ADVERTISEMENT

ಚಿತ್ರಪಟ ಗ್ಯಾಲರಿಗೆ ಹಾನಿಯಾದರೆ ಹೋರಾಟ: ಎಚ್.ಎಂ.ವೆಂಕಟೇಶ್

ವಿದುರಾಶ್ವತ್ಥಕ್ಕೆ ಎಚ್‌.ಎಸ್‌.ದೊರೆಸ್ವಾಮಿ ವೇದಿಕೆಯ ಸದಸ್ಯರ ಭೇಟಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 4:26 IST
Last Updated 25 ಜೂನ್ 2022, 4:26 IST
ವಿದುರಾಶ್ವತ್ಥದ ವೀರಸೌಧಕ್ಕೆ ‌ಭೇಟಿ ನೀಡಿದ್ದ ಎಚ್.ಎಸ್.ದೊರೆಸ್ವಾಮಿ ವೇದಿಕೆಯ ‌ಸದಸ್ಯರು
ವಿದುರಾಶ್ವತ್ಥದ ವೀರಸೌಧಕ್ಕೆ ‌ಭೇಟಿ ನೀಡಿದ್ದ ಎಚ್.ಎಸ್.ದೊರೆಸ್ವಾಮಿ ವೇದಿಕೆಯ ‌ಸದಸ್ಯರು   

ಗೌರಿಬಿದನೂರು: ತಾಲ್ಲೂಕಿನ ‌ಐತಿಹಾಸಿಕ ವಿದುರಾಶ್ವತ್ಥಕ್ಕೆ ಶುಕ್ರವಾರ ಸ್ವಾತಂತ್ರ್ಯ ಸೇನಾನಿ ಎಚ್‌.ಎಸ್‌.ದೊರೆಸ್ವಾಮಿ ವೇದಿಕೆಯ ಸದಸ್ಯರು‘ಬಜರಂಗಿಗಳಿಗೆ ಪ್ರತಿರೋಧ ಮತ್ತು ವಿದುರಾಶ್ವತ್ಥದ ಸ್ವಾತಂತ್ರ್ಯ ಸ್ಮಾರಕ ಅಭಿವೃದ್ಧಿ ಸಮಿತಿಗೆ ನೈತಿಕ ಬೆಂಬಲ’ ಎನ್ನುವ ಧ್ಯೇಯದೊಂದಿಗೆ ಭೇಟಿ ನೀಡಿದ್ದರು.

ಸ್ವಾತಂತ್ರ್ಯ ಸಂಗ್ರಾಮದ ಸ್ಮರಣೀಯ ಸ್ಥಳವನ್ನು ರಕ್ಷಣೆ ಮಾಡುವುದೇ ನಮ್ಮೆಲ್ಲರ ಕರ್ತವ್ಯ ಎಂದು ಸಾರಿ ಹೇಳಿದರು.

ವಿದುರಾಶ್ವತ್ಥ ಕರ್ನಾಟಕದ ಜಲಿಯನ್ ವಾಲಾಬಾಗ್ ಎನಿಸಿದೆ. ಇಲ್ಲಿನ ಚಿತ್ರಪಟ ಗ್ಯಾಲರಿಗೆ ಆರ್.ಎಸ್.ಎಸ್, ಬಿಜೆಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಪದೇ ಪದೇ ಭೇಟಿ ನೀಡಿ ಕೆಲವು ಚಿತ್ರಗಳನ್ನು ಬದಲಿಸುವಂತೆ ಆಗ್ರಹಿಸಿದ್ದರು.ಸಮಿತಿಯ ಸದಸ್ಯರು ವೀರಸೌಧಕ್ಕೆ ರಕ್ಷಣೆ ನೀಡಿ ಎಂದು ಪೊಲೀಸರಿಗೆ ಮನವಿ ಸಹ ಮಾಡಿದ್ದರು. ಇದರ ಸಲುವಾಗಿ ಎಚ್.ಎಚ್.ದೊರೆಸ್ವಾಮಿ ವೇದಿಕೆಯ ಸದಸ್ಯರು ಶುಕ್ರವಾರ ಭೇಟಿ ನೀಡಿ ನೈತಿಕ ಬೆಂಬಲ ನೀಡಿದ್ದಾರೆ.

ADVERTISEMENT

ಈ ವೇಳೆ ವೇದಿಕೆಯ ಸದಸ್ಯರಾದ ಎಚ್.ಎಂ.ವೆಂಕಟೇಶ್ ‌ಮಾತನಾಡಿ, ಚಿತ್ರಪಟ ಗ್ಯಾಲರಿಯನ್ನು ಧ್ವಂಸ ಮಾಡಲು ‌ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಚಿಂತಿಸಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇತಿಹಾಸದ ಬಗ್ಗೆ ಅರಿತು ಈ ಗ್ಯಾಲರಿಯನ್ನು ನಿರ್ಮಾಣ ಮಾಡಿದ್ದಾರೆ. ಇದು ಇಂದಿನ ಮಕ್ಕಳ ಭವಿಷ್ಯಕ್ಕೆ ‌ಪೂರಕವಾದ ವಿಷಯಗಳನ್ನು ನೀಡುತ್ತದೆ
ಎಂದರು.

ಕೆಲವು ಕಪಟ ದೇಶಭಕ್ತರು ಇಲ್ಲಿನ ಭಾವಚಿತ್ರಗಳನ್ನು ತೆರವುಗೊಳಿಸುವಂತೆ ಬೆದರಿಕೆ ಹಾಕಿರುವುದು ಸರಿಯಲ್ಲ. ಸಮಾಜಘಾತುಕ ಶಕ್ತಿಗಳು ಇದರ ಧ್ವಂಸಕ್ಕೆ ಹುನ್ನಾರ ಮಾಡಿದಲ್ಲಿ ನಾವೆಲ್ಲರೂ ದೊಡ್ಡಮಟ್ಟದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಹೇಳಿದರು.

ಸಿಪಿಎಂ ಮುಖಂಡ ಡಾ.ಅನಿಲ್ ಕುಮರ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಮೂಲ ವಿಚಾರಗಳನ್ನು ಅರಿತುಕೊಳ್ಳಲು ಇಲ್ಲಿನ ಚಿತ್ರಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಈ ಸ್ಮಾರಕ ಮತ್ತು ಚಿತ್ರಗಳನ್ನು ವಿರೋಧಿಸುವವರು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧವಾಗಿ ಸಾಗುತ್ತಿದ್ದಾರೆ ಎಂದರು.

ವೇದಿಕೆಯ ಸದಸ್ಯರಾದ ಎನ್‌.ಪ್ರಭಾ ಬೆಳವಂಗಲ ಮತ್ತು ಝಾನ್ಸಿ ರಾಣಿ ಲಕ್ಷ್ಮಿ ಮಾತನಾಡಿದರು.

ವೇದಿಕೆಯ ಸದಸ್ಯರಾದ ಎ.ಬಿ.ಶಿವರಾಜ್, ಸಿದ್ದನಗೌಡ ಪಾಟೀಲ್, ಸಿ.ಕೆ.ಗುಂಡಣ್ಣ, ಸಿರಿಮನೆ ನಾಗರಾಜ್, ಜೋಹಾರ್, ಈ.ಬಸವರಾಜ್, ಲಕ್ಷ್ಮಣ್, ರೂಪಾ ಮೋಹನ್, ಮುನಿವೆಂಕಟಪ್ಪ, ರಘುನಾಥರೆಡ್ಡಿ, ರುದ್ರರಾಧ್ಯ‌ ಹಾಗೂ ಸ್ವಾತಂತ್ರ್ಯ ಸ್ಮಾರಕ ಅಭಿವೃದ್ಧಿ ಸಮಿತಿಯ ‌ಸದಸ್ಯರಾದ ಪ್ರೊ.ಬಿ.ಗಂಗಾಧರಮೂರ್ತಿ, ಸಿ.ನಾಗರತ್ನಮ್ಮ, ಮುದುಗೆರೆ ನಾಗರಾಜಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.