
ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿಯ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಮಿನಿಮಲ್ ಇನ್ವೇಸಿವ್ ಟೋಟಲ್ ಎಂಡೋಸ್ಕೋಪಿಕ್ ಕಾರ್ಡಿಯಾಕ್ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡ ಭಾರತದ ಮೂರನೇ ಕೇಂದ್ರವಾಗಿದೆ. ಇತ್ತೀಚೆಗೆ 29 ವರ್ಷದ ಮಹಿಳಾ ರೋಗಿಗೆ ಸಂಪೂರ್ಣ ಎಂಡೋಸ್ಕೋಪಿಕ್ ಕಾರ್ಡಿಯಾಕ್ ಸರ್ಜರಿ ನಡೆಸಲಾಯಿತು.
ಆಸ್ಪತ್ರೆಯ ಹೃದ್ರೋಗ ವಿಭಾಗದ ನಿರ್ದೇಶಕ ಡಾ ಸಿ.ಎಸ್.ಹಿರೇಮಠ್ ನೇತೃತ್ವದಲ್ಲಿ ಸಂಸ್ಥೆಯ ವೈದ್ಯರ ತಂಡವು ಕೋಲ್ಕತ್ತದ ಮಣಿಪಾಲ ಆಸ್ಪತ್ರೆ ಮುಖ್ಯ ಎಂಡೋಸ್ಕೋಪಿಕ್ ಕಾರ್ಡಿಯಾಕ್ ಸರ್ಜನ್ ಡಾ. ಸಂದೀಪ್ ಸರ್ದಾರ್ ಮತ್ತವರ ತಂಡದ ಸಹಯೋಗದಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಿತು.
ಸುಧಾರಿತ ಉಪಕರಣಗಳೊಂದಿಗೆ ಶಸ್ತ್ರಚಿಕಿತ್ಸೆ ನಡೆಸಿದ ಪರಿಣಾಮ ರೋಗಿಗೆ 2 ಸೆ.ಮೀ ಗಿಂತ ಕಡಿಮೆ ಗಾತ್ರದ ಗಾಯದ ಗುರುತು ಆಗಿದೆ. ಅವರು ಕೇವಲ 72 ಗಂಟೆಗಳಲ್ಲಿ ಚೇತರಿಸಿಕೊಳ್ಳಲು ಮತ್ತು ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ಸಾಧ್ಯವಾಗಿದೆ. ಈ ವೈದ್ಯಕೀಯ ಬೆಳವಣಿಗೆಯು ರೋಗಿಗಳಿಗೆ ಸುರಕ್ಷಿತ ಹೃದಯ ಶಸ್ತ್ರಚಿಕಿತ್ಸೆ ಆಯ್ಕೆಗಳನ್ನು ನೀಡುತ್ತದೆ ಎಂದು ಸಂಸ್ಥೆಯು ತಿಳಿಸಿದೆ.
ಕನಿಷ್ಠ ಗಾಯದ ಗುರುತು ಮತ್ತು ತ್ವರಿತ ಚೇತರಿಕೆಗೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರ ತಂಡದ ಪರಿಣತಿಯನ್ನು ಎತ್ತಿ ತೋರಿಸುತ್ತದೆ.
ಸುಧಾರಿತ ಹೃದಯ ಆರೈಕೆಯು ಎಲ್ಲರಿಗೂ ಸಿಗಬೇಕು. ಕೇವಲ ಶ್ರೀಮಂತರಿಗೆ ಸೀಮಿತ ಆಗಬಾರದು ಎಂಬ ಉದ್ದೇಶ ಸಂಸ್ಥೆಯದ್ದಾಗಿದೆ ಎಂದು ಪ್ರಕಟಣೆಯು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.