬಿರ 10 ಸಂಸ್ಥೆಗಳಿಂದ ರಕ್ತ ಸಂಗ್ರಹ ಇಂಡಿಯನ್‌ ಬುಕ್‌ ಆಪ್‌ ರೆಕಾರ್ಡ್‌ಗೆ ಸೇರ್ಪಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.