ADVERTISEMENT

ಶಿಡ್ಲಘಟ್ಟ: ಸಿಲಿಂಡರ್‌ ಬೆಲೆ ಏರಿಕೆ, ಸೌದೆ ಒಲೆಯತ್ತ ಮುಖ ಮಾಡಿದ ಮಹಿಳೆಯರು!

ಅಡುಗೆ ಅನಿಲ ಭರ್ತಿಗೆ ಮುಂದಾಗದ ಗ್ರಾಮೀಣರು

​ಪ್ರಜಾವಾಣಿ ವಾರ್ತೆ
Published 25 ಮೇ 2022, 4:57 IST
Last Updated 25 ಮೇ 2022, 4:57 IST
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿರುವ ಗೃಹಿಣಿ ಭಾಗ್ಯಮ್ಮ
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿರುವ ಗೃಹಿಣಿ ಭಾಗ್ಯಮ್ಮ   

ಶಿಡ್ಲಘಟ್ಟ: ಅಡುಗೆ ಅನಿಲದ ಬೆಲೆ ಹೆಚ್ಚಳವು ತಾಲ್ಲೂಕಿನ ಗ್ರಾಮೀಣ ಭಾಗದ ಅಡುಗೆ ಮನೆಯ ಮೇಲೆಯೂ ಬಿದ್ದಿದ್ದು, ಮನೆಗಳಲ್ಲಿ ಸೌದೆ ಒಲೆಯನ್ನು ಬಳಸಲು ಪ್ರಾರಂಭಿಸಿದ್ದಾರೆ.

ಹೊಗೆ ರಹಿತ ಅಡುಗೆ ಮನೆಯ ಕನಸು ಬಿತ್ತಿತ್ತು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಉಜ್ವಲಾ ಯೋಜನೆ. ಆದರೆ ಸಫಲತೆ ಸಾಧಿಸಬೇಕಾದ ಉಜ್ವಲಾ ಯೋಜನೆ ವಿಫಲತೆಯತ್ತ ಹೆಜ್ಜೆ ಹಾಕುತ್ತಿದೆ. ಬಡವರ ಮನೆಗಳಿಗೆ ಮೊದಲ ಬಾರಿಗೆ ಉಚಿತ ಗ್ಯಾಸ್‌ ಸಿಲಿಂಡರ್‌ ಪೂರೈಸುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಉಜ್ವಲಾ, ಅಡುಗೆ ಅನಿಲ ಬೆಲೆ ಏರಿಕೆಯಿಂದ ವಿಫಲತೆಯತ್ತ ಸಾಗಿದೆ. ಶಿಡ್ಲಘಟ್ಟ ತಾಲ್ಲೂಕಿನ ಸುತ್ತಲ ಹಳ್ಳಿಗಳ ಗೃಹಿಣಿಯರು ಮತ್ತು ಪುರುಷರು ಈಗ ಬೆಳಗಾಗುತ್ತಲೇ ಉರುವಲು ಸೌದೆಯ ಹೊರೆ ತರುವ ಕೆಲಸದಲ್ಲಿ ಮಗ್ನರಾಗಿದ್ದಾರೆ.

ಕೇಂದ್ರದ ಈ ಯೋಜನೆ ಬರುವ ಮೊದಲು ಪಡಿತರ ವ್ಯವಸ್ಥೆಯಲ್ಲಿ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸುತ್ತಿದ್ದ ಸೀಮೆಎಣ್ಣೆಯಿಂದ ಸ್ಟವ್‌ಗಳನ್ನು ಬಳಸಿ ಅಡುಗೆ ಮಾಡುತ್ತಿದ್ದ ಗೃಹಿಣಿಯರು, ಸರ್ಕಾರ ನೀಡಿದ ಉಚಿತ ಗ್ಯಾಸ್‌ ಸಿಲಿಂಡರ್‌ನ ಸದುಪಯೋಗ ಪಡೆದುಕೊಂಡಿದ್ದರು. ಈ ಯೋಜನೆ ಜಾರಿಯಾಗುತ್ತಲೇ ಇತ್ತಕಡೆ ಸರ್ಕಾರ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡುತ್ತಿದ್ದ ಸೀಮೆಎಣ್ಣೆ ಸರಬರಾಜನ್ನು ನಿಲ್ಲಿಸಿತು.

ADVERTISEMENT

ಅಡುಗೆ ಅನಿಲದ ಬೆಲೆ ಹೆಚ್ಚುತ್ತಲೇ ಸಾಗುತ್ತಿರುವುದರಿಂದ ಮಧ್ಯಮ ಮತ್ತು ಬಡ ವರ್ಗದ ಮಹಿಳೆಯರು ಪ್ರತಿನಿತ್ಯ ಅಡುಗೆ ತಯಾರಿಸಲು ಕಟ್ಟಿಗೆ, ಸಗಣಿಯ ಭರಣಿ (ಕುಳ್ಳು), ಮೆಕ್ಕೆಜೋಳದ ಬೆಂಡು, ಕಟ್ಟಿಗೆಗೆ ಮೊರೆ ಹೋಗಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಯೋಜನೆ ಆರಂಭದಲ್ಲಿ ₹500 ಇದ್ದ ಒಂದು ಅಡುಗೆ ಸಿಲಿಂಡರ್‌ ದರ, ಈಗ ಸಾವಿರದ ಗಡಿ ಮುಟ್ಟಿದೆ. ಗ್ಯಾಸ್‌ ವಿತರಕರೊಬ್ಬರ ಪ್ರಕಾರ ತಾಲೂಕಿನಲ್ಲಿ ಶೇ 30ರಷ್ಟು ಫಲಾನುಭವಿಗಳು ಖಾಲಿಯಾದ ನಂತರ ಮತ್ತೆ ಗ್ಯಾಸ್‌ ಸಿಲಿಂಡರ್ ಕೊಳ್ಳದಿರುವುದು ಕಂಡುಬಂದಿದೆ.

ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಗ್ಯಾಸ್ ಸಿಲಿಂಡರ್‌ಗಳ ಮೇಲೆ ₹200 ಸಬ್ಸಿಡಿಯನ್ನು ಘೋಷಿಸಿದೆ. ಆದರೂ, ಬೆಲೆ ಏರಿಕೆಯ ಬಿಸಿ ತಟ್ಟಿರುವ ಜನತೆ ಸೌದೆಯ ಒಲೆಯ ಕಡೆಗೆ ಮುಖ ಮಾಡಿರುವರು. ಗ್ರಾಮದ ಹೊರವಲಯಗಳಲ್ಲಿ ಬೆಳೆಯುವ ಒಣಗಿರುವ ಕಟ್ಟಿಗೆಗಳನ್ನು ಕಡಿದು ಮನೆಗೆ ಹೊತ್ತು ತರುವ ದೃಶ್ಯ ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ಪ್ರತಿದಿನ ಕಂಡುಬರುತ್ತಿದೆ.

‘ಏರಿದ ಗ್ಯಾಸ್ ಬೆಲೆ, ದಿನಸಿ ಬೆಲೆ ಕೂಡ ಜಾಸ್ತಿಯಾಗಿದೆ. ಎಣ್ಣೆ ಬೆಲೆ ಕೂಡ ಹೆಚ್ಚಾಗಿದೆ. ನಾವು ವ್ಯವಸಾಯ ಮಾಡುವವರು. ಈಗಿನ ಬೆಲೆಯಲ್ಲಿ ಹೇಗೆ ಸಂಸಾರ ಸಾಗಿಸುವುದು. ಅಡುಗೆಯ ಪದಾರ್ಥಗಳೆಲ್ಲದರ ಬೆಲೆ ಏರಿಕೆ ಆಗಿರುವುದರಿಂದ ಉಳಿತಾಯವಿರಲಿ, ಖರ್ಚಿಗೇ ಹಣ ಹೊಂದಿಸುವುದು ಕಷ್ಟಕರವಾಗಿದೆ. ಅದಕ್ಕಾಗಿ ಸೌದೆ ಒಲೆ ಬಳಸಲು ಪ್ರಾರಂಭಿಸಿದ್ದೇವೆ’ ಎನ್ನುತ್ತಾರೆ ಅಪ್ಪೇಗೌಡನಹಳ್ಳಿಯ ಭಾಗ್ಯಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.