ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥ ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಪ್ರಸಿದ್ಧವಾದುದು. ರಾಜ್ಯದ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತುಗಳಲ್ಲಿ ವಿದುರಾಶ್ವತ್ಥದ ಧ್ವಜ ಸತ್ಯಾಗ್ರಹ ಮಹತ್ವದ್ದಾಗಿದೆ.
ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿಯೂ ಈ ಹೋರಾಟ ಗುರುತಾಗಿದೆ. 1938ರ ಏಪ್ರಿಲ್ 24ರಂದು ವಿದುರಾಶ್ವತ್ಥದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರರ ಹತ್ಯೆಯ ಕುರಿತುಗಾಂಧೀಜಿ ಅವರ ನೇತೃತ್ವದ ‘ಹರಿಜನ’ ಪತ್ರಿಕೆಯಲ್ಲಿಯೂ ವರದಿ ಪ್ರಕಟವಾಗಿತ್ತು.
ಇಂತಿಪ್ಪ ನೆಲದಲ್ಲಿ ಈಗ ಸ್ವಾತಂತ್ರ್ಯ ಸ್ಮರಣೆಯು ಗರಿಗೆದರಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಭಾಗಗಳ ರಾಷ್ಟ್ರಭಕ್ತ ಯುವ ಸಮುದಾಯ, ದೇಶಾಭಿಮಾನಿಗಳು, ಸರ್ವೋದಯ ಕಾರ್ಯಕರ್ತರು, ರಂಗಕರ್ಮಿಗಳು ಹೀಗೆ ನಾನಾ ವಲಯದ ಜನರು ವಿದುರಾಶ್ವತ್ಥದತ್ತ ಹೆಜ್ಜೆ ಹಾಕುತ್ತಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಕಾರಣ ವಿದುರಾಶ್ವತ್ಥಕ್ಕೆ ನಿತ್ಯವೂ ವಿವಿಧ ವರ್ಗಗಳ ಜನರು ಭೇಟಿ ನೀಡುತ್ತಿದ್ದಾರೆ.ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ವಿದುರಾಶ್ವತ್ಥದ ರ‍್ಯಾಲಿಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.ಜಿಲ್ಲಾಡಳಿತ ಸಹ ವಿದುರಾಶ್ವತ್ಥವನ್ನು ಪ್ರಮುಖವಾಗಿ ಕೇಂದ್ರೀಕರಿಸಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ. ತಿರಂಗ ಯಾತ್ರೆಗೆ ಜಿಲ್ಲಾಡಳಿತವು ಇಲ್ಲಿಂದಲೇ ಚಾಲನೆ ನೀಡಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ವಿದುರಾಶ್ವತ್ಥದಲ್ಲಿ ನಡೆದ ಹೋರಾಟಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ.
ಆ.12ರಂದು ದೊಡ್ಡಬಳ್ಳಾಪುರದಿಂದ ಸರ್ವೋದಯ ಕಾರ್ಯಕರ್ತರು ವಿದುರಾಶ್ವತ್ಥಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಆ.14ರಂದು ಯಾತ್ರೆಯು ವಿದುರಾಶ್ವತ್ಥ ತಲುಪಲಿದೆ. ರೋವರ್ಸ್, ಎನ್‍ಎಸ್‍ಎಸ್ ವಿದ್ಯಾರ್ಥಿಗಳು, ಸರ್ವೋದಯ ಚಿಂತಕರು ಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿನಿಂದಲೂ ವಿದುರಾಶ್ವತ್ಥಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ. ಆರ್‌ಎಸ್‌ಎಸ್, ಬಜರಂಗದಳ, ವಿಶ್ವ ಹಿಂದೂ ಪರಿಷತ್, ಬಿಜೆಪಿ ಕಾರ್ಯಕರ್ತರು ಕಳೆದ ತಿಂಗಳು ರ‍್ಯಾಲಿಗಳಲ್ಲಿ ಇಲ್ಲಿ ನಡೆಸಿದ್ದರು. ಆ.9ರಂದು ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಹಾಗೂ ಸಂಗಡಿಗಳುಬೆಂಗಳೂರಿನ ರಾಜಾಜಿ ನಗರದಿಂದ ಸೈಕಲ್ ಮೂಲಕ ವಿದುರಾಶ್ವತ್ಥಕ್ಕೆ ಭೇಟಿ ನೀಡಿದ್ದರು. ಸುಮಾರು 75 ಕಿ.ಮೀ ಸೈಕಲ್ ಯಾತ್ರೆ ಇದು.
ವಿದುರಾಶ್ವತ್ಥದ ವೀರಸೌಧ, ಚಿತ್ರಪಟ ಗ್ಯಾಲರಿಗೆ ಈಗ ಹೆಚ್ಚು ಜನರು ಭೇಟಿ ನೀಡುತ್ತಿದ್ದಾರೆ. ಇಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಓದಿ ತಿಳಿಯುತ್ತಿದ್ದಾರೆ.
ಅಳಿಯದ ದುರ್ಘಟನೆ;ವಿದುರಾಶ್ವತ್ಥದಲ್ಲಿ 1938ರ ಏ. 24ರಂದು ಬ್ರಿಟಿಷರು ನಡೆಸಿದ ಹತ್ಯಾಕಾಂಡದ ಕಾರಣ ಈ ಸ್ಥಳ ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಪ್ರಸಿದ್ಧವಾಗಿದೆ. ಈ ಘಟನೆ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿಯೂ ಅಚ್ಚಳಿಯದೆ ಉಳಿದಿದೆ.
ಅಂದು ಕೋಲಾರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ವಿದುರಾಶ್ವತ್ಥದಲ್ಲಿ ಏರ್ಪಾಟಾಗಿತ್ತು. ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರಧ್ವಜಗಳೊಡನೆ ಗೌರಿಬಿದನೂರು ನಗರದಿಂದ ವಿದುರಾಶ್ವತ್ಥಕ್ಕೆ ಮೆರವಣಿಗೆ ಮೂಲಕ ಬಂದಿದ್ದರು. ವಿದುರನಾರಾಯಣಸ್ವಾಮಿ ದೇವಾಲಯದ ಹಿಂಬದಿಯಲ್ಲಿದ್ದ ವಿಶಾಲವಾದ ಮರಗಳ ತೋಪಿನಲ್ಲಿ ಸಭೆ ನಡೆಯುತ್ತಿತ್ತು. ಈ ವೇಳೆ ಬ್ರಿಟಿಷ್ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಹಲವರು ಮೃತಪಟ್ಟರು. ದಾಖಲೆಗಳ ಪ್ರಕಾರ ಬ್ರಿಟಿಷರ ಗುಂಡಿಗೆ 8 ಮಂದಿ ಬಲಿಯಾದರು. ಆದರೆ 30ಕ್ಕೂ ಹೆಚ್ಚು ಜನರು ಬ್ರಿಟಿಷರ ಗುಂಡಿಗೆ ಬಲಿಯಾದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.