ADVERTISEMENT

ಚಿಕ್ಕಬಳ್ಳಾಪುರ: ಖರೀದಿ ಕೇಂದ್ರಕ್ಕೆ ರೈತರ ಅಲೆದಾಟ

ರಾಗಿ ಖರೀದಿಗೆ 4,241 ಅನ್ನದಾತರಷ್ಟೇ ನೋಂದಣಿ

ಡಿ.ಎಂ.ಕುರ್ಕೆ ಪ್ರಶಾಂತ
Published 26 ಜನವರಿ 2022, 3:23 IST
Last Updated 26 ಜನವರಿ 2022, 3:23 IST
ರಾಗಿ (ಸಾಂದರ್ಭಿಕ ಚಿತ್ರ)
ರಾಗಿ (ಸಾಂದರ್ಭಿಕ ಚಿತ್ರ)   

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ರಾಗಿ ಬೆಳೆಯುವ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರ ಸಹ ಪ್ರಮುಖವಾಗಿದೆ. ಜಿಲ್ಲೆಯ ಆರೂ ತಾಲ್ಲೂಕುಗಳಲ್ಲಿ ರಾಗಿಯನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ.

ಪ್ರಸಕ್ತ ವರ್ಷ ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ 2.10 ಲಕ್ಷ ಟನ್ ರಾಗಿಯನ್ನು ಖರೀದಿಸುವ ಗುರಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿತ್ತು. ಈ ಗುರಿ ತಲುಪಿದ್ದು ಖರೀದಿಗೆ ನೋಂದಣಿ ಪ್ರಕ್ರಿಯೆ ಸಹ ಸ್ಥಗಿತವಾಗಿದೆ. ಇದು ರಾಗಿ ಬೆಳೆದು ಬೆಂಬಲ ಬೆಲೆಗೆ ಮಾರಾಟ ಮಾಡಬೇಕು ಎನ್ನುವ ನಿರೀಕ್ಷೆ ಹೊತ್ತು ರೈತರನ್ನು ಕಂಗಾಲುಗೊಳಿಸಿದೆ. ನೋಂದಣಿಗಾಗಿ ಈಗ ರೈತರು ಖರೀದಿ ಕೇಂದ್ರಗಳತ್ತ ಎಡತಾಕುತ್ತಿದ್ದಾರೆ.

ನೋಂದಣಿ ಸ್ಥಗಿತವಾಗಿದೆ ಎಂದು ತಿಳಿದು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ. ಸರ್ಕಾರದ ನೀತಿಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ರಾಗಿ ಮಾರಾಟ ಮಾಡಬೇಕು ಎನ್ನುವ ರೈತರ ಸ್ಥಿತಿ ಅಯೋಮಯ ಎನ್ನುವಂತಾಗಿದೆ.

ADVERTISEMENT

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 4,241 ರೈತರು 62,132 ಕ್ವಿಂಟಲ್ ರಾಗಿ ಮಾರಾಟಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ.ಕಳೆದ ವರ್ಷ ಜಿಲ್ಲೆಯಲ್ಲಿ 7,404 ರೈತರು 1.41.303 ಕ್ವಿಂಟಲ್ ರಾಗಿ ಮಾರಾಟ ಮಾಡಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ರೈತರ ಸಂಖ್ಯೆ ಅರ್ಧಕ್ಕೆ ಇಳಿದಿದೆ. ರಾಗಿ ಖರೀದಿಯೂ ಸಾವಿರಾರು ಕ್ವಿಂಟಲ್ ಲೆಕ್ಕದಲ್ಲಿ ಕಡಿಮೆಯಾಗಿದೆ.

ಈ ಬಾರಿ ಒಬ್ಬ ರೈತರು ಗರಿಷ್ಠ 20 ಕ್ವಿಂಟಲ್ ರಾಗಿ ಮಾತ್ರ ಮಾರಾಟ ಮಾಡಬಹುದು ಎಂದು ಸರ್ಕಾರ ಮಿತಿ ಹೇರಿತು. ಸರ್ಕಾರದ ಈ ನಿರ್ಧಾರಕ್ಕೆ ರೈತರು ಅಸಮಾಧಾನ ಸಹ ವ್ಯಕ್ತಪಡಿಸಿದ್ದರು. ಕಳೆದ ವರ್ಷ ಸರ್ಕಾರ ನಿಗದಿತ ಗಡುವನ್ನು ವಿಸ್ತರಣೆ ಸಹ ಮಾಡಿತ್ತು. ಈ ಬಾರಿಯೂ ನೋಂದಣಿ ಪ್ರಕ್ರಿಯೆಗೆ ಕಾಲಾವಕಾಶ ವಿಸ್ತರಣೆ ಆಗುತ್ತದೆ ಎಂದು ರೈತರು ಬಗೆದರು. ಆದರೆ ಖರೀದಿಯ ನಿಗದಿತ ಗುರಿ ತಲುಪಿದ ಕಾರಣ ನೋಂದಣಿ ಪ್ರಕ್ರಿಯೆ ಸ್ಥಗಿತವಾಗಿದೆ.

ಕಳೆದ ವರ್ಷ ಬಾಗೇಪಲ್ಲಿ ತಾಲ್ಲೂಕಿನಲ್ಲಿ 1,358 ರೈತರು 28,258 ಕ್ವಿಂಟಲ್ ರಾಗಿ ಮಾರಾಟ ಮಾಡಿದ್ದರು. ಆದರೆ ಈ ಬಾರಿ ಕೇವಲ 10 ಮಂದಿ ನೋಂದಾಯಿಸಿಕೊಂಡಿದ್ದಾರೆ. ಮತ್ತೆ ಸರ್ಕಾರ ನೋಂದಣಿ ಆರಂಭಿಸಬೇಕು ಎಂದು ರೈತರು ಹಾಗೂ ರೈತ ಸಂಘದ ಮುಖಂಡರು ಆಗ್ರಹಿಸುತ್ತಿದ್ದಾರೆ.

ಶೇ 60ರಷ್ಟು ಬೆಳೆ ನಾಶ: ಪ್ರಸಕ್ತ ವರ್ಷಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸಹ ಸುರಿಯಿತು. ಈ ಅಬ್ಬರದ ಮಳೆಗೆ ಹೆಚ್ಚಿನ ಬೆಳೆ ಹಾನಿಯೂ ಸಂಭವಿಸಿತು. ರಾಗಿ ಕಟಾವಿನ ಹಂತದಲ್ಲಿ ಇದ್ದ ವೇಳೆ ಮಳೆ ಸುರಿದ ಕಾರಣ ಬೆಳೆ ನೆಲಕಚ್ಚಿತು. ಕೃಷಿ ಇಲಾಖೆಯ ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ ಶೇ 60ರಷ್ಟು ರಾಗಿ ಬೆಳೆ ನಾಶವಾಗಿದೆ. ಈ ಕಾರಣದಿಂದ ರೈತರು ರಾಗಿ ಮಾರಾಟಕ್ಕೆ ಮುಂದಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.