ADVERTISEMENT

ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಆದ ಚಿಕ್ಕಬಳ್ಳಾಪುರ

ಸ್ವಯಂ ಪ್ರೇರಣೆಯಿಂದ ಮನೆಯಲ್ಲಿಯೇ ಉಳಿದ ಜನರು, ಸ್ತಬ್ಧವಾದ ನಗರ, ಪಟ್ಟಣ ಪ್ರದೇಶಗಳು

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 10:30 IST
Last Updated 5 ಜುಲೈ 2020, 10:30 IST
ನಗರದ ಬಜಾರ್ ರಸ್ತೆ ಮಳಿಗೆಗಳು ಬಾಗಿಲು ಮುಚ್ಚಿದ ಕಾರಣಕ್ಕೆ ಬಿಕೋ ಎನ್ನುತ್ತಿತ್ತು
ನಗರದ ಬಜಾರ್ ರಸ್ತೆ ಮಳಿಗೆಗಳು ಬಾಗಿಲು ಮುಚ್ಚಿದ ಕಾರಣಕ್ಕೆ ಬಿಕೋ ಎನ್ನುತ್ತಿತ್ತು   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಭಾನುವಾರದ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರ, ಪಟ್ಟಣ ಹಾಗೂ ಹೋಬಳಿ ಕೇಂದ್ರಗಳು ದಿನವಿಡೀ ಬಹುತೇಕ ಸ್ತಬ್ಧವಾಗಿದ್ದವು.

ನಗರದಲ್ಲಿ ಭಾನುವಾರ ಔಷಧಿ, ಹಾಲು ಮಾರಾಟ ಮಳಿಗೆಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲ ವಾಣಿಜ್ಯ ಚಟುವಟಿಕೆಗಳು ಸ್ತಬ್ಧಗೊಂಡಿದ್ದವು. ಆಯ್ದ ಕೆಲ ಜೀವನಾವಶ್ಯಕ ವಸ್ತುಗಳ ಮಾರಾಟಕ್ಕೆ ಅವಕಾಶವಿದ್ದರೂ ವರ್ತಕರು ತಮ್ಮ ಅಂಗಡಿಗಳನ್ನು ಬಾಗಿಲು ತೆರೆಯದೆ ಲಾಕ್‌ಡೌನ್‌ಗೆ ಸ್ಪಂದಿಸಿದರು.

ದಿನಸಿ, ಮದ್ಯದಂಗಡಿ, ಕ್ಷೌರದ ಅಂಗಡಿ, ಪ್ಲಾಸ್ಟಿಕ್‌, ಬಟ್ಟೆ, ಕಬ್ಬಿಣ, ಕಿರಾಣಿ, ಜ್ಯೂಸ್‌, ಬೇಕರಿ ಮಳಿಗೆಗಳು ಸಂಪೂರ್ಣ ಮುಚ್ಚಿದ್ದವು. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಮನೆ ಸೇರಿಕೊಂಡಿದ್ದರು. ಪರಿಣಾಮ, ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ADVERTISEMENT

ಆಟೊ, ಟ್ಯಾಕ್ಸಿಗಳು ಕೂಡ ರಸ್ತೆಗಿಳಿಯಲಿಲ್ಲ. ಬಿ.ಬಿ.ರಸ್ತೆ, ಎಂ.ಜಿ.ರಸ್ತೆ, ಬಜಾರ್ ರಸ್ತೆ, ಗಂಗಮ್ಮಗುಡಿ ರಸ್ತೆ ಹೀಗೆ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಸ್ತಬ್ಧವಾಗಿದ್ದವು. ಅಲ್ಲೊಂದು ಇಲ್ಲೊಂದು ವಾಹನಗಳು ಮಾತ್ರವೇ ಸಂಚರಿಸಿದವು. ಬಸ್‌ ನಿಲ್ದಾಣಗಳು ಭಣಗುಡುತ್ತಿದ್ದವು.

ಭಾನುವಾರ ಲಾಕ್‌ಡೌನ್‌ ಇರುವ ಬಗ್ಗೆ ಮೊದಲೇ ತಿಳಿದಿದ್ದ ನಾಗರಿಕರು ಶನಿವಾರವೇ ಸಾಮಗ್ರಿಗಳನ್ನು ಖರೀದಿ ಮಾಡಿದ್ದ‌ರಿಂದ ಭಾನುವಾರ ಜನಸಂಚಾರ ವಿರಳವಾಗಿತ್ತು. ಜನರು ಭಾನುವಾರ ಮನೆಯಲ್ಲಿಯೇ ಉಳಿದು ಕುಟುಂಬದವರೊಂದಿಗೆ ಕಾಲ ಕಳೆದರು.

ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಇದ್ದ ಕಾರಣಕ್ಕಾಗಿ ಅನೇಕರು ಅಡ್ಡ ರಸ್ತೆಗಳಲ್ಲಿ ಎಂದಿನಂತೆ ಓಡಾಡುತ್ತಿದ್ದರು. ಹಲವರು ಏರಿಯಾ, ಬಡಾವಣೆಗಳಲ್ಲಿ ಲಾಕ್‌ಡೌನ್‌ಗೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಜನರು ಸಂಚರಿಸುತ್ತಿದ್ದರು. ಯುವಕರು, ಹಿರಿಯರು ಅಲ್ಲಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.